Advertisement

ದ.ಕ.: ಶೀಘ್ರ ಹೆಲ್ತ್‌ ಟೂರಿಸಂ ಯೋಜನೆ ಅನುಷ್ಠಾನ

11:10 AM Jul 25, 2017 | Karthik A |

ದೇಶದಲ್ಲಿಯೇ ಮೊದಲ ಜಿಲ್ಲೆಯಾಗಿ ದ.ಕ.ದಲ್ಲಿ ಜಾರಿಗೆ ಸರ್ವ ಸಿದ್ಧತೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ, ಅದರಲ್ಲಿಯೂ ಮುಖ್ಯವಾಗಿ ಮಂಗಳೂರು ನಗರವನ್ನು ದೇಶದ ಮೊದಲ ಹೆಲ್ತ್‌ ಟೂರಿಸಂ ಹಬ್‌ (ವೈದ್ಯಕೀಯ ಪ್ರವಾಸೋದ್ಯಮ ಕೇಂದ್ರ) ಆಗಿ ಅಭಿವೃದ್ಧಿ ಪಡಿಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಅನುಷ್ಠಾನ ಸಂಬಂಧ ಈಗ ಪೂರ್ವಭಾವಿ ತಯಾರಿ ಆರಂಭಗೊಂಡಿದೆ. ಗಮನಾರ್ಹ ಅಂಶವೆಂದರೆ, ಈ ಯೋಜನೆ ಅನುಷ್ಠಾನಗೊಂಡರೆ ದಕ್ಷಿಣ ಕನ್ನಡ ಜಿಲ್ಲೆಗೆ ವಾರ್ಷಿಕ 3,000 ಕೋ.ರೂ. ಗೂ ಅಧಿಕ ಆದಾಯ ಹರಿದುಬರಲಿದ್ದು, ಸುಮಾರು 30,000ಕ್ಕೂ ಅಧಿಕ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

Advertisement

ಮಂಗಳೂರು ನಗರವನ್ನು ಹೆಲ್ತ್‌ ಟೂರಿಸಂ ಸಿಟಿಯಾಗಿ ರೂಪಿಸಲು ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ವ್ಯೂಹಾತ್ಮಕ ಯೋಜನೆಗಳನ್ನು ಸಿದ್ಧಪಡಿಸಿ ಅನುಭವ ಹೊಂದಿರುವ ಹಾಗೂ ಹೆಲ್ತ್‌ ಟೂರಿಸಂ ಬಗ್ಗೆ ಪರಿಣತಿ ಹೊಂದಿರುವ ಮಂಗಳೂರು ಮೂಲದ ಮೈಂಡ್‌ಫುಲ್‌ ಕನ್ಸಲ್ಟಿಂಗ್‌ ಸಂಸ್ಥೆಯು ಈಗಾಗಲೇ ಮಾದರಿಯೊಂದನ್ನು ಸಿದ್ಧಪಡಿಸಿದ್ದು ಕೇಂದ್ರ ಸರಕಾರದ ನೀತಿ ಆಯೋಗಕ್ಕೆ ಸಲ್ಲಿಸಿದೆ. ನೀತಿ ಆಯೋಗದ ಸಿಇಒ ಅಮಿತ್‌ಕಾಂತ್‌ ಅವರು ಕೂಡ ಈ ಬಗ್ಗೆ ಆಸಕ್ತಿ ತೋರಿಸಿದ್ದು, ಸದ್ಯದಲ್ಲೇ ಮಂಗಳೂರು ಹೆಲ್ತ್‌ ಟೂರಿಸಂ ಯೋಜನೆ ಅನುಷ್ಠಾನ ಕುರಿತಂತೆ ಇನ್ನೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆಯಿದೆ. 

ಮಂಗಳೂರನ್ನು ಹೆಲ್ತ್‌ ಟೂರಿಸಂ ಸಿಟಿಯಾಗಿ ಪರಿವರ್ತಿಸುವಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಹೆಚ್ಚಿನ ಮುತುವರ್ಜಿ ವಹಿಸಿದ್ದು, ಈಗಾಗಲೇ ಈ ಬಗ್ಗೆ ಅವರು ನೀತಿ ಆಯೋಗ ಹಾಗೂ ಸಂಬಂದಪಟ್ಟ ಸಚಿವಾಲಯಗಳ ಜತೆಗೆ ಚರ್ಚೆ ನಡೆಸುತ್ತಿದ್ದಾರೆ. ಶಾಸಕ ಜೆ.ಆರ್‌. ಲೋಬೋ ಸೇರಿದಂತೆ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌ ಹಾಗೂ ವಿವಿಧ ಸಂಭಾವ್ಯ ಭಾಗೀದಾರಿ ಸಂಸ್ಥೆಗಳಾದ ಪ್ರತಿಷ್ಠಿತ ಆಸ್ಪತ್ರೆಗಳು, ಅತಿಥ್ಯ (ಹೊಟೇಲ್‌) ಸಂಸ್ಥೆಗಳ ಜತೆಯೂ ಮೈಂಡ್‌ಫುಲ್‌ ಕನ್ಸಲ್ಟಿಂಗ್‌ ಸಂಸ್ಥೆಯವರು ಚರ್ಚೆ ನಡೆಸಿದ್ದಾರೆ. 

ಮಂಗಳೂರು ಸೂಕ್ತ ಸ್ಥಳ
ದೇಶದಲ್ಲಿ ಹೆಲ್ತ್‌ ಟೂರಿಸಂಗೆ ಮಂಗಳೂರು ಅತ್ಯಂತ ಸೂಕ್ತ ತಾಣವಾಗಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಮಂಗಳೂರು ನಗರ ಗುರುತಿಸಿಕೊಂಡಿದೆ. ವೈದ್ಯಕೀಯ ಶಿಕ್ಷಣದಲ್ಲಿ 7 ವೈದ್ಯಕೀಯ ಕಾಲೇಜುಗಳು, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳು ಹಾಗೂ ಐದು ದಂತ ವೈದ್ಯಕೀಯ ಕಾಲೇಜು, 100ಕ್ಕೂ ಅಧಿಕ ಅರೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಮಂಗಳೂರಿನಲ್ಲಿವೆ. ದೇಶದ ವಿವಿಧೆಡೆಗಳಿಂದ ಹಾಗೂ ಏಷ್ಯಾ ಹಾಗೂ ಆಫ್ರಿಕಾ ದೇಶಗಳಿಂದ ರೋಗಿಗಳು ಮಂಗಳೂರಿಗೆ ಈಗಾಗಲೇ ಚಿಕಿತ್ಸೆಗೆ ಆಗಮಿಸುತ್ತಿ ದ್ದಾರೆ. ಇನ್ನು ಚಿಕಿತ್ಸೆಗೆ ಆಗಮಿಸುವುದಕ್ಕೆ ವಿಮಾನ, ರೈಲು ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಅತ್ಯುತ್ತಮ ಸಂಪರ್ಕ ಸೌಕರ್ಯಗಳಿವೆ.

ನಮ್ಮಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇನ್ನೊಂದೆಡೆ, ಮಂಗಳೂರು ಸ್ಮಾರ್ಟ್‌ಸಿಟಿಗೆ ಆಯ್ಕೆಯಾಗಿದ್ದು ದೇಶದ 13ನೇ ವಾಣಿಜ್ಯ ಕೇಂದ್ರವಾಗಿ ಪರಿಗಣಿಸಲ್ಪಟ್ಟಿದೆ. ಬಹುತೇಕ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಸೌಲಭ್ಯ ಮತ್ತು ತಜ್ಞರು ನಮ್ಮಲ್ಲಿದ್ದಾರೆ. ಅದುದರಿಂದ ಮಂಗಳೂರು ಎಲ್ಲ ರೀತಿಯಲ್ಲೂ ಹೆಲ್ತ್‌ ಟೂರಿಸಂ ಕೇಂದ್ರವಾಗಿ ಗುರುತಿಸಲು ಅರ್ಹತೆ ಹೊಂದಿದೆ ಎಂಬುದನ್ನು ಮಾದರಿಯಲ್ಲಿ ವಿವರಿಸಲಾಗಿದೆ.

Advertisement

30,000ಕ್ಕೂ ಅಧಿಕ ಉದ್ಯೋಗಾವಕಾಶ
ದ.ಕ.ವನ್ನು ಹೆಲ್ತ್‌ ಟೂರಿಸಂ ತಾಣವಾಗಿ ಅಭಿವೃದ್ಧಿಪಡಿಸುವುದರಿಂದ 2020 ವೇಳೆಗೆ ಈ ಕ್ಷೇತ್ರದಿಂದ 3049 ಕೋ.ರೋ. ಆದಾಯ ಸೃಷ್ಟಿಯಾಗಲಿದೆ ಹಾಗೂ 30,500 ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಸುಮಾರು 2345 ಕೋ.ರೂ. ಅಂತಾರಾಷ್ಟ್ರೀಯವಾಗಿ ಹಾಗೂ 704 ಕೋ.ರೂ. ಅಂತರಿಕವಾಗಿ ಲಭಿಸಲಿದೆ ಎಂದು ಲೆಕ್ಕಚಾರ ಮಾಡಲಾಗಿದೆ. ಪ್ರಸ್ತುತ ವಾರ್ಷಿಕವಾಗಿ ಸುಮಾರು 6 ಲಕ್ಷ ಮಂದಿ ವಿದೇಶದಿಂದ ಭಾರತಕ್ಕೆ ಆಗಮಿಸುತ್ತಿದ್ದು ಇದು 2020ರ ವೇಳೆಗೆ ಸುಮಾರು 10 ಲಕ್ಷಕ್ಕೆ ಏರಿಕೆಯಾಗಲಿದೆ. ಇದರಲ್ಲಿ ಶೇ. 5ರಷ್ಟು ಮಂದಿಯನ್ನು ಮಂಗಳೂರಿಗೆ ಆಕರ್ಷಿಸಿದರೆ ವಾರ್ಷಿಕ ಸುಮಾರು 5ರಿಂದ 6 ಸಾವಿರ ಮಂದಿ ಆಗಮಿಸುತ್ತಾರೆ ಎಂದು ಅಂದಾಜಿಸಲಾಗಿದೆ. ವಿದೇಶಗಳಿಂದ ರೋಗಿಗಳು ಆಗಮಿಸಿದಾಗ ಅವರೊಂದಿಗೆ ಬರುವವರಿಗೆ ಹೊಟೇಲ್‌, ವಿಮಾನ ನಿಲ್ದಾಣದಿಂದ ನಗರಕ್ಕೆ ಸಾರಿಗೆ ಸೌಲಭ್ಯ, ಮಾರ್ಗದರ್ಶಿಗಳು ಸೇರಿದಂತೆ ಪೂರಕ ಕ್ಷೇತ್ರಗಳು ಅಭಿವೃದ್ಧಿಯಾಗುತ್ತವೆ.

ಹೆಲ್ತ್‌ಟೂರಿಸಂನ ಭಾಗಿಧಾರಿ ಕ್ಷೇತ್ರಗಳು
ಆಸ್ಪತ್ರೆಗಳು, ಆರೋಗ್ಯ ಕನ್ಸಲ್ಟೆಂಟ್‌ಗಳು, ಆರೋಗ್ಯ ಕಂಪೆನಿಗಳು, ವೈದ್ಯಕೀಯ ಶಿಕ್ಷಣ ಸಂಸ್ಥೆಗಳು,ಆತಿಥ್ಯ ಕ್ಷೇತ್ರದ ಹೊಟೇಲ್ಸ್‌, ರೆಸ್ಟೋರೆಂಟ್‌, ಟ್ರಾವೆಲ್‌ ಹಾಗೂ ಟೂರಿಸಂ ಕ್ಷೇತ್ರದ ಏರ್‌ಲೈನ್ಸ್‌ಗಳು, ಟ್ರಾವೆಲ್‌ ಏಜೆಂಟ್‌, ಟೂರ್‌ ಮ್ಯಾನೇಜ್‌ಮೆಂಟ್‌, ನಗರಾಡಳಿತ ಸಂಸ್ಥೆ ಮಹಾನಗರ ಪಾಲಿಕೆ, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಕೇಂದ್ರ ಮತ್ತು ರಾಜ್ಯ ಸರಕಾರದ ಆರೋಗ್ಯ, ಪ್ರವಾಸೋದ್ಯಮ, ನಗರಾಭಿವೃದ್ಧಿ, ವಿದೇಶಾಂಗ ವ್ಯವಹಾರ ಸಚಿವಾಲಯ, ಮಾಧ್ಯಮ, ಬ್ಯಾಂಕಿಂಗ್‌ ಕ್ಷೇತ್ರ, ಮೂಲ ಸೌಕರ್ಯಗಳ ಅಭಿವೃದ್ಧಿ ಸಂಸ್ಥೆಗಳು ಇದರಲ್ಲಿ ಭಾಗೀಧಾರಿ ಸಂಸ್ಥೆಗಳು.

‘ಆರೋಗ್ಯ ಕ್ಷೇತ್ರ ಮತ್ತು ಹೆಲ್ತ್‌ ಟೂರಿಸಂ ಬಗ್ಗೆ ಹೊಂದಿರುವ ಅನುಭವ ಹಾಗೂ ದೇಶದಇತರ ನಗರಗಳು ಹಾಗೂ ವಿದೇಶಗಳಲ್ಲಿರುವ ಹೆಲ್ತ್‌ ಟೂರಿಸಂ ಮಾದರಿ, ವಿದೇಶಗಳಿಗೆ ಚಿಕಿತ್ಸೆಗೆ ಹೋಗುವ ರೋಗಿಗಳು ಮತ್ತು ಚಿಕಿತ್ಸಾ ಕ್ಷೇತ್ರಗಳು, ಮಂಗಳೂರಿನಲ್ಲಿ ಇರುವ ಅವಕಾಶಗಳು ಮತ್ತು ಸೌಲಭ್ಯಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಮಾದರಿಯೊಂದನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ ಈ ಮಾದರಿಗೆ ನೀತಿ ಆಯೋಗ ಆಸಕ್ತಿ ತೋರಿಸಿದೆ. ಮಂಗಳೂರಿನಲ್ಲಿರುವ ಕೆಲವು ಪ್ರತಿಷ್ಠಿತ ಆಸ್ಪತ್ರೆಗಳ ಮುಖ್ಯಸ್ಥರು, ಜಿಲ್ಲಾಡಳಿತ, ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಜೆ.ಆರ್‌. ಲೋಬೋ ಈ ಬಗ್ಗೆ ವಿಶೇಷ ಆಸಕ್ತಿ ತೋರ್ಪಡಿಸಿದ್ದಾರೆ’.
– ಸಂಜಯ ಎ. ಭಟ್‌, ನಿರ್ದೇಶಕರು ಮೈಂಡ್‌ಫುಲ್‌ ಕನ್ಸಲ್ಟಿಂಗ್‌  

ದ.ಕ. ಜಿಲ್ಲೆ ಹೆಲ್ತ್‌ ಟೂರಿಸಂಗೆ ಆಯ್ಕೆಗೊಳ್ಳುವ ನಿಟ್ಟಿನಲ್ಲಿ ಪೂರಕ ಪ್ರಕ್ರಿಯೆ ಆರಂಭಗೊಂಡಿವೆ. ಈಗಾಗಲೇ ನೀತಿ ಆಯೋಗದ ಜತೆ ಚರ್ಚೆ ನಡೆಸಲಾಗಿದೆ. ಮಾದರಿಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
– ನಳಿನ್‌ ಕುಮಾರ್‌, ಸಂಸದ – ದ.ಕ.

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next