ನವದೆಹಲಿ: ಸ್ಪೀಕರ್ ಅವರು ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್, ಜೆಡಿಎಸ್ ನ 17 ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ಗುರುವಾರವೂ ಮುಂದುವರಿದಿದ್ದು, ಇದೀಗ ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿದೆ.
ಬುಧವಾರ ಅನರ್ಹ ಶಾಸಕರ ಅರ್ಜಿಯ ವಿಚಾರಣೆ ನಡೆದಿತ್ತು. ಅನರ್ಹ ಶಾಸಕರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಸ್ಪೀಕರ್ ಕಚೇರಿ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅನರ್ಹ ಶಾಸಕರ ಡಾ.ಸುಧಾಕರ್ ಪರ ವಕೀಲ ಸುಂದರಂ ವಾದ ಮಂಡಿಸಿದ್ದರು.
ಗುರುವಾರ ಮತ್ತೆ ಮುಂದುವರಿದ ವಿಚಾರಣೆಯಲ್ಲಿ ಕಾಂಗ್ರೆಸ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದರು.
ಸರ್ಕಾರ ಬೀಳಿಸುವ ಸಂಚು ಇದು: ಕಾಂಗ್ರೆಸ್ ಪರ ವಕೀಲ ಸಿಬಲ್ ವಾದ
ಅನರ್ಹ ಶಾಸಕರು ತಾವಿನ್ನೂ ಕಾಂಗ್ರೆಸ್ ನಲ್ಲೇ ಇದ್ದೇವೆ ಎಂದು ಹೇಳುತ್ತಾರೆ. ರಾಜೀನಾಮೆ ನೀಡಿದವರು ಕಾಂಗ್ರೆಸ್ ಸಭೆಗೆ ಯಾಕೆ ಹೋಗಲಿಲ್ಲ. ವಿಶೇಷ ವಿಮಾನದಲ್ಲಿ ಮುಂಬೈಗೆ ಹೋಗಿ, ಐಶಾರಾಮಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ವಿಶೇಷ ವಿಮಾನದ ವ್ಯವಸ್ಥೆ ಮಾಡಿದವರು ಯಾರು? ಸಂತೋಷ್ ಮತ್ತು ಅಶ್ವತ್ಥ ನಾರಾಯಣ ಜತೆ ಬಹಿರಂಗವಾಗಿ ಕಾಣಿಸಿಕೊಂಡಿದ್ದರ ಅರ್ಥ ಏನು? ಈ ಎಲ್ಲದರ ಬಗ್ಗೆಯೂ ಪರಿಶೀಲಿಸಬೇಕಿದೆ ಎಂದು ಕಾಂಗ್ರೆಸ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು.
ರಮೇಶ್ ಜಾರಕಿಹೊಳೆ ಬಿಜೆಪಿ ಮುಖಂಡ ಎಸ್ ಎಂ ಕೃಷ್ಣ ಅವರನ್ನು ಭೇಟಿಯಾಗಿದ್ದಾರೆ. ಬಿಜೆಪಿ ಮುಖಂಡರ ಜತೆ ಸಭೆ ನಡೆಸಿದ್ದಾರೆ. ಇವೆಲ್ಲದಕ್ಕೂ ಸಾಕ್ಷ್ಯಗಳಿವೆ. ರಾಜೀನಾಮೆ ನೀಡುವುದಕ್ಕೂ ಒಂದು ನಿಯಮ ಇದೆ. ಅದನ್ನು ಅನುಸರಿಸಬೇಕು. ಸ್ಪೀಕರ್ ಭೇಟಿಗೂ ಮುನ್ನ ಸಮಯಾವಕಾಶ ಕೇಳಬೇಕು, ಹೇಗೆ ಬೇಕೋ ಹಾಗೆ ರಾಜೀನಾಮೆ ಕೊಡೋದಕ್ಕೆ ಆಗುವುದಿಲ್ಲ. ಇದು ಸರಕಾರ ಬೀಳಿಸುವ ಸಂಚು. ಇದನ್ನೆಲ್ಲಾ ಅನರ್ಹರ ಪರ ವಕೀಲರು ಮರೆಮಾಚುವುದು ಬೇಡ ಎಂದು ಸಿಬಲ್ ವಾದಿಸಿದರು.