Advertisement
ವಯೋವೃದ್ಧರಿಗೆ ವಿಶೇಷ ಆರೈಕೆಗಳನ್ನು ಒದಗಿಸುವ ವಿಚಾರ ಬಂದಾಗೆಲ್ಲ, ಅವರು ಎಷ್ಟೆಂದರೂ ಮುಪ್ಪಿನವರು, ಅವರ ಬಗ್ಗೆ ಅಷ್ಟೆಲ್ಲ ಕಾಳಜಿ ವಹಿಸುವುದಕ್ಕೇನಿದೆ. ಮುಪ್ಪಿನಲ್ಲಿ ಅನಾರೋಗ್ಯ ಸಹಜವಲ್ಲವೆ ಎಂಬ ಕೊಂಕು ನುಡಿ ಕೇಳಿಬರುತ್ತದೆ.
Related Articles
Advertisement
ಸಮಗ್ರ ಜರಾರೋಗ್ಯ ವಿಶ್ಲೇಷಣೆಯು ಅಲ್ಪಕಾಲಿಕ ಮೃತ್ಯು ಪ್ರಮಾಣವನ್ನು ಕಡಿಮೆ ಮಾಡಿ, ವಯೋವೃದ್ಧರು ಪರಾವಲಂಬಿಗಳಾಗುವುದನ್ನು ಅಥವಾ ಹಾಸಿಗೆ ಹಿಡಿಯುವುದನ್ನು ತಡೆಯುತ್ತದೆ ಹಾಗೂ ಅವರು ಸಾಧ್ಯವಾದಷ್ಟು ದೀರ್ಘ ಕಾಲ ಕಾರ್ಯಚಟುವಟಿಕೆಗಳಲ್ಲಿ ಸ್ವಾವಲಂಬಿಗಳಾಗಿ ಬದುಕುವುದಕ್ಕೆ ಸಹಾಯ ಮಾಡುತ್ತದೆ ಎಂಬುದಾಗಿ ಅಧ್ಯಯನಗಳು ಬಹಳ ಹಿಂದೆಯೇ ಹೇಳಿವೆ. ಸಮಗ್ರ ಜರಾರೋಗ್ಯ ವಿಶ್ಲೇಷಣೆಯ ಸಂದರ್ಭದಲ್ಲಿ ಮುಪ್ಪಿನ ಅನಾರೋಗ್ಯಗಳು ಮತ್ತು ಆರೈಕೆಯಲ್ಲಿ ಪರಿಣತರಾದ ಬಹು ವೈದ್ಯಕೀಯ ವಿಭಾಗಗಳ ತಜ್ಞ ವೈದ್ಯರು ರೋಗಿಯ ಸಮಗ್ರವಾದ ಮತ್ತು ವಿಸ್ತೃತವಾದ ವಿಶ್ಲೇಷಣೆಯನ್ನು ನಡೆಸುತ್ತಾರೆ.
ಈ ಬಹು ವೈದ್ಯಕೀಯ ವಿಭಾಗಗಳ ತಂಡದಲ್ಲಿ ಸಾಮಾನ್ಯವಾಗಿ ಸಾಮಾಜಿಕ ಕಾರ್ಯಕರ್ತರು, ಫಿಸಿಯೋಥೆರಪಿಸ್ಟ್‌ಗಳು, ಜರಾರೋಗ್ಯ ಶಾಸ್ತ್ರ ನಿಪುಣ ವೈದ್ಯರ ಜತೆಗೆ ಕೆಲಸ ಮಾಡುವ ದಾದಿಯರು ಸೇರಿರುತ್ತಾರೆ. ಇವರು ಹಿರಿಯರಲ್ಲಿ ಸಾಮಾನ್ಯವಾದ ಸ್ಮರಣ ಶಕ್ತಿ ನಷ್ಟ, ಖನ್ನತೆ, ಬೀಳುವಿಕೆ, ಸ್ವನಿಯಂತ್ರಣ ನಷ್ಟ, ಮಲಬದ್ಧತೆ ಮತ್ತು ನಿದ್ರಾಹೀನತೆಯಂತಹ ಅನಾರೋಗ್ಯಗಳನ್ನು ಗುರುತಿಸುತ್ತಾರೆ. ಈ ತಂಡವು ರೋಗಿಯನ್ನು ಸಾಧ್ಯವಾದಷ್ಟು ದೀರ್ಘಕಾಲ ಕಾರ್ಯಚಟುವಟಿಕೆಗಳಲ್ಲಿ ಸ್ವತಂತ್ರವಾಗಿ ಇರಿಸಲು ಉದ್ದೇಶಿತ ಆರೈಕೆ ಯೋಜನೆಯನ್ನು ರೂಪಿಸಿ ಒದಗಿಸುತ್ತದೆ.
ಒಂದು ಉದಾಹರಣೆಯನ್ನು ಗಮನಿಸೋಣ. 75 ವರ್ಷ ವಯಸ್ಸಿನ ಒಬ್ಬರು ವೃದ್ಧರು ಆಗಾಗ ಹೈಪೊಗ್ಲೆ„ಸೇಮಿಯಾ, ಬೀಳುವಿಕೆ, ಗಾಯ, ಪ್ರಜ್ಞೆ ತಪ್ಪಿದ್ದು ಹೀಗೆ ಹಲವು ಸಮಸ್ಯೆಗಳಿಂದ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಾಗುತ್ತಿದ್ದರು. ಇದು ಮೂರ್ನಾಲ್ಕು ಬಾರಿ ಸಂಭವಿಸಿದ ಬಳಿಕ ಅವರನ್ನು ಜರಾರೋಗ್ಯ ಶಾಸ್ತ್ರ ವಿಶ್ಲೇಷಣೆಗೆ ಶಿಫಾರಸು ಮಾಡಲಾಯಿತು. ವಿಶ್ಲೇಷಣೆಯ ಸಂದರ್ಭದಲ್ಲಿ ಅವರಿಗೆ ಸ್ಮರಣ ಶಕ್ತಿ ನಷ್ಟವಾಗಿರುವುದು ಹಾಗೂ ಇದರಿಂದಾಗಿ ಅವರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಔಷಧಗಳನ್ನು ತಪ್ಪಾಗಿ ಬದಲಿಸಿ ತೆಗೆದುಕೊಳ್ಳುತ್ತಿದ್ದುದು, ಕೆಲವೊಮ್ಮೆ ಒಂದೇ ಔಷಧದ ಹೆಚ್ಚು ಡೋಸ್ ತೆಗೆದುಕೊಳ್ಳುತ್ತಿದ್ದದ್ದು ಗೊತ್ತಾಯಿತು.
ಇದರಿಂದಾಗಿ ಪ್ರತೀ ಬಾರಿ ಆಸ್ಪತ್ರೆಗೆ ದಾಖಲಾದಾಗ ಹೆಚ್ಚುವರಿ ಔಷಧಗಳನ್ನು ಶಿಫಾರಸು ಮಾಡಲಾಗುತ್ತಿತ್ತು. ಅವರು ಮತ್ತೆ ಅವುಗಳನ್ನು ತಪ್ಪಾಗಿ ಅಥವಾ ಹೆಚ್ಚುವರಿ ಡೋಸ್‌ನಲ್ಲಿ ತೆಗೆದುಕೊಳ್ಳುತ್ತಿದ್ದರು, ಇದು ಮತ್ತೆ ಆಸ್ಪತ್ರೆ ದಾಖಲಾತಿಗೆ ಕಾರಣವಾಗುತ್ತಿತ್ತು. ಜರಾರೋಗ್ಯ ಶಾಸ್ತ್ರಜ್ಞ ತಂಡವು ಆ ಬಳಿಕ ಆ ಹಿರಿಯರ ಪತ್ನಿಯನ್ನು ಅವರ ಆರೈಕೆಯ ಯೋಜನೆಯಲ್ಲಿ ಸೇರಿಸಿಕೊಂಡಿತು ಮತ್ತು ಆಕೆಗೆ ಪತಿಯ ಔಷಧಗಳನ್ನು ನಿಭಾಯಿಸುವುದು ಹೇಗೆಂಬುದನ್ನು ವಿವರಿಸಲಾಯಿತು. ಆದರೂ ಸಮಸ್ಯೆ ಮರುಕಳಿಸುತ್ತಿರುವುದು ಕೆಲವು ತಿಂಗಳುಗಳ ಅನಂತರ ಗೊತ್ತಾಯಿತು. ಆ ಮಹಿಳೆಯೂ ಅದೇ ಜರಾರೋಗ್ಯ ಶಾಸ್ತ್ರಜ್ಞರ ತಂಡದಿಂದ ಚಿಕಿತ್ಸೆಗೆ ಒಳಪಟ್ಟುದರಿಂದ ಆಕೆಯೂ ಡಿಮೆನ್ಶಿಯಾಕ್ಕೆ ತುತ್ತಾಗಿರುವುದು ತಿಳಿದುಬಂತು. ಆ ಬಳಿಕ ಸಾಮಾಜಿಕ ಕಾರ್ಯ ಕರ್ತರು ಅವರಿಬ್ಬರ ಕುಟುಂಬದ ಜತೆಗೆ ಸಮಾಲೋಚನೆ ನಡೆಸಿ ಪತಿ, ಪತ್ನಿ ಇಬ್ಬರಿಗೂ ಔಷಧಗಳನ್ನು ಸರಿಯಾಗಿ ನೀಡುವುದಕ್ಕೆ ತಕ್ಕ ವ್ಯವಸ್ಥೆಗಳನ್ನು ರೂಪಿಸಿದರು. ಫಲಿತಾಂಶವಾಗಿ ಅನೇಕ ಔಷಧಗಳನ್ನು ಕಡಿಮೆ ಮಾಡುವುದಕ್ಕೆ ಸಾಧ್ಯವಾಯಿತು ಹಾಗೂ ಅವರಿಬ್ಬರು ಪದೇ ಪದೆ ಆಸ್ಪತ್ರೆಗೆ ದಾಖಲಾಗುವುದು ಕಡಿಮೆಯಾಯಿತು.
ಜರಾರೋಗ್ಯ ಶಾಸ್ತ್ರದಲ್ಲಿ ಪ್ರತೀ ರೋಗಿಯನ್ನೂ ವಿಶಿಷ್ಟ ಆರೋಗ್ಯ ಸೇವಾ ಅಗತ್ಯಗಳನ್ನು ಹೊಂದಿರುವ ವಿಶಿಷ್ಟ ವ್ಯಕ್ತಿಯಾಗಿ ಪರಿಗಣಿಸಲಾಗುತ್ತದೆ ಹಾಗೂ ಆಯಾ ರೋಗಿಯ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ನಿಭಾಯಿಸುವ ಉದ್ದೇಶದ ನಿರ್ದಿಷ್ಟ ಆರೈಕೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ.
ಬಹುಶಿಸ್ತೀಯ ತಂಡದಿಂದ ಸಮಗ್ರ ವಿಶ್ಲೇಷಣೆಗೆ ಒಳಪಡುವ ರೋಗಿಗಳು ಬೀಳುವುದು ಕಡಿಮೆ, ಔಷಧ ತೆಗೆದುಕೊಳ್ಳುವುದು ಕಡಿಮೆಯಾಗುತ್ತದೆ, ಕಡಿಮೆ ಬಾರಿ ಆಸ್ಪತ್ರೆಗೆ ದಾಖಲಾಗುತ್ತಾರೆ, ಲಸಿಕೆಗಳನ್ನು ಪಡೆಯುತ್ತಾರೆ ಹಾಗೂ ಆರೋಗ್ಯ ಸಂಬಂಧಿ ಹೆಚ್ಚು ಉತ್ತಮ ಜೀವನ ಗುಣಮಟ್ಟವನ್ನು ನಡೆಸುತ್ತಾರೆ.
ಒಂದು ಬಾರಿ ನಮ್ಮ ಹೊರರೋಗಿ ವಿಭಾಗಕ್ಕೆ ವೃದ್ಧರೊಬ್ಬರು ಬಂದಿದ್ದರು. ಸಮಾಲೋಚನೆಯ ಬಳಿಕ ಅವರು ಹೇಳಿದರು, “”ಡಾಕ್ಟರ್, ಹೇಗಿದ್ದರೂ ನಾನು ಸಾಯುತ್ತೇನೆ, ಪ್ರಾಯಃ ಸ್ವಲ್ಪ ಬೇಗನೇ ಸಾಯಬಹುದು. ನೀವು ಚಿಂತಿಸುವುದೇಕೆ?”
ಯಾರಾದರೂ ಏಕೆ ಚಿಂತಿಸಬೇಕು! ಆದರೆ ಇಂತಹ ಪ್ರತೀ ವಯೋವೃದ್ಧರ ಮನದ ಆಳದಲ್ಲೂ ಎಲ್ಲೇ ಸಾಯಲಿ, ಸಾವು ಯಾವತ್ತೇ ಸಂಭವಿಸಲಿ; ಕೊನೆಯ ಘಳಿಗೆಯವರೆಗೂ ತಾನು ಪರಾವಲಂಬಿಯಾಗಬಾರದು, ಸ್ವತಂತ್ರನಾಗಿರಬೇಕು ಎಂಬ ಒಂದು ಬಯಕೆ ಇದ್ದೇ ಇರುತ್ತದೆ. ಸಮಗ್ರ ಜರಾರೋಗ್ಯ ಶಾಸ್ತ್ರ ವಿಶ್ಲೇಷಣೆಯು ನೀವು ಬದುಕಿರುವಷ್ಟು ಕಾಲ ನಿಮ್ಮ ಜೀವನದ ನಿಯಂತ್ರಣ ನಿಮ್ಮ ಕೈಯಲ್ಲೇ ಇರುವುದಕ್ಕೆ ಸಹಾಯ ಮಾಡುತ್ತದೆ.
ಡಾ| ಶೀತಲ್‌ರಾಜ್, ಅಸಿಸ್ಟೆಂಟ್ ಪ್ರೊಫೆಸರ್,
ಮೆಡಿಸಿನ್ ವಿಭಾಗ,
ಕೆಎಂಸಿ ಆಸ್ಪತ್ರೆ, ಮಂಗಳೂರು.