ಬೆಂಗಳೂರು: ಸರ್ಕಾರಿ ಶಾಲೆಗಳ ಮಕ್ಕಳ ಆರೋಗ್ಯ ಕಾಪಾಡುವ ವಿಚಾರದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಆನೇಕಲ್ ತಾಲೂಕಿನ ಮರಸೂರು ಗ್ರಾಮ ಪಂಚಾಯಿತಿ, ಜಿಲ್ಲೆಗೇ ಮಾದರಿ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಆರೋಗ್ಯದ ದೃಷ್ಟಿಯಿಂದ “ಆರೋಗ್ಯ ಕಿಟ್’ ಯೋಜನೆಯನ್ನು ಆರಂಭಿಸಿದ್ದು,ಇತರ ಗ್ರಾಮ ಪಂಚಾಯಿತಿಗಳಿಗಿಂತ ಮರಸೂರು ಭಿನ್ನ ಎನಿಸಿಕೊಂಡಿದೆ. ಇದಕ್ಕಾಗಿಯೇ ಗ್ರಾ.ಪಂ ಪ್ರತಿ ವರ್ಷ ಸುಮಾರು 8.5 ಲಕ್ಷ ರೂ.ಗಳನ್ನು ಮೀಸಲಿರಿಸಿದೆ.
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಹೆಚ್ಚಾಗಿ ದಾಖಳಲಾಗುವುದು ಆರ್ಥಿಕವಾಗಿ ಸ್ಥಿತಿವಂತರಾಗಿರದ ಕುಟುಂಬಗಳ ಮಕ್ಕಳು. ಕೂಲಿ-ನಾಲಿ ಮಾಡಿ ಮಕ್ಕಳನ್ನು ಶಾಲೆಗೆ ಕಳಿಸುವ ಪೋಷಕರು, ಅವರ ಆರೋಗ್ಯದ ಬಗ್ಗೆ ಅಷ್ಟಾಗಿ ಕಾಳಜಿ ವಹಿಸುವುದಿಲ್ಲ. ಈ ಅಂಶಗಳನ್ನು ಮನಗಂಡು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ 2013ರಲ್ಲಿಯೇಮರಸೂರು ಗ್ರಾಮ ಪಂಚಾಯಿತಿ “ಆರೋಗ್ಯ ಕಿಟ್ ‘ಯೋಜನೆ ಆರಂಭಿಸಿತ್ತು. ಪಂಚಾಯಿತಿಯ ಈ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಗ್ರಾ.ಪಂ ಸಂಚಿತ ನಿಧಿಯಲ್ಲಿನ ಅನುದಾನವನ್ನು ಯೋಜನೆಗೆ ಬಳಸಲಾಗುತ್ತಿದೆ.
ಬಡಮಕ್ಕಳಿಗೆ ಹೆಚ್ಚು ಅನುಕೂಲ: ಆರಂಭಿಕ ವರ್ಷದಲ್ಲಿ ಪ್ರತಿ ತಿಂಗಳು ಶಾಲಾ ಮಕ್ಕಳಿಗೆ ಆರೋಗ್ಯ ಕಿಟ್ ನೀಡಲಾಗುತ್ತಿತ್ತು. ಆದರೆ ಈ ವರ್ಷ ಪ್ರತಿ ಮೂರು ತಿಂಗಳಿಗೊಮ್ಮೆ ಕಿಟ್ ನೀಡಲಾಗುತ್ತಿದೆ. ಅನುದಾನದ ಕೊರತೆ ಹಿನ್ನೆಲೆಯಲ್ಲಿ ಪ್ರತಿ ತಿಂಗಳು ಮಕ್ಕಳಿಗೆ ಕಿಟ್ ವಿತರಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಸದಸ್ಯರು.
ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನಾಲ್ಕು ಕಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಒಂದೊಂದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಇವೆ. ಈ ವರ್ಷ ಸುಮಾರು 520ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಈಎಲ್ಲಾ ಮಕ್ಕಳಿಗೆ ಆರೋಗ್ಯ ಕಿಟ್ ವಿತರಣೆ ಮಾಡಲಾಗಿದೆ ಎಂದು ಪಿಡಿಒ ಶಶಿಕಿರಣ್ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ. ಒಂದು ಆರೋಗ್ಯ ಕಿಟ್‌ಗೆ ಸುಮಾರು 548 ರೂ. ವೆಚ್ಚವಾಗುತ್ತದೆ. ಇದುವರೆಗೂ ಸುಮಾರು 3 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಆರೋಗ್ಯ ಕಿಟ್ ನೀಡಲಾಗಿದೆ. ಆರ್ಥಿಕವಾಗಿ ದುರ್ಬಲರಾಗಿರುವ ಹೆಣ್ಣು ಮಕ್ಕಳಿಗೆ ಈ ಕಿಟ್ ಬಹಳಷ್ಟು ಉಪಯೋಗಲಾಗಲಿದೆ. ಮಕ್ಕಳು ಆರೋಗ್ಯದಿಂದ ಇದ್ದರೆ ಕಲಿಕೆಯಲ್ಲಿ ಆಸಕ್ತಿ ತೋರುತ್ತಾರೆ. ಆ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಯ ಮಕ್ಕಳನ್ನು ಕೇಂದ್ರೀಕರಿಸಿ ಈ ಯೋಜನೆ ರೂಪಿಸಲಾಗಿದೆ. ಯೋಜನೆ ಹೀಗೇ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
“ಈ ಹಿಂದೆ ನಾನು ಮರಸೂರು ಗ್ರಾಮ ಪಂಚಾಯ್ತಿ ಅಧ್ಯಕ್ಷನಾಗಿದ್ದ ವೇಳೆ ಬಡ ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ “ಆರೋಗ್ಯ ಕಿಟ್’ ಯೋಜನೆ ಆರಂಭಿಸಲಾಯಿತು. ಗ್ರಾಮ ಪಂಚಾಯಿಯ ಈಗಿನ ಅಧ್ಯಕ್ಷರು ಆ ಯೋಜನೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಖುಷಿ ಪಡುವ ವಿಚಾರ ಎಂದು ಬೆಂಗಳೂರ ನಗರ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ರಾಮಚಂದ್ರ ತಿಳಿಸಿದ್ದಾರೆ
ಆರೋಗ್ಯ ಕಿಟ್‌ನಲ್ಲಿ ಏನೇನು ಇರಲಿದೆ?: ಆರೋಗ್ಯ ಕಿಟ್‌ನಲ್ಲಿ ಮೈಸೂರು ಸ್ಯಾಂಡಲ್ ಸಾಬೂನು, ಬಟ್ಟೆ ಸೋಪು, ಟೂತ್ ಪೇಸ್ಟ್, ಟೂತ್ ಬ್ರೇಶ್, ನೇಲ್ ಕಟರ್, ಕೊಬ್ಬರಿ ಎಣ್ಣೆ, ಬಾಚಣಿಕೆ, ತಲೆಗೆ ಹಾಕುವ ಶ್ಯಾಂಪೂ, ಬಿಸ್ಕೇಟ್, ಪಾಂಡ್ಸ್ ಪೌಡರ್, ಹ್ಯಾಂಡ್ ಕ್ಲಾತ್ ಸೇರಿದಂತೆ ಹದಿನೈದಕ್ಕೂ ಹೆಚ್ಚು ಅಗತ್ಯ ವಸ್ತುಗಳು ಇರಲಿವೆ.
-ದೇವೇಶ ಸೂರಗುಪ್ಪ