Advertisement
ಕಳೆದ ಸುಮಾರು 5 ವರ್ಷಗಳ ಹಿಂದೆ ಈ ಆರೋಗ್ಯ ಉಪಕೇಂದ್ರವನ್ನು ನಿರ್ಮಿಸಲಾಗಿದೆ. ಕಳೆದ ಸುಮಾರು 3 ವರ್ಷಗಳಿಂದ ಜನರ ಸೇವೆಗೆ ಲಭ್ಯವಿದ್ದು, ಒಬ್ಬರೇ ಸಿಬಂದಿ ಎಲ್ಲವನ್ನೂ ನಿರ್ವಹಿಸಬೇಕಾಗಿದೆ. ಶೀತ, ಜ್ವರಕ್ಕೆ ಮಾತ್ರ ಔಷಧ ನೀಡಲಾಗುತ್ತಿದೆ. ಬಿಪಿ, ಶುಗರ್ ಪರೀಕ್ಷೆ ಮಾಡಲಾಗುತ್ತಿದೆ. ರೋಗ ಹೇಳಿ ಕೇಳಿ ಬರುವುದಿಲ್ಲ, ವಾರದಲ್ಲಿ ಒಂದೇ ದಿನ ತೆರೆಯುವುದರಿಂದ ಸಮರ್ಪಕ ಸೇವೆ ಲಭ್ಯವಾಗುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರದ್ದು.
ಆರೋಗ್ಯ ಕೇಂದ್ರದಲ್ಲಿ ಒಬ್ಬರೇ ಸಿಬಂದಿ ಇದ್ದು, ಜವಾಬ್ದಾರಿ ಸಾಕಷ್ಟಿದೆ. ಇರುವ ಒಬ್ಬರು ಆರೋಗ್ಯ ಸಹಾಯಕಿ ನಿಟ್ಟಡೆ, ಕುಕ್ಕೇಡಿ ಗ್ರಾಮಗಳು ಸಹಿತ ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಆರಂಬೋಡಿ, ಹೊಸಂಗಡಿ, ವೇಣೂರು, ಕರಿಮಣೇಲು ಗ್ರಾಮಗಳಿಗೆ ಮಕ್ಕಳ ಇಂಜೆಕ್ಷನ್ ನೀಡಲು ಫೀಲ್ಡ್‌ಗೆ ಹೋಗುತ್ತಾರೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರ ನೆರವಿನೊಂದಿಗೆ ಗ್ರಾಮದ ಮನೆ ಮನೆಗೆ ಭೇಟಿ ನೀಡಿ ಜನರಲ್ಲಿ ಆರೋಗ್ಯದ ಬಗ್ಗೆ ಹಾಗೂ ಸೊಳ್ಳೆ ಸಂತಾನೋತ್ಪತ್ತಿ ತಾಣಗಳ ನಿರ್ಮೂಲನೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಎದೆಹಾಲು ಉಣ್ಣುವ ಮಕ್ಕಳಿಗೆ ಕಡ್ಡಾಯವಾಗಿ ಎದೆಹಾಲು ನೀಡುವಂತೆ ತಾಯಂದಿರ ಮನವರಿಕೆ ಮಾಡುತ್ತಿದ್ದಾರೆ. ಕಂಪ್ಯೂಟರ್ ಸೌಲಭ್ಯವಿಲ್ಲ
ಕಡತಗಳ ನಿರ್ವಹಣೆಯನ್ನು ಕಂಪ್ಯೂಟರ್ ಮೂಲಕ ನಡೆಸಬೇಕಾಗುತ್ತದೆ. ಆದರೆ ಇಲ್ಲಿ ಕಂಪ್ಯೂಟರ್ ಸೌಲಭ್ಯ ಇಲ್ಲದೇ ಇರುವುದರಿಂದ ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಇದನ್ನು ನಿಭಾಯಿಸುತ್ತಾರೆ. ಈ ಕೆಲಸಗಳ ಮಧ್ಯೆ ವಾರದಲ್ಲಿ ಬುಧವಾರ ಮಾತ್ರ ಆರೋಗ್ಯ ಕೇಂದ್ರವನ್ನು ತೆರೆಯಲು ಸಾಧ್ಯವಾಗುತ್ತಿದ್ದು, ಉಳಿದ ದಿನಗಳಲ್ಲಿ ಗ್ರಾಮಸ್ಥರಿಗೆ ಆರೋಗ್ಯ ಸೇವೆ ಮರೀಚಿಕೆಯಾಗಿದೆ.
Related Articles
ಸುಮಾರು 2013ರಲ್ಲಿ ನಿರ್ಮಿಸಲಾದ ಈ ಆರೋಗ್ಯ ಕೇಂದ್ರವನ್ನು ಇದೀಗ ಸಾಕಷ್ಟು ನವೀಕರಣ ಮಾಡಲಾಗಿದೆ, ಸುಸಜ್ಜಿತ ಕಾಂಪೌಂಡ್, ಗೇಟ್ ಗಳನ್ನು ಅಳವಡಿಸಲಾಗಿದೆ. ಸಿಬಂದಿಗೆ ಉಳಿದು ಕೊಳ್ಳಲು ವಸತಿ ಕೇಂದ್ರ ಕೂಡಾ ಇದೆ. 2017-18ರಲ್ಲಿ ಆರೋಗ್ಯ ಉಪಕೇಂದ್ರದ ನವೀಕರಣಕ್ಕಾಗಿ ವಿವಿಧ ಯೋಜನೆಯಡಿ 3.35 ಲಕ್ಷ ರೂ. ಅನುದಾನ ಲಭಿಸಿದ್ದು, ಸಕಲ ಸೌಲಭ್ಯ ಕಲ್ಪಿಸಲಾಗಿದೆ. ಎಲ್ಲ ಸೌಲಭ್ಯ ಹೊಂದಿರುವ ಉಪಕೇಂದ್ರ ದಲ್ಲಿ ಸೇವೆ ವಾರದಲ್ಲಿ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರುವುದು ದುರದೃಷ್ಟಕರ. ಈ ಬಗ್ಗೆ ಆರೋಗ್ಯ ಇಲಾಖೆ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ.
Advertisement
ಡೆಂಗ್ಯೂ ಶಂಕಿತ ಪ್ರಕರಣನಿಟ್ಟಡೆ ಆರೋಗ್ಯ ಉಪಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು 10 ಮಂದಿಗೆ ಶಂಕಿತ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಸಲಹೆ ಹಾಗೂ ಔಷಧದಿಂದ ಗುಣಮುಖರಾಗುತ್ತಿದ್ದಾರೆ, ಇನ್ನು ಕೆಲವರು ಗುಣಮುಖರಾಗಿದ್ದಾರೆ. ಗ್ರಾಮೀಣ ಭಾಗದ ಆರೋಗ್ಯ ಉಪಕೇಂದ್ರಗಳಲ್ಲಿ ಕನಿಷ್ಠ ಮೂವರು ಸಿಬಂದಿಯನ್ನಾದರೂ ನೇಮಿಸಿ ಆರೋಗ್ಯಭಾಗ್ಯ ಕರುಣಿಸಲು ಆರೋಗ್ಯ ಇಲಾಖೆ ಮುಂದಾಗಬೇಕೆಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬಂದಿದೆ. ನೇಮಕಾತಿಗೆ ಆದ್ಯತೆ
ನಿಟ್ಟಡೆ ಆರೋಗ್ಯ ಉಪಕೇಂದ್ರಕ್ಕೆ ಸಿಬಂದಿ ನೇಮಕಾತಿ ಆಗಿಲ್ಲ. ಮುಂದಿನ ತಿಂಗಳಲ್ಲಿ ಸರಕಾರದಿಂದಲೇ ನೇಮಕಾತಿ ಆಗುವ ಸಾಧ್ಯತೆ ಇದೆ. ಆಸ್ಪತ್ರೆ ಖಾಲಿ ಇರಬಾರದು ಮತ್ತು ಗ್ರಾಮಸ್ಥರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಮಹಿಳಾ ಸಿಬಂದಿಯೋರ್ವರನ್ನು ಅಲ್ಲಿಗೆ ನಿಯೋಜನೆ ಮಾಡಲಾಗಿದ್ದು, ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೇಮಕಾತಿಯಲ್ಲಿ ಇಲ್ಲಿಗೆ ಆದ್ಯತೆ ನೀಡುತ್ತೇವೆ.
– ಡಾ| ಕಲಾಮಧು, ತಾ| ವೈದ್ಯಾಧಿಕಾರಿ ಆರೋಗ್ಯದ ಬಗ್ಗೆ ಜಾಗೃತಿ
ನಿಟ್ಟಡೆ ಉಪಕೇಂದ್ರ ಮಾತ್ರವಲ್ಲದೆ ಸಿಬಂದಿಯಿಲ್ಲದ ವೇಣೂರು ಪ್ರಾ.ಆ. ಕೇಂದ್ರದ ಗ್ರಾಮಗಳಿಗೂ ಕರ್ತವ್ಯ ನಿಮಿತ್ತ ನಾನು ತೆರಳಬೇಕಿದೆ. ಈಗಾಗಿ ನಿಟ್ಟಡೆ ಆರೋಗ್ಯ ಕೇಂದ್ರದಲ್ಲಿ ದಿನವಿಡೀ ಇರಲು ಸಾಧ್ಯ ಆಗುತ್ತಿಲ್ಲ. ಫೀಲ್ಡ್ ವರ್ಕ್‌ನಲ್ಲಿ ಗ್ರಾಮ ಗ್ರಾಮಗಳಿಗೆ ತೆರಳಿ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ಇದಕ್ಕೆ ಆಶಾ ಕಾರ್ಯಕರ್ತರು ಸಹಕಾರ ನೀಡುತ್ತಾರೆ.
– ಇಂದಿರಾ, ಆರೋಗ್ಯ ಸಹಾಯಕಿ — ಪದ್ಮನಾಭ ವೇಣೂರು