Advertisement

ಮಳೆ ಬಂದರೆ ಕೆಸರಿನ ಸಮಸ್ಯೆ; ಬೇಸಗೆಯಲ್ಲಿ ಧೂಳಿನ ಕಿರಿಕಿರಿ

12:03 PM Apr 25, 2022 | Team Udayavani |

ಬೈಕಂಪಾಡಿ: ಮಳೆ ಬಂದರೆ ಕೆಸರಿನ ಸಮಸ್ಯೆ, ಬೇಸಗೆಯಲ್ಲಿ ಧೂಳಿನ ಕಿರಿಕಿರಿ. ಒಳ್ಳೆಯ ರಸ್ತೆಯಿದ್ದರೂ ಕಂಟೈನರ್‌ ಸಂಚಾರದಿಂದ ಉಂಟಾಗುವ ಧೂಳು ಸ್ಥಳೀಯ ಜನರನ್ನು ಕಂಗೆಡಿಸುತ್ತಿದೆ. ಇದರಿಂದ ಕಂಗೆಟ್ಟ ಜನರು ಮಾಸ್ಕ್, ಸ್ಕಾರ್ಫ್‌ಗಳಿಗೆ ಮೊರೆ ಹೋಗುವ ಸ್ಥಿತಿ ಎದುರಾಗಿದೆ.

Advertisement

ಬೈಕಂಪಾಡಿ, ಪಣಂಬೂರು ಕೈಗಾರಿಕೆ ವಲಯ ಪ್ರದೇಶ. ಆದರೆ ಇದರ ನಡುವೆ ಕೆಲವೊಂದು ವಸತಿ ಬಡಾವಣೆಯಿದೆ. ಬಂದರು ಅಂಚಿನಲ್ಲಿಯೇ ಬೈಕಂಪಾಡಿ, ಮೀನಕಳಿಯ ಪ್ರದೇಶವಿದೆ. ಇಲ್ಲಿನ ಮೀನಕಳಿಯ ಪ್ರಧಾನ ರಸ್ತೆಗೆ ಕಾಂಕ್ರೀಟ್‌ ಅಳವಡಿಸಿ ದ್ವಿಪಥ ಮಾಡಲಾಗಿದೆ. ಆದರೆ ಜನರಿಗೆ ಮಾತ್ರ ಇದರ ಪ್ರಯೋಜನ ಲಭಿಸುತ್ತಿಲ್ಲ. ಕಾರಣ ಒಂದೆಡೆ ಲಾರಿ ನಿಲುಗಡೆ, ಇನ್ನೊಂದೆಡೆ ಸುತ್ತಮುತ್ತ ಇರುವ ಖಾಸಗಿ ಜಾಗಗಳಲ್ಲಿ ಗೋದಾಮು ಇರುವುದರಿಂದ ದಿನಕ್ಕೆ ನೂರಾರು ಟ್ರಕ್‌ಗಳು ಇಲ್ಲಿ ಓಡಾಡುತ್ತವೆ. ಕಂಟೈನರ್‌ ಇಡುವ ಜಾಗಗಳು ಕಲ್ಲು ಮಣ್ಣಿನಿಂದ ಕೂಡಿದ ಜಾಗವಾಗಿದ್ದು, ಲಾರಿಗಳ ಸಂಚಾರದಿಂದ ಧೂಳು ಸೃಷ್ಟಿಯಾಗಿ ಜನರ ಆರೋಗ್ಯಕ್ಕೆ ಕುತ್ತು ತರುತ್ತಿವೆ. ನಿತ್ಯ ಸಾವಿರಾರು ಮಂದಿ ಜನರು, ವಿದ್ಯಾರ್ಥಿಗಳು, ಮಹಿಳೆಯರು ಈ ರಸ್ತೆಯಲ್ಲಿ ಓಡಾಟ ನಡೆಸುವರು.

ಪಣಂಬೂರು ಬೀಚ್‌ ರಸ್ತೆಗೆ ಪರ್ಯಾಯವಾಗಿ ಮೀನಕಳಿಯ ರಸ್ತೆ ಬಳಕೆಯಾಗುತ್ತಿದೆ. ಈ ರಸ್ತೆಯಲ್ಲಿ ಟ್ರಕ್‌ ವೇಗದಿಂದ ಸಾಗಿದರಂತೂ ಆ ವಾಹನ ಮತ್ತು ಎದುರಿಗಿದ್ದವರೂ ಕಾಣದಷ್ಟು ದಟ್ಟ ಧೂಳು ಆವರಿಸಿಕೊಳ್ಳುತ್ತದೆ. ಅಲ್ಲಿದ್ದವರು ಒಂದೆರಡು ನಿಮಿಷ ನಿಂತು ಹೋಗಬೇಕಾದ ಸ್ಥಿತಿ ಉದ್ಭವಿಸುತ್ತದೆ. ಧೂಳಿನ ಸಮಸ್ಯೆಗೆ ಮುಕ್ತಿ ನೀಡುವ ಕೆಲಸ ಮಹಾನಗರ ಪಾಲಿಕೆಯಿಂದ ಇನ್ನೂ ನಡೆಯದಿರುವುದು ಖೇದಕರ.

ಬೈಕಂಪಾಡಿ ಮೇಲ್ಸೇತುವೆ ದಾಟಿದ ಕೂಡಲೇ ಸಿಗುವ ಕಾಂಕ್ರೀಟ್‌ ಚತುಷ್ಪಥ ರಸ್ತೆಯನ್ನು ಜನರ ಸುಗಮ ಓಡಾಟಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ದುರಸ್ತಿಗೊಳಿಸಲು ಮಹಾನಗರ ಪಾಲಿಕೆ, ಸಂಚಾರಿ ಪೊಲೀಸ್‌ ಇಲಾಖೆ ಮುಂದಾಗಬೇಕಿದೆ. ಇದರ ಜತೆಗೆ ಕಾಂಕ್ರೀಟ್‌ ರಸ್ತೆಯ ಇಕ್ಕೆಲಗಳಲ್ಲಿ ಶೇಖರಣೆಯಾದ ಮರಳು, ಮಣ್ಣಿನ ತೆರವಿಗೆ ಕ್ರಮ ಜರಗಿಸಬೇಕಿದೆ.

ಅಗತ್ಯ ಕ್ರಮ

Advertisement

ಮಹಾನಗರ ಪಾಲಿಕೆಯ ಕಾಂಕ್ರೀಟ್‌ ರಸ್ತೆಯ ಮೇಲೆ ಲಾರಿ ಟ್ರಕ್‌ಗಳ ಸಂಚಾರದಿಂದ ಮಣ್ಣು, ಧೂಳಿನ ಕಣ ಅಧಿಕವಾಗಿದ್ದರೆ, ಇತರ ಸವಾರರಿಗೆ ಹಾನಿಯಾಗುವಂತಿದ್ದರೆ, ಇದನ್ನು ತೆರವುಗೊಳಿಸಲು, ನಿಗದಿತವಾಗಿ ಸ್ವಚ್ಛತೆ ಕಾಪಾಡಲು ಹಾಗೂ ಇದಕ್ಕೆ ಕಾರಣರಾದ ಸಮೀಪದ ಸಂಬಂಧಪಟ್ಟ ಕಂಪೆನಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅವರ ಗಮನಕ್ಕೆ ತರಲಾಗುವುದು. -ಡಾ| ಮಂಜಯ್ಯ ಶೆಟ್ಟಿ, ಮುಖ್ಯ ಆರೋಗ್ಯಾಧಿಕಾರಿ, ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next