Advertisement

ಆರೋಗ್ಯದಾಯಿ ಸೂಪ್‌ಗಳು

06:00 AM Aug 03, 2018 | |

ಮಳೆಗಾಲದ ಶೀತಲತೆಯಲ್ಲಿ ಆರೋಗ್ಯವನ್ನು ಕಾಪಾಡುವ ಜೊತೆಗೆ, ರೋಗ ನಿವಾರಣೆಗೂ ರುಚಿ ರುಚಿಯಾಗಿರುವ ಬಿಸಿ ಬಿಸಿ ಸೂಪ್‌ಗ್ಳು ಇಲ್ಲಿವೆ :

Advertisement

ಈರುಳ್ಳಿ-ಬೆಳ್ಳುಳ್ಳಿ-ಆಲೂ ಸೂಪ್‌
2 ಈರುಳ್ಳಿಯನ್ನು  ಸಣ್ಣಗೆ ಹೆಚ್ಚಿ , 10-12 ಬೆಳ್ಳುಳ್ಳಿ ಎಸಳುಗಳನ್ನು ಸಿಪ್ಪೆ ತೆಗೆದು, ಸಣ್ಣಗೆ ಹೆಚ್ಚಿ , ಒಂದು ಕಾವಲಿಯಲ್ಲಿ ಸ್ವಲ್ಪ ಬೆಣ್ಣೆ ಹಾಕಿ ಹುರಿಯಬೇಕು. ತದನಂತರ ಈ ಮಿಶ್ರಣಕ್ಕೆ ಚೆನ್ನಾಗಿ ಬೆಂದ ಎರಡು ಆಲೂಗಡ್ಡೆಯನ್ನು ತುರಿದು ಬೆರೆಸಬೇಕು. ನೀರು ಸೇರಿಸಿ ಕುದಿಸಿ ಉಪ್ಪು , ಮೆಣಸಿನಕಾಳಿನ ಹುಡಿ, ಹಾಲಿನ ಕೆನೆ ಬೆರೆಸಬೇಕು. ಇದು ಮಳೆಗಾಲದಲ್ಲಿ ನೆಗಡಿ, ಕೆಮ್ಮು , ಕಫ‌ ಉಂಟಾದಾಗ ಬಿಸಿ ಬಿಸಿ ಸವಿದರೆ ರುಚಿಕರವೂ ಹೌದು, ಜೊತೆಗೆ ನೆಗಡಿ-ಕೆಮ್ಮು ನಿವಾರಕವೂ ಹೌದು.

ಟ್ಟಾಂಗಿ ಬಾರ್ಲಿ ಸೂಪ್‌
10 ಚಮಚ ಬಾರ್ಲಿ  ನಾಲ್ಕು ಗಂಟೆ ನೀರಲ್ಲಿ ನೆನೆಸಿ ತದನಂತರ ನೀರಿನಿಂದ ತೆಗೆಯಬೇಕು. 2 ಚಮಚ ಬಾರ್ಲಿಯನ್ನು  ಹುರಿದು ಹುಡಿಮಾಡಿ ಇಡಬೇಕು. ಕ್ಯಾರೆಟ್‌, ಬೀನ್ಸ್‌  ಮೊದಲಾದ 2-3 ಬಗೆಯ ತರಕಾರಿಗಳನ್ನು ಹೆಚ್ಚಿ ಬೇಯಿಸಿ, ನೀರು ಸಹಿತ ತೆಗೆದಿಡಬೇಕು. ಬಾರ್ಲಿಯನ್ನು ಚೆನ್ನಾಗಿ ಮೃದುವಾಗುವವರೆಗೆ ಬೇಯಿಸಬೇಕು.

ಒಂದು ಕಾವಲಿಯಲ್ಲಿ ಎಣ್ಣೆ ತೆಗೆದುಕೊಂಡು ಇದಕ್ಕೆ ಬಾರ್ಲಿ ಹುಡಿ ಬೆರೆಸಿ ಹುರಿಯಬೇಕು. ತದನಂತರ ಗರಮ್‌ ಮಸಾಲಾ ಅಥವಾ ಸಾಂಬಾರ್‌ ಪುಡಿ ಬೆರೆಸಬಹುದು. ಅಥವಾ ಆಮ್‌ಚೂರ್‌ ಚೂರ್ಣ, ಕಾಳುಮೆಣಸಿನ ಹುಡಿ, ಉಪ್ಪು , ಹೆಚ್ಚಿದ ಸಬ್ಬಸಿಗೆ ಸೊಪ್ಪು, ಸಣ್ಣಗೆ ಹೆಚ್ಚಿದ ಪಾಲಕ್‌ ಸೊಪ್ಪು ಬೆರೆಸಿ ಚೆನ್ನಾಗಿ ಹುರಿದು ಅದಕ್ಕೆ  ಬೇಯಿಸಿದ ತರಕಾರಿ ಹಾಗೂ ಬಾರ್ಲಿ ಬೆರೆಸಿ, ನೀರು ಸೇರಿಸಿ ಮತ್ತೆ ಕುದಿಸಬೇಕು. ಇದು ಮಲಬದ್ಧತೆ ನಿವಾರಕ.

ನಿಂಬೆರಸ-ಕೊತ್ತಂಬರಿ ಸೊಪ್ಪಿನ ಸೂಪ್‌
ಇದು ವಿಟಮಿನ್‌ “ಸಿ’ಯಿಂದ ಸೃಮದ್ಧವಾಗಿದ್ದು , ಮಳೆಗಾಲದಲ್ಲಿ ರೋಗನಿರೋಧಕತೆ ವರ್ಧಿಸಿ, ದಮ್ಮು, ಕೆಮ್ಮು ತಡೆಗಟ್ಟಲು ಸಹಾಯಕ. ಜತೆಗೆ, ಹಸಿವೆಯನ್ನೂ ಹೆಚ್ಚಿಸುತ್ತದೆ.

Advertisement

ತಯಾರಿಸುವ ವಿಧಾನ: ಕಾವಲಿಯಲ್ಲಿ ಸ್ವಲ್ಪ ಎಣ್ಣೆ ತೆಗೆದುಕೊಂಡು ಅದಕ್ಕೆ ಹಸಿಮೆಣಸಿನ ಚೂರುಗಳನ್ನು, 10-12 ಬೆಳ್ಳುಳ್ಳಿ ಎಸಳುಗಳ ಚೂರುಗಳನ್ನು ಹುರಿಯಬೇಕು. ತದನಂತರ ಕ್ಯಾಬೇಜ್‌ ಮತ್ತು ಕ್ಯಾರೆಟ್‌ ತುಂಡುಗಳನ್ನು ಸೇರಿಸಿ ಹುರಿದು ನೀರು ಬೆರೆಸಿ ಸಣ್ಣ ಉರಿಯಲ್ಲಿ ಕುದಿಸಬೇಕು. ದಪ್ಪವಾಗುತ್ತ ಬಂದಾಗ ಕತ್ತರಿಸಿದ ಕೊತ್ತಂಬರಿಸೊಪ್ಪು 1/4 ಕಪ್‌, 8-10 ಕತ್ತರಿಸಿದ ಪುದೀನಾ ಎಲೆ ಬೆರೆಸಿ ಚೆನ್ನಾಗಿ ಕಲಕಿ ಒಲೆಯಿಂದ ಕೆಳಗಿಳಿಸಬೇಕು. ತದನಂತರ 8-10 ಚಮಚ ನಿಂಬೆರಸ, ಉಪ್ಪು , ಚಿಟಿಕೆ ಸಕ್ಕರೆ, ಕಾಳುಮೆಣಸಿನ ಹುಡಿ ಬೆರೆಸಿ ಬಿಸಿ ಬಿಸಿಯಾಗಿಯೇ ಸವಿಯಬೇಕು.

ಓಟ್ಸ್‌ ಮತ್ತು ತರಕಾರಿ ಸೂಪ್‌
1 ಕಪ್‌ ಹೆಚ್ಚಿದ ತರಕಾರಿಗಳ ಮಿಶ್ರಣ (ಟೊಮ್ಯಾಟೋ, ಕ್ಯಾರೆಟ್‌, ಕ್ಯಾಬೇಜ್‌), 1 ಕಪ್‌ ಓಟ್ಸ್‌  ತೆಗೆದು ಕೊಳ್ಳಬೇಕು. ತರಕಾರಿಗಳನ್ನು ಬೇಯಿಸಿ, ತೆಗೆದಿಟ್ಟು , ತರಕಾರಿ ಬೇಯಿಸಿದ ನೀರನ್ನು ಬೇರೆಯಾಗಿ ತೆಗೆದಿರಿಸಬೇಕು.

ಒಂದು ಕಾವಲಿಯಲ್ಲಿ ಸಣ್ಣಗೆ ಹೆಚ್ಚಿದ ಒಂದು ಈರುಳ್ಳಿ ಹಾಗೂ 6 ಬೆಳ್ಳುಳ್ಳಿ ಎಸಳುಗಳನ್ನು ಸ್ವಲ್ಪ ಬೆಣ್ಣೆಯಲ್ಲಿ ಹುರಿದುಕೊಳ್ಳಬೇಕು. ತದನಂತರ ಬೇಯಿಸಿದ ತರಕಾರಿಯ ತುಂಡುಗಳನ್ನು ಹಾಕಿ ಚೆನ್ನಾಗಿ ಹುರಿಯಬೇಕು. ಬಳಿಕ ಓಟ್ಸ್‌ ಬೆರೆಸಿ 2 ನಿಮಿಷ ಮತ್ತೆ ಹುರಿಯಬೇಕು. ತದನಂತರ ತರಕಾರಿ ಕುದಿಸಿ ತೆಗೆದಿರಿಸಿದ ನೀರನ್ನು  ಹಾಕಿ, ಇನ್ನೆರಡು ಕಪ್‌ ನೀರು ಬೆರೆಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಬೇಕು. ಕೊನೆಯಲ್ಲಿ ಉಪ್ಪು, ಕಾಳುಮೆಣಸಿನ ಹುಡಿ ಹಾಕಿ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಅಲಂಕರಿಸಿ. ಒಲೆಯಿಂದ ಕೆಳಗಿಳಿಸಿದ ಬಳಿಕ ಬೌಲ್‌ನಲ್ಲಿ ಹಾಕಿ, ಸವಿಯುವ ಸಮಯದಲ್ಲಿ 2 ಚಮಚ ನಿಂಬೆರಸ ಬೆರೆಸಬೇಕು.

ಮಳೆಗಾಲದಲ್ಲಿ ಪಚನಶಕ್ತಿ ಕಡಿಮೆ ಇರುವುದರಿಂದ ವೃದ್ಧರಿಗೆ, ಜೀರ್ಣಶಕ್ತಿ ಕಡಿಮೆ ಉಳ್ಳವರಿಗೆ ಇದು ಉತ್ತಮ ಆಹಾರ. ಮಧುಮೇಹ ರೋಗಿಗಳಿಗೂ, ಬೊಜ್ಜು ಕಡಿಮೆ ಮಾಡಲು ಇದು ಉತ್ತಮ. ಮಕ್ಕಳಿಗೆ ಈ ಸೂಪ್‌ ನೀಡುವಾಗ ಇದಕ್ಕೆ ಬೂಂದಿಕಾಳು ಬೆರೆಸಿ ನೀಡಿದರೆ ರುಚಿಕರ.

ಹೆಸರುಕಾಳು-ತುಳಸೀ ಸೂಪ್‌
ಮೊದಲು ಹೆಸರುಕಾಳು 1/2 ಕಪ್‌ ನೆನೆಸಿ, ಮೊಳಕೆ ಬರಿಸಿಕೊಳ್ಳಬೇಕು. 1 ಟೊಮ್ಯಾಟೊ ಸಣ್ಣಗೆ ಹೆಚ್ಚಿ ಇಡಬೇಕು. ಒಂದು ಈರುಳ್ಳಿ ಹಾಗೂ ಆರು ಬೆಳ್ಳುಳ್ಳಿ ಎಸಳುಗಳನ್ನು ಹೆಚ್ಚಿಡಬೇಕು.

ತಯಾರಿಸುವ ವಿಧಾನ: ಕಾವಲಿಯಲ್ಲಿ ಸ್ವಲ್ಪ ಬೆಣ್ಣೆ ಅಥವಾ ತುಪ್ಪ ತೆಗೆದುಕೊಂಡು ಕತ್ತರಿಸಿದ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಹಾಕಿ ಸಣ್ಣ ಉರಿಯಲ್ಲಿ ಹುರಿಯಬೇಕು. ನಂತರ ಕತ್ತರಿಸಿದ ಟೊಮ್ಯಾಟೋ ಬೆರೆಸಿ ಹುರಿಯಬೇಕು. ತದನಂತರ ಮೊಳಕೆಬರಿಸಿದ ಹೆಸರುಕಾಳುಗಳನ್ನು ಬೇಯಿಸಿ ಅದರ ಬೇಯಿಸಿದ ನೀರಿನ ಸಹಿತ ಹಾಕಿ ಸಣ್ಣ ಉರಿಯಲ್ಲಿ ಕುದಿಸಬೇಕು. 5-10 ತುಳಸೀ ಎಲೆಗಳನ್ನು ಅರೆದು ಕೊನೆಯಲ್ಲಿ ಬೆರೆಸಿ, ಉಪ್ಪು , ಮೆಣಸಿನಕಾಳಿನ ಪುಡಿ ಬೆರೆಸಿ ಬಿಸಿ ಬಿಸಿಯಾಗಿಯೇ ಊಟದ ಸಮಯದಲ್ಲಿ ಸವಿಯಬೇಕು. ಇದು ರೋಗನಿರೋಧಕ ಶಕ್ತಿ ವರ್ಧಕ.

ಈ ಸೂಪ್‌ ಮಳೆಗಾಲದಲ್ಲಿ ನಿತ್ಯ ಸೇವನೆಗೂ ಹಿತಕರ. ಅಧಿಕ ಕ್ಯಾಲೊರಿ ಇಲ್ಲದ, ಆದರೆ  ಪೋಷಕಾಂಶಗಳನ್ನು ಹೊಂದಿರುವ ಈ ಸೂಪ್‌ಗೆ ಮೊಳಕೆಬರಿಸಿದ ಹೆಸರುಕಾಳಿನ ಬದಲು ಮೊಳಕೆಬರಿಸಿದ ಹುರುಳಿ ಬೆರೆಸಿದರೆ ಜ್ವರ, ನೆಗಡಿ, ಕೆಮ್ಮು ಇರುವವರಲ್ಲಿ ಹಿತಕರ. ಇದೇ ರೀತಿ ಮೊಳಕೆ ಬರಿಸಿದ ಕಡಲೆಕಾಳು, ಬಟಾಣಿ ಕಾಳುಗಳ ಮಿಶ್ರಣ ಹಾಗೂ ತುಳಸೀ ಎಲೆ ಬೆರೆಸಿ ಸೂಪ್‌ ತಯಾರಿಸಿದರೆ, ದಿನಕ್ಕೊಂದು ರುಚಿ, ಪೌಷ್ಟಿಕ ಜೊತೆಗೆ ಆರೋಗ್ಯದಾಯಿ ಸೂಪ್‌ ಕೂಡ ಆಗಿದೆ.

ಪುದೀನಾ ಇಷ್ಟಪಡುವವರು ತುಳಸಿಯ ಬದಲಿಗೆ ಅಥವಾ ತುಳಸೀ ಎಲೆಯ ಜೊತೆಗೆ ಪುದೀನಾ ಎಲೆಗಳನ್ನು ಅರೆದು ಸೇರಿಸಿದರೆ ಸುವಾಸನೆಯ, ವಿಶಿಷ್ಟ ಜೊತೆಗೆ ಅಜೀರ್ಣ, ಅಗ್ನಿಮಾಂದ್ಯವನ್ನು ನಿವಾರಿಸುತ್ತದೆ. ಪಚನಶಕ್ತಿ ವರ್ಧಕ ಸೂಪ್‌ ಇದಾಗಿದೆ. ಹೀಗೆ ಮಳೆಗಾಲದಲ್ಲಿ ವಿವಿಧ ಸೂಪ್‌ಗ್ಳಿಂದ ಆರೋಗ್ಯ ರಕ್ಷಣೆ ಸಾಧ್ಯ.

ಡಾ. ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next