Advertisement

ಊಟದ ಬದಲು ಪೌಷ್ಟಿಕ ಆಹಾರ ಕಿಟ್‌ಗೆ ಬೇಡಿಕೆ

04:03 PM Sep 30, 2018 | |

ಮಂಗಳೂರು: ಅಂಗನವಾಡಿ ಮೂಲಕ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮಧ್ಯಾಹ್ನ ವೇಳೆ ಪೌಷ್ಟಿಕ ಬಿಸಿಯೂಟ ನೀಡುವ “ಮಾತೃಪೂರ್ಣ’ ಯೋಜನೆಗೆ ಕರಾವಳಿಯಲ್ಲಿ ನೀರಸ ಸ್ಪಂದನೆ ವ್ಯಕ್ತವಾಗಿದೆ. ಊಟದ ಬದಲು ಪೌಷ್ಟಿಕ ಆಹಾರದ ಕಿಟ್‌ ನೀಡಬೇಕು ಎಂಬ ಆಗ್ರಹವಿದೆ.  

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದಡಿ ಅಂಗನವಾಡಿ ಕೇಂದ್ರದಲ್ಲಿಯೇ ಪೌಷ್ಟಿಕ ಅಡುಗೆ ತಯಾರಿಸಿ, ಮಧ್ಯಾಹ್ನ ಉಣಬಡಿಸುವುದು ಮಾತೃಪೂರ್ಣ ಯೋಜನೆ. ಆಹಾರವನ್ನು ಗರ್ಭಿಣಿಯರು ಹಾಗೂ ಬಾಣಂತಿಯರು ನಿತ್ಯ ಅಂಗನವಾಡಿಗೆ ಬಂದು ಸೇವಿಸಬೇಕು.  2017ರ ಅ. 2ರಿಂದ ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಈ ಯೋಜನೆ ಅನುಷ್ಠಾನಗೊಂಡಿತ್ತು.

ಯೋಜನೆಯಡಿ ನೀಡುವ ಊಟದಲ್ಲಿ  ಅನ್ನ, ಸಾಂಬಾರು, ಪಲ್ಯದ ಜತೆಗೆ ಬೇಯಿಸಿದ ಮೊಟ್ಟೆ ಮತ್ತು 200 ಮಿ.ಮೀ. ಹಾಲು ಹಾಗೂ ನೆಲಗಡಲೆ ಚಿಕ್ಕಿ ಒಳಗೊಂಡಿದೆ. ತಿಂಗಳಿಗೆ 25 ದಿನಗಳಂತೆ ಮಗುವಿಗೆ 2 ವರ್ಷ ಪೂರ್ಣಗೊಳ್ಳುವ ತನಕ ಆಹಾರ ನೀಡಲಾಗುತ್ತದೆ. ಮೊಟ್ಟೆ ತಿನ್ನದವರಿಗೆ ಮೊಳಕೆ ಬರಿಸಿದ ಕಾಳು ನೀಡಲಾಗುತ್ತದೆ.

ಇ¨ರಿಂದಾಗಿ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ದಿನಕ್ಕೆ ಬೇಕಾಗುವ ಶೇ. 40-45 ಪ್ರೊಟೀನ್‌, ಕ್ಯಾಲ್ಸಿಯಂ ಲಭ್ಯವಾಗುತ್ತದೆ. ಹೆರಿಗೆ ಸಮಯದಲ್ಲಿ ತಾಯಂದಿರು ಹಾಗೂ ಶಿಶು ಮರಣ ತಡೆಗಟ್ಟುವುದು, ರಕ್ತಹೀನತೆ ತಡೆ, ಆರೋಗ್ಯ ವೃದ್ಧಿ ಹಾಗೂ ಕಡಿಮೆ ತೂಕದ ಶಿಶುಗಳ ಜನನ ನಿಯಂತ್ರಣ ಈ ಯೋಜನೆಯ ಉದ್ದೇಶ.

ಕಿಟ್‌ ಮಾದರಿ ವಿತರಣೆಗೆ ಕೋರಿಕೆ 
ಪೌಷ್ಟಿಕ ಆಹಾರವನ್ನು ಹಿಂದೆ ಇದ್ದಂತೆ ಕಿಟ್‌ ರೂಪದಲ್ಲಿ ಪೌಷ್ಟಿಕ ಆಹಾರ ಒದಗಿಸಬೇಕು ಎಂಬ ಅಂಶವನ್ನು ಇಲಾಖೆಯ ಗಮನಕ್ಕೆ ತರಲಾಗಿದೆ. ಈ ಹಿಂದೆ ಅಕ್ಕಿ, ಗೋಧಿ, ಕಾಳು, ಬೆಲ್ಲ ಮುಂತಾದ ಪೌಷ್ಟಿಕ ಪದಾರ್ಥಗಳ ತಿಂಗಳ ಕಿಟ್‌ ನೀಡಲಾಗುತ್ತಿತ್ತು. ಸಚಿವೆ ಜಯಮಾಲಾ ಇತ್ತೀಚೆಗೆ ದ. ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನ ಸಭೆ ನಡೆಸಿದ ಸಂದರ್ಭದಲ್ಲಿ ಅವಶ್ಯ ಬದಲಾವಣೆಗಳ ಬಗ್ಗೆ ಮನವರಿಕೆ ಮಾಡಲಾಗಿತ್ತು. ಸಚಿವೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. 

Advertisement

ಸ್ಪಂದನೆ ಯಾಕಿಲ್ಲ? 
ಕರಾವಳಿಯಲ್ಲಿ ಅಂಗನವಾಡಿ ಮನೆಗಳಿಂದ ದೂರವಿದ್ದು, ಗರ್ಭಿಣಿಯರು, ತಾಯಂದಿರು ಮಧ್ಯಾಹ್ನ ಊಟಕ್ಕೆ ಬರುವುದು ಕಷ್ಟ ಸಾಧ್ಯ. ಇದರೊಂದಿಗೆ ಅಂಗನವಾಡಿಗೆ ಹೋಗಿ ಊಟ ಮಾಡುವ ಬಗ್ಗೆ ಸಮಾಜದಲ್ಲಿ ಅಷ್ಟೊಂದು ಒಲವು ವ್ಯಕ್ತವಾಗಿಲ್ಲ. ಈ ಕಾರಣ ಆಹಾರ ಸ್ವೀಕರಿಸಲು ಬರುವವರ ಸಂಖ್ಯೆ ತೀರ ಕಡಿಮೆಯಿದೆ.

ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ  ಮಾತೃಪೂರ್ಣ ಯೋಜನೆ ಸಾಧನೆ ಕಡಿಮೆ ಇದೆ. ಅಂಗನವಾಡಿಗಳಿಗೆ ಬರಲು ಸಾಧ್ಯವಾಗದ ಬಗ್ಗೆ ಮಾಹಿತಿ ನೀಡಿದರೆ ಮನೆಗಳಿಗೆ ಊಟ ಒದಗಿಸಲು ವ್ಯವಸ್ಥೆ ಮಾಡಲಾಗುವುದು. ಇದೂ ಸಾಕಾಗದಿದ್ದರೆ ಕಿಟ್‌ ನೀಡಲಾಗುವುದು. ಒಟ್ಟಾರೆ ಸರಕಾರದ ಉದ್ದೇಶ ಈಡೇರಬೇಕಿದೆ.
-ಡಾ| ಜಯಮಾಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next