Advertisement

ಚಳಿಯಲ್ಲಿ ನೆಲ್ಲಿಯಿಂದ ಕೇಶ ಸುಂದರ!

06:20 PM Dec 20, 2022 | Team Udayavani |

ಚಳಿಗಾಲದಲ್ಲಿ ಹೇರಳವಾಗಿ ಸಿಗುವ ನೆಲ್ಲಿಕಾಯಿ ಕೂದಲ ಆರೋಗ್ಯ ಹಾಗೂ ಸೌಂದರ್ಯಕ್ಕೆ ನಿಸರ್ಗವೇ ನೀಡಿದ ಉತ್ತಮ ಬಳುವಳಿ.

Advertisement

ಚಳಿಗಾಲಕ್ಕಾಗಿ ವಿಶೇಷ ಹೇರ್‌ಪ್ಯಾಕ್‌
ಸಾಮಗ್ರಿ: 2 ನೆಲ್ಲಿಕಾಯಿ ತುಂಡುಗಳು, 1/2 ಕಪ್‌ ದಪ್ಪ ಮೊಸರು, 8 ಚಮಚ ಮೆಂತ್ಯೆಕಾಳು, 1/4 ಕಪ್‌ ಕರಿಬೇವಿನೆಲೆ. ನೆಲ್ಲಿಕಾಯಿ ಕೂದಲಿನ ಬೆಳವಣಿಗೆಗೆ ಸಹಾಯಕ ಹಾಗೂ ಕಾಂತಿವರ್ಧಕ. ಮೊಸರು ಉತ್ತಮ ನೈಸರ್ಗಿಕ ಕಂಡೀಷನರ್‌. ಮೆಂತ್ಯೆ ಹೊಟ್ಟು ನಿವಾರಕ ಹಾಗೂ ಕರಿಬೇವಿನ ಎಲೆ ಕೂದಲು ಉದುರುವುದನ್ನು ನಿವಾರಣೆ ಮಾಡುತ್ತದೆ. ಹೀಗೆ ಈ ಹೇರ್‌ಪ್ಯಾಕ್‌ ಚಳಿಗಾಲದಲ್ಲಿ ವಾರಕ್ಕೊಮ್ಮೆ ಉಪಯೋಗಿಸಬಹುದಾದ ಕೂದಲ ಟಾನಿಕ್‌!

ವಿಧಾನ: ಒಂದು ಬೌಲ್‌ನಲ್ಲಿ ಎಲ್ಲ ಸಾಮಗ್ರಿಗಳನ್ನು ಹಾಕಿ, ರಾತ್ರಿ ಫ್ರಿಜ್‌ನಲ್ಲಿಡಬೇಕು. ಮರುದಿನ ನೀರು ಸೇರಿಸದೇ ಎಲ್ಲವನ್ನು ಅರೆಯಬೇಕು. ಇದನ್ನು ಕೂದಲಿಗೆ ಲೇಪಿಸಿ, 1-2 ಗಂಟೆ ಹಾಗೆಯೇ ಬಿಡಬೇಕು. ತದನಂತರ ಕೂದಲು ತೊಳೆದರೆ ಚಳಿಗಾಲದಲ್ಲಿ ಕಾಂತಿಯುತವಾಗಿ, ಸೊಂಪಾಗಿ ಕೂದಲು ಬೆಳೆಯುತ್ತದೆ.

ನೆಲ್ಲಿ-ಶಿಕಾಕಾಯಿ ಶ್ಯಾಂಪೂ
ಸಾಮಗ್ರಿ:
5 ಚಮಚ ನೆಲ್ಲಿಕಾಯಿ ಹುಡಿ, 5 ಚಮಚ ಶಿಕಾಕಾಯಿ ಹುಡಿ, 5 ಚಮಚ ಅಂಟುವಾಳದ ಹುಡಿ, 1/2 ಚಮಚ ಕಹಿಬೇವಿನ ಎಲೆಯ ಪುಡಿ, 2 ಚಿಟಿಕೆ ದಾಲ್ಚಿನಿ ಹುಡಿ, 3 ಕಪ್‌ ಕುದಿಸಿ ತಣಿಸಿದ ನೀರು. ದುಂಡಗಿನ ತಳದ ಪಾತ್ರೆಯಲ್ಲಿ ಎಲ್ಲ ಸಾಮಗ್ರಿ ತೆಗೆದುಕೊಂಡು 2 ಕಪ್‌ ನೀರಿನೊಂದಿಗೆ ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು. ಬಿಸಿ ಮಾಡುವಾಗ ಚೆನ್ನಾಗಿ ಮಿಶ್ರಮಾಡಿ 15 ನಿಮಿಷದ ಬಳಿಕ ಆರಿಸಬೇಕು. ತದನಂತರ ಇದನ್ನು ಸೋಸಬೇಕು. ಆರಿದ ಬಳಿಕ 10-15 ಹನಿ ಲ್ಯಾವೆಂಡರ್‌ ತೈಲ ಅಥವಾ ಶ್ರೀಗಂಧ ತೈಲ ಬೆರೆಸಿದರೆ ಪರಿಮಳಯುಕ್ತವಾದ ಶ್ಯಾಂಪೂ ರೆಡಿ. ಆರಿದ ಬಳಿಕ ಕೂದಲಿಗೆ ಲೇಪಿಸಿದರೆ ಉತ್ತಮ ನೊರೆ ಬರುತ್ತದೆ. ನೆಲ್ಲಿ , ಶಿಕಾಕಾಯಿ, ಕಹಿಬೇವಿನಂಥ ಮೂಲಿಕೆಗಳ ಸಣ್ತೀ ಇರುವುದರಿಂದ ಉತ್ತಮ ಕಂಡೀಷನರ್‌ ಸಹಿತ ಹೌದು. ಜೊತೆಗೆ ಚಳಿಗಾಲದಲ್ಲಿ ಕೂದಲು ಉದುರುವುದನ್ನು ಹಾಗೂ ಹೊಟ್ಟು ಉದುರುವುದನ್ನು ನಿವಾರಣೆ ಮಾಡುತ್ತದೆ. ಈ ಶ್ಯಾಂಪೂ ಲೇಪಿಸಿ 5-10 ನಿಮಿಷದ ಬಳಿಕ ಕೂದಲು ತೊಳೆದರೆ ರೇಶಿಮೆಯ ಮೆರುಗನ್ನು ಕೂದಲು ಪಡೆಯುತ್ತದೆ. ಯಾವುದೇ ರಾಸಾಯನಿಕವಿಲ್ಲದ  ಸುಲಭದಲ್ಲೇ ಮನೆಯಲ್ಲಿ ತಯಾರಿಸಬಹುದಾದ ಈ ಶ್ಯಾಂಪೂವನ್ನು ಫ್ರಿಜ್‌ನಲ್ಲಿ ಫ್ರಿಜ್‌ ಮಾಡಿ, ಐಸ್‌ಕ್ಯೂಬ್‌ನಂತೆ ಸಂಗ್ರಹಿಸಿ, ಬೇಕಾದ ದಿನಗಳಲ್ಲಿ ಬಳಸಬಹುದು.

ಕೂದಲಿಗೆ ರಂಗು ನೀಡುವ ನೆಲ್ಲಿ , ಹೆನ್ನಾ ಹೇರ್‌ ಮಾಸ್ಕ್
5 ಚಮಚ ನೆಲ್ಲಿಕಾಯಿ ಪುಡಿ, 3 ಚಮಚ ಮದರಂಗಿ/ಹೆನ್ನಾ ಪುಡಿ ಹಾಗೂ ಒಂದು ಬೌಲ್‌ನಲ್ಲಿ ನೀರು- ಇವೆಲ್ಲವನ್ನು ಬೆರೆಸಿ ಪೇಸ್ಟ್‌ ತಯಾರಿಸಬೇಕು. ಇದನ್ನು ಬ್ರಶ್‌ನ ಮೂಲಕ ಕೂದಲಿಗೆ ಲೇಪಿಸಬೇಕು. 2-3 ಗಂಟೆಗಳ ಬಳಿಕ, ನೆಲ್ಲಿ-ಶಿಕಾಕಾಯಿ ಶ್ಯಾಂಪೂ ಬಳಸಿ ಕೂದಲು ತೊಳೆದರೆ, ಕೂದಲಿಗೆ ನೈಸರ್ಗಿಕ ರಂಗು (ಹೇರ್‌ ಡೈ) ಹಚ್ಚಿದಂತೆ ಹೊಳಪು ಬರುತ್ತದೆ. ಜೊತೆಗೆ ಚಳಿಗಾಲದಲ್ಲಿ ಕೂದಲಿಗೆ ಬೇಕಾಗುವ ಅಧಿಕ ಪೋಷಕಾಂಶ ದೊರೆತು ಕೂದಲು ಸ್ನಿಗ್ಧವಾಗಿ ಹೊಳೆಯುತ್ತದೆ. ಈ ಹೇರ್‌ ಮಾಸ್ಕ್ ಬಳಸುವಾಗ ಗಾಢ ಕಪ್ಪು ರಂಗು ಬಯಸುವವರು, ದಪ್ಪವಾದ ಕಾಫಿ ಡಿಕಾಕ್ಷನ್‌ ಈ ಮಿಶ್ರಣಕ್ಕೆ ಬೆರೆಸಿದರೆ, ಕೂದಲು ಕಪ್ಪು ವರ್ಣ ಪಡೆಯುತ್ತದೆ. ಚಹಾದ ಡಿಕಾಕ್ಷನ್‌ ಬೆರೆಸಿದರೆ ಕೂದಲು ಕಂದು ವರ್ಣ ಪಡೆಯುತ್ತದೆ.

Advertisement

ನೆಲ್ಲಿ ಹಾಗೂ ನಿಂಬೆಹಣ್ಣಿನ ಗೃಹೋಪಚಾರ
ಚಳಿಗಾಲದಲ್ಲಿ ತಲೆಯಲ್ಲಿ ತುರಿಕೆ, ಗುಳ್ಳೆ ಹಾಗೂ ಹೊಟ್ಟು ಉದುರುವುದು ಅಧಿಕ. ಜೊತೆಗೆ ಅಧಿಕ ಜಿಡ್ಡಿನಂಶ ಉಳ್ಳ ಕೂದಲಿಗೆ ಕೊಳೆ-ಧೂಳಿನಿಂದ ಕೂಡಿದ ಕೂದಲನ್ನು ಹಾನಿಯಿಲ್ಲದೇ ಶುಭ್ರಗೊಳಿಸಲು ಈ ಹೇರ್‌ಪ್ಯಾಕ್‌ ಪರಿಣಾಮಕಾರಿ.

ಸಾಮಗ್ರಿ: ನೆಲ್ಲಿಕಾಯಿ ರಸ 20 ಚಮಚ, ನಿಂಬೆರಸ 5 ಚಮಚ, ನೀರು 5 ಚಮಚ,  ಮೊಸರು 5 ಚಮಚ- ಈ ಎಲ್ಲಾ ಸಾಮಗ್ರಿಗಳನ್ನು ಒಂದು ಬೌಲ್‌ನಲ್ಲಿ ಬೆರೆಸಿ ಚೆನ್ನಾಗಿ ಕಲಕಿ, ಕೂದಲಿಗೆ ಲೇಪಿಸಿ ಹೇರ್‌ಪ್ಯಾಕ್‌ ಮಾಡಬೇಕು. 2-3 ಗಂಟೆಗಳ ಬಳಿಕ ಬೆಚ್ಚಗೆ ನೀರಿನಿಂದ ಶ್ಯಾಂಪೂ ಬಳಸಿ ಕೂದಲು ತೊಳೆದರೆ ಕೂದಲು ಶುಭ್ರವಾಗಿ ಹೊಳೆಯುತ್ತದೆ. ಬಿಳಿಕೂದಲ ನಿವಾರಣೆಗೆ ನೆಲ್ಲಿ , ತುಳಸೀ ಹೇರ್‌ಪ್ಯಾಕ್‌ 5 ಚಮಚ ತುಳಸೀ ಎಲೆಯ ಪೇಸ್ಟ್‌ ತೆಗೆದುಕೊಂಡು 10 ಚಮಚ ನೆಲ್ಲಿಕಾಯಿ ಪುಡಿ ಹಾಗೂ 5 ಚಮಚ ನೀರು ಬೆರೆಸಿ ಪೇಸ್ಟ್‌ ತಯಾರಿಸಬೇಕು. ಇದನ್ನು ಕೂದಲಿಗೆ ಲೇಪಿಸಿ ಚೆನ್ನಾಗಿ ಮಾಲೀಶು ಮಾಡಬೇಕು. ಈ ಹೇರ್‌ಪ್ಯಾಕನ್ನು 20 ನಿಮಿಷಗಳ ಬಳಿಕ ತೊಳೆದರೆ ಬಿಳಿಕೂದಲನ್ನು ಕ್ರಮೇಣ ಕಪ್ಪಾಗಿಸುತ್ತದೆ. ಬಾಲನೆರೆ (ಮಕ್ಕಳಲ್ಲಿ ಉಂಟಾಗುವ ಬಿಳಿ ಕೂದಲಿನ) ನಿವಾರಣೆಗೂ ಇದು ಉಪಯುಕ್ತ.

ನೆಲ್ಲಿ+ಬಾದಾಮಿ ತೈಲದ ಹೇರ್‌ ಮಸಾಜ್‌
1-8 ಚಮಚ ನೆಲ್ಲಿಕಾಯಿ ಜ್ಯೂಸ್‌ (ರಸ)ದೊಂದಿಗೆ 4 ಚಮಚ ಬಾದಾಮಿ ತೈಲ ಬೆರೆಸಿ ಕೂದಲಿಗೆ ರಾತ್ರಿ ಚೆನ್ನಾಗಿ ಮಾಲೀಶು ಮಾಡಬೇಕು. ಮರುದಿನ ಬೆಳಿಗ್ಗೆ ಬಿಸಿನೀರು, ಶ್ಯಾಂಪೂ ಬಳಸಿ ಕೂದಲು ತೊಳೆಯಬೇಕು. ಇದರಿಂದ ಚಳಿಗಾಲದಲ್ಲಿ ಒಣಗುವ ಕೂದಲು ಸ್ನಿಗ್ಧವಾಗಿ ಹೊಳೆಯುತ್ತದೆ. ಇದು ಉತ್ತಮ ಹೇರ್‌ ಕಂಡೀಷನರ್‌ ಕೂಡ ಹೌದು. ವಾರಕ್ಕೆ 2-3 ಸಾರಿ ಈ ರೀತಿ ಮಾಲೀಶು ಮಾಡಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.

ನೆಲ್ಲಿಪುಡಿ+ಕೊಬ್ಬರಿ ಎಣ್ಣೆ ಹೇರ್‌ಪ್ಯಾಕ್‌
6 ಚಮಚ ಕೊಬ್ಬರಿ ಎಣ್ಣೆ , 3 ಚಮಚ ನೆಲ್ಲಿಕಾಯಿ ಪುಡಿಯನ್ನು ಒಂದು ಬೌಲ್‌ನಲ್ಲಿ ಬೆರೆಸಿ ಪೇಸ್ಟ್‌ ತಯಾರಿಸಬೇಕು. ಇದನ್ನು ಕೂದಲಿಗೆ ಲೇಪಿಸಿ, ಚೆನ್ನಾಗಿ ಮಾಲೀಶು ಮಾಡಿ, 3 ಗಂಟೆಯ ಬಳಿಕ ತೊಳೆಯಬೇಕು. ಇದು ಹೇರ್‌ ಫಾಲಿಕಲ್‌ಗ‌ಳಿಗೆ  ಪೋಷಣೆ ನೀಡುತ್ತದೆ, ಕೂದಲು ಕಪ್ಪಾಗಿಸುತ್ತದೆ.

ಚಳಿಗಾಲದಲ್ಲಿ ನಿತ್ಯ 1/2 ಕಪ್‌ ನೀರಿನಲ್ಲಿ 2-3 ಚಮಚ ನೆಲ್ಲಿರಸ ಬೆರೆಸಿ ಸೇವಿಸಿದರೆ ಕೂದಲ ಆರೋಗ್ಯ, ಸೌಂದರ್ಯ ವರ್ಧಿಸುತ್ತದೆ. ನೆಲ್ಲಿಯನ್ನು ಆಹಾರದಲ್ಲಿ ಬಳಸಿದರೂ ಪರಿಣಾಮಕಾರಿ.

ಡಾ. ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next