ಹೊಸದಿಲ್ಲಿ: ದೇಶಾದ್ಯಂತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವೈದ್ಯಕೀಯ ಸ್ಥಿತಿಯನ್ನು ಆಧರಿಸಿ, ಆರೋಗ್ಯ ಸೂಚ್ಯಂಕವನ್ನು ಬಿಡುಗಡೆ ಮಾಡಲಾಗಿದೆ. ದೊಡ್ಡ ರಾಜ್ಯಗಳ ಆರೋಗ್ಯ ಸೂಚ್ಯಂಕದಲ್ಲೊ ಕೇರಳ ಅತ್ಯುತ್ತಮ ಸಾಧನೆ ತೋರಿ, ಮೊದಲನೇ ಸ್ಥಾನ ಗಿಟ್ಟಿಸಿಕೊಂಡಿದ್ದರೆ ಕರ್ನಾಟಕ 9ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
ಉತ್ತರ ಪ್ರದೇಶವು ಕೊನೆಯ ಸ್ಥಾನದಲ್ಲಿದೆ. ನೀತಿ ಆಯೋಗವು ಕಳೆದ ನಾಲ್ಕು ವರ್ಷಗಳಿಂದ ಈ ಸೂಚ್ಯಂಕ ಬಿಡುಗಡೆ ಮಾಡುತ್ತಿದ್ದು, 2019-20ರ ದಾಖಲೆಗಳನ್ನಾಧರಿಸಿ ಈಗ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದೆ.
ಕೇರಳ ನಾಲ್ಕು ಬಾರಿ ಬಿಡುಗಡೆಯಾದ ಪಟ್ಟಿಯಲ್ಲೂ ಅಗ್ರ ಸ್ಥಾನವನ್ನು ಕಾಯ್ದಿರಿಸಿಕೊಂಡು ಬಂದಿದೆ. ಈ ಬಾರಿ ತಮಿಳುನಾಡಿಗೆ 2ನೇ, ತೆಲಂಗಾಣಕ್ಕೆ 3ನೇ ಸ್ಥಾನ ಸಿಕ್ಕಿದೆ. ಕೊನೆಯಿಂದ ಎರಡನೇ ಸ್ಥಾನದಲ್ಲಿ ಬಿಹಾರ, 3ನೇ ಸ್ಥಾನದಲ್ಲಿ ಮಧ್ಯಪ್ರದೇಶವಿದೆ. ಕಳೆದ ಸೂಚ್ಯಂಕಕ್ಕೆ ಹೋಲಿಸಿದರೆ, ಆರೋಗ್ಯ ಪರಿಸ್ಥಿತಿಯಲ್ಲಿ ಸುಧಾರಣೆ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲನೇ ಸ್ಥಾನ ಪಡೆದಿದೆ. ಅದರಲ್ಲಿ ಕರ್ನಾಟಕ ಋಣಾತ್ಮಕ ಸಂಖ್ಯೆಯೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಸಣ್ಣ ರಾಜ್ಯಗಳ ಸಾಧನೆ: ಸಣ್ಣ ರಾಜ್ಯಗಳ ಪೈಕಿ ಅತ್ಯುತ್ತಮ ಆರೋಗ್ಯ ನಿರ್ವಹಣೆಯಲ್ಲಿ ಮಿಜೋರಾಂ ಅಗ್ರ ಸ್ಥಾನ ಪಡೆದುಕೊಂಡಿದ್ದು, ನಾಗಾಲ್ಯಾಂಡ್ ಕೊನೆಯಲ್ಲಿದೆ. ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸೂಚ್ಯಂಕ ಪಟ್ಟಿಯಲ್ಲಿ ದಮನ್ ಮತ್ತು ದಿಯು ಮೊದಲ ಸ್ಥಾನದಲ್ಲಿದ್ದರೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಜಮ್ಮು ಮತ್ತು ಕಾಶ್ಮೀರ ಹಾಗೂ ದಿಲ್ಲಿ ಕೊನೆಯ ಮೂರು ಸ್ಥಾನದಲ್ಲಿವೆ.