Advertisement

ಭೂಮಿಯೊಳಗಿಂದ ಕೇಳುತ್ತಿದೆ ಭಾರೀ ಸದ್ದು !

12:53 AM May 06, 2020 | Sriram |

ಉಪ್ಪಿನಂಗಡಿ/ಉಡುಪಿ: ಇಲ್ಲಿಗೆ ಸನಿಹದ 34ನೇ ನೆಕ್ಕಿಲಾಡಿ ಗ್ರಾ. ಪಂ.ನ ಆದರ್ಶನಗರ ಪರಿಸರದಲ್ಲಿ ಭೂಮಿಯಡಿ ಆಗಾಗ ಭಾರೀ ನಿಗೂಢ ಶಬ್ದ ಕೇಳಿ ಬರುತ್ತಿದ್ದು, ಪರಿಸರದ ಜನತೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.

Advertisement

ಪುತ್ತೂರು- ಉಪ್ಪಿನಂಗಡಿ ರಾಜ್ಯ ಹೆದ್ದಾರಿ ದಾಟಿಕೊಂಡು ಭೂಮಿಯಡಿ ಈ ಶಬ್ದ ಮುಂದುವರಿಯುತ್ತಿದ್ದು, ಟಿಪ್ಪರ್‌ನಿಂದ ದೊಡ್ಡ ದೊಡ್ಡ ಬಂಡೆಗಳನ್ನು ಸುರಿದಂತೆ ಕೇಳಿಸುತ್ತಿದೆ. 20ರಿಂದ 30 ಸೆಕೆಂಡ್‌ ಇರುತ್ತದೆ. ದಿನಕ್ಕೆ ನಾಲ್ಕೈದು ಬಾರಿ ಶಬ್ದವಾಗುವುದು ನಮ್ಮ ಗಮನಕ್ಕೆ ಬಂದಿದ್ದು, ಮೇ 5ರಂದು ಬೆಳಗ್ಗೆ 10.15ಕ್ಕೆ ಕೂಡ ಕೇಳಿ ಬಂದಿದೆ ಎನ್ನುತ್ತಾರೆ ಸ್ಥಳೀಯರು.

ಈ ಬಗ್ಗೆ “ಉದಯವಾಣಿ’ ಯೊಂದಿಗೆ ಮಾತನಾಡಿದ ಸ್ಥಳೀಯ ನಿವಾಸಿ ಪ್ರಭಾಕರ ನಾಯಕ್‌, ಈ ಶಬ್ದ ಹಿಂದೆ ಯಾವಾಗಾದರೂ ಒಮ್ಮೆ ಕೇಳಿ ಬರುತ್ತಿತ್ತು. ಆಗ ನಾವು ಅಷ್ಟಾಗಿ ಗಮನಿಸಿರಲಿಲ್ಲ. ಆದರೆ ಈಗ ದಿನಕ್ಕೆ ನಾಲ್ಕೈದು ಭಾರಿಯಾದರೂ ಜೋರಾಗಿ ಕೇಳಿಬರುತ್ತಿದೆ. ನಮ್ಮ ಮನೆಯ ಕಾರ್‌ ಪಾರ್ಕಿಂಗ್‌ ಬಳಿ ಸದ್ದು ಜೋರಾಗಿದೆಯಲ್ಲದೆ ಭೂಮಿಯ ಕಂಪನವೂ ಅನುಭವಕ್ಕೆ ಬಂದಿದೆ. ಸುತ್ತಲಿನ ಪರಿಸರದವರಿಗೂ ಈ ಅನುಭವವಾಗಿದೆ ಎಂದಿದ್ದಾರೆ.

ವಿದ್ಯುತ್‌ ಲೈನ್‌ ಫಾಲ್ಟ್ ಇದ್ದದ್ದ ರಿಂದ ವಾರದ ಹಿಂದೆ ರಾತ್ರಿ ನಾನು ಮತ್ತು ಇನ್ನೊಬ್ಬ ಸಿಬಂದಿ ಅಕºರ್‌ ಆದರ್ಶನಗರಕ್ಕೆ ಬಂದಿದ್ದೆವು. ರಾತ್ರಿ 10ರ ಸುಮಾರಿಗೆ ಅಕºರ್‌ ಬೇರೆ ಕಡೆ ತೆರಳಿದ್ದರೆ ನಾನು ಆದರ್ಶನಗರದ ಪ್ರಯಾಣಿಕರ ತಂಗುದಾಣದ ಬಳಿ ನಿಂತಿದ್ದೆ. ಆಗ ಭಾರೀ ಸದ್ದು ಕೇಳಿದ್ದಲ್ಲದೆ, ಭೂಮಿ ಕಂಪಿಸಿದ ಅನುಭವವಾಯಿತು. ಆಗ ಸಿಡಿಲು, ಮಿಂಚು ಯಾವುದೂ ಇರಲಿಲ್ಲ. ನಾನು ಹೆದರಿ ಸಮೀಪದಲ್ಲೇ ಇರುವ ಪ್ರಭಾಕರ ಅವರ ಮನೆಯ ಬಳಿ ಓಡಿ ಬಂದೆ. ಅವರಿಗೂ ಇದೇ ಅನುಭವವಾಗಿದೆ ಎಂದು ವಿವರಿಸು ತ್ತಾರೆ ಉಪ್ಪಿನಂಗಡಿ ಮೆಸ್ಕಾಂನ ಪವರ್‌ ಮ್ಯಾನ್‌ ಸಾಬಣ್ಣ.ಈ ಪ್ರದೇಶದಲ್ಲಿ ಭೂಮಿಯ ಒಳಪದರವು ಕಲ್ಲಿನಿಂದಾವೃತವಾಗಿದೆ. ಒಂದೇ ಕಲ್ಲನ್ನು ಹಾಸಿದಂತೆ ಇದ್ದು, ಸ್ವಲ್ಪ ಮಣ್ಣು ಅಗೆದಾಗ ಗೋಚರಿಸುತ್ತದೆ. ಸುಮಾರು 50 ವರ್ಷಗಳ ಹಿಂದೆ ಇಲ್ಲಿ ಕಲ್ಲು ಗಣಿಗಾರಿಕೆಯನ್ನೂ ನಡೆಸಲಾ ಗುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ಭಯಪಡುವ ಅಗತ್ಯವಿಲ್ಲ
ಉಪ್ಪಿನಂಗಡಿ – ಗುರುವಾಯನಕೆರೆ ಮಧ್ಯೆ ಬಂದಾರು ಮತ್ತು ಪಾಣಾಜೆ ಹತ್ತಿರ ಇರ್ದೆ ಎಂಬ ಜಾಗದಲ್ಲಿ ಬಿಸಿನೀರಿನ ಬುಗ್ಗೆ ಇದೆ. ಇದು ಅತೀ ಆಳವಿದ್ದು, ಕೆಲವು ಸಂದರ್ಭಗಳಲ್ಲಿ ಭೂಮಿಯೊಳಗಿನ ಒತ್ತಡದಿಂದ ಹೀಗೆ ಶಬ್ದ ಅತಿಯಾಗಿ ಕೇಳುವ ಸಾಧ್ಯತೆಗಳಿರುತ್ತವೆ. ಇದರಿಂದ ಯಾವುದೇ ಆತಂಕ ಇಲ್ಲ. ಜನರು ಆತಂಕ ಪಡುವ ಆವಶ್ಯಕತೆಯಿಲ್ಲ.
-ಉದಯ ಶಂಕರ್‌, ಭೂಶಾಸ್ತ್ರಜ್ಞರು, ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next