ಏನೇ ತಿನ್ನಲೀ ಮೊದಲು ನಾವು ರುಚಿಯನ್ನು ಇಷ್ಟ ಪಡುತ್ತೇವೆ. ಬಳಿಕ ಆರೋಗ್ಯದ ಬಗ್ಗೆ ಯೋಚಿಸುತ್ತೇವೆ. ಆರೋಗ್ಯಕರ ಎಂದುಕೊಂಡಿರುವ ಎಲ್ಲ ಆಹಾರಗಳು ಪರಿಪೂರ್ಣವಾಗಿರುವುದಿಲ್ಲ. ಪ್ರತಿಯೊಂದರಲ್ಲೂ ಒಂದಲ್ಲ ಒಂದು ರೀತಿಯ ಕೊರತೆಗಳು ಇರುತ್ತವೆ. ಜತೆಗೆ ಒಂದಷ್ಟು ಕಶ್ಮಲಗಳೂ ದೇಹ ಸೇರುತ್ತವೆ. ಇದರಿಂದ ಆರೋಗ್ಯ, ಸೌಂದರ್ಯ ಹಾಳಾಗುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇದನ್ನು ನಿರ್ಲಕ್ಷ್ಯಸಿದರೆ ಕ್ಯಾನ್ಸರ್‌ನಂಥ ಮಾರಕ ಕಾಯಿಲೆಗೂ ಕಾರಣವಾಗುತ್ತದೆ. ಹೀಗಾಗಿ ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕಲೇಬೇಕು. ಇದಕ್ಕೆ ಕೆಲವು ಪಾನೀಯಗಳು ಹೆಚ್ಚು ಉಪಯುಕ್ತ.
ಸೇಬು, ಬೀಟ್ರೂಟ್, ಕ್ಯಾರೆಟ್‌ನೊಂದಿಗೆ ಅಗತ್ಯವಿದ್ದಷ್ಟು ನೀರು ಸೇರಿಸಿ ಜ್ಯೂಸ್ ಮಾಡಿ ಕುಡಿದರೆ ದೇಹಾರೋಗ್ಯ ವೃದ್ಧಿಸುವುದು ಮಾತ್ರವಲ್ಲ ತ್ವಚೆಯ ಕಾಂತಿಯೂ ಹೆಚ್ಚಾಗುತ್ತದೆ. ಈ ಜ್ಯೂಸ್‌ಗೆ ಸಕ್ಕರೆ ಬಳಸಬಾರದು. ಸ್ವಲ್ಪ ಜೇನು ಸೇರಿಸಿ ಕುಡಿಯಬಹುದು. ಇದು ದೇಹದಲ್ಲಿರುವ ಕಶ್ಮಲವನ್ನು ಹೊರಹಾಕುತ್ತದೆ.
ಸೌತೆಕಾಯಿ, ಪುದೀನಾ, ನಿಂಬೆ ರಸದೊಂದಿಗೆ ನೀರು ಹಾಕಿ ತಯಾರಿಸುವ ಜ್ಯೂಸ್ ಕೂಡ ದೇಹದಲ್ಲಿ ನೀರಿನಾಂಶವನ್ನು ರಕ್ಷಿಸುತ್ತದೆ. ತ್ವಚೆಯ ಆರೋಗ್ಯ
ಕಾಪಾಡುತ್ತದೆ ಮತ್ತು ಕಶ್ಮಲಗಳನ್ನು ಹೊರಹಾಕಲು ಸಹಾಯಮಾಡುತ್ತದೆ.
ಹುರಿಗಡಲೆ ದೇಹದಲ್ಲಿರುವ ಕಶ್ಮಲವನ್ನು ಹೊರಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜತೆಗೆ ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಹುರಿಗಡಲೆ ಹಿಟ್ಟಿಗೆ ಜೀರಿಗೆ ಹುಡಿ, ಸಣ್ಣಗೆ ಕತ್ತರಿಸಿದ ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ನೀರು ಸೇರಿಸಿ ಗಂಟಿಲ್ಲದಂತೆ ಕಲಸಿ ಕುಡಿಯುವುದರಿಂದ ದೇಹದಲ್ಲಿರುವ ಕಶ್ಮಲಗಳು ಹೊರಹೋಗಲು ಸಹಾಯವಾಗುವುದು.
ಹುರಿಗಡಲೆಯಲ್ಲಿ ಕಬ್ಬಿಣ, ಮ್ಯಾಂಗನೀಸ್, ಮ್ಯಾಗ್ನಿಷಿಯಂ, ಕಡಿಮೆ ಪ್ರಮಾಣದ ಸೋಡಿಯಂ ಇರುವುದರಿಂದ ಇದು ದೇಹದಲ್ಲಿರುವ ಶಕ್ತಿಯನ್ನು ವೃದ್ಧಿಸುತ್ತದೆ. ಇನ್ನು ಬೆಲ್ಲ, ಶುಂಠಿ, ನಿಂಬೆ ರಸ, ಜಾಯಿಕಾಯಿ, ನೀರು ಸೇರಿಸಿ ತಯಾರಿಸಿ ಜ್ಯೂಸ್ ಕೂಡ ದೇಹಕ್ಕೆ ಬಹಳ ಒಳ್ಳೆಯದು . ಇದು ದೇಹದಲ್ಲಿ ನೀರಿನಾಂಶವನ್ನು ಕಾಪಾಡುತ್ತದೆ. ಜತೆಗೆ ದೇಹದಲ್ಲಿರುವ ಕಶ್ಮಲವನ್ನೂ ಹೊರಹಾಕುತ್ತದೆ.