ಮಡಿಕೇರಿ: ಪೊಲೀಸ್ ಸಿಬಂದಿಗಳು ಸರಕಾರದ ಮತ್ತು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್ ತಿಳಿಸಿದ್ದಾರೆ.
ರೋಟರಿ ಕ್ಲಬ್, ಇಂಡಿಯನ್ ಮೆಡಿಕಲ್ ಅಸೋಸಿಯೆಷನ್ ಮತ್ತು ಇನ್ನರ್ ವೀಲ್ ಸಹಯೋಗದಲ್ಲಿ ನಗರದ ರೋಟರಿ ಕ್ಲಬ್‌ನಲ್ಲಿ ಮಂಗಳೂರಿನ ಯೂನಿಟಿ ಆಸ್ಪತ್ರೆ ವತಿಯಿಂದ ಪೊಲೀಸ್ ಇಲಾಖೆ ಹಾಗೂ ಗೃಹ ರಕ್ಷಕ ದಳದ ಸಿಬಂದಿಗಳಿಗಾಗಿ ನಡೆದ ಶ್ವಾಸಕೋಶದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಎಸ್‌ಪಿ ಮಾತನಾಡಿದರು.
ಯೋಗವನ್ನು ಜೀವನದ ಒಂದು ಭಾಗವಾಗಿ ಅಳವಡಿಸಿಕೊಂಡಾಗ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದು ಅವರು ಅಭಿಪ್ರಾಯಪಟ್ಟರು.ಪ್ರಸ್ತುತ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದ್ದು, ಇವುಗಳನ್ನು ತಡೆಗಟ್ಟಲು ಪ್ರತಿಯೊ ಬ್ಬರು ಕಾಳಜಿ ತೋರಬೇಕು. ನಾವೆಷ್ಟು ವರ್ಷ ಜೀವಿಸುತ್ತೇವೆ ಎನ್ನುವುದಕ್ಕಿಂತ ಎಷ್ಟು ವರ್ಷ ಆರೋಗ್ಯವಾಗಿರುತ್ತೇವೆ ಎನ್ನುವುದು ಮುಖ್ಯ. ಸಮಾಜದ ಶಾಂತಿಯನ್ನು ಕಾಪಾಡುವ ಪೋಲಿಸ್ ಅಧಿಕಾರಿಗಳು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕು.
ಒತ್ತಡದ ನಡುವೆ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇರುವುದರಿಂದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಪಾಸಣೆ ಮಾಡಿಸಿ ಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದು ಎಸ್‌ಪಿ ರಾಜೇಂದ್ರಪ್ರಸಾದ್ ಸಲಹೆ ನೀಡಿದರು. ಯೋಗಾಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಒತ್ತಡಗಳಿಂದ ಮುಕ್ತಿ ಪಡೆಯಲು ಸಾಧ್ಯವಿದೆ ಎಂದ ಅವರು ಮಧ್ಯಪಾನ, ಧೂಮಪಾಗಳಂತಹ ದುಶ್ಚಟಗಳಿಂದ ದೂರ ಉಳಿಯುವಂತೆ ಕಿವಿ ಮಾತು ಹೇಳಿದರು.
ಪೌಷ್ಟಿಕಾಂಶ ಹೊಂದಿರುವ ಆಹಾರಗಳನ್ನು ಸೇವಿಸುವುದು ಮತ್ತು ವ್ಯಾಯಾಮಗಳ ಮೂಲಕ ದೇಹದ ಸಮತೋಲನವನ್ನು ಕಾಪಾಡಿಕೊಳ್ಳುವಂತೆ ಎಸ್‌ಪಿ ಹೇಳಿದರು.
ರೋಟರಿ ಕ್ಲಬ್‌ನ ಅಧ್ಯಕ್ಷರಾದ ಪಿ.ಯು. ಪ್ರೀತಂ ಮಾತನಾಡಿ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖೀ ಕಾರ್ಯಕ್ರಮಗಳನ್ನು ರೋಟರಿ ಮೂಲಕ ನಡೆಸಲಾಗುವುದೆಂದರು.
ಉದ್ಘಾಟನಾ ಸಮಾರಂಭದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೆಷನ್ ಅಧ್ಯಕ್ಷರಾದ ಡಾ| ಮೋಹನ್ ಅಪ್ಪಾಜಿ, ರೋಟರಿ ಕ್ಲಬ್‌ನ ಕಾರ್ಯದರ್ಶಿ ಕೆ.ಎಸ್. ರತನ್ ತಮ್ಮಯ್ಯ, ಇನ್ನರ್ ವೀಲ್‌ನ ಅಧ್ಯಕ್ಷರಾದ ಲತಾ ಚಂಗಪ್ಪ, ಕಾರ್ಯದರ್ಶಿ ನಿಶಾ ಮೋಹನ್, ರೋಟರಿ ಕ್ಲಬ್‌ನ ಸದಸ್ಯರಾದ ಕಾರ್ಯಪ್ಪ, ರೋಟರಿ ಕ್ಲಬ್‌ನ ಆಡಳಿತಾಧಿಕಾರಿಗಳಾದ ಬಿ. ದೇವರಾಜ್, ಮಂಗಳೂರು ಯೂನಿಟಿ ಆಸ್ಪತ್ರೆಯ ಪ್ರಮುಖ ರಾದ ರವಿ ಉಪಸ್ಥಿತರಿದ್ದರು.
ಮಂಗಳೂರು ಯೂನಿಟಿ ಆಸ್ಪತ್ರೆಯ ಶ್ವಾಸ ಕೋಶ ತಜ್ಞರಾದ ಡಾ| ಅಲ್ಕಾ ಸಿ. ಭಟ್ ಅವರ ತಂಡದ ನೇತೃತ್ವದಲ್ಲಿ ಶಿಬಿರ ನಡೆಯಿತು.