Advertisement

ನಾಳೆಯಿಂದ ಜಿಲ್ಲಾದ್ಯಂತ ಆರೋಗ್ಯ ಮೇಳ

10:46 AM Apr 17, 2022 | Team Udayavani |

ಧಾರವಾಡ: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಆಯುಷ್ಮಾನ ಭಾರತ ನಾಲ್ಕನೇ ವರ್ಷದ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಏ.18ರಿಂದ 28ರವರೆಗೆ ಜಿಲ್ಲಾದ್ಯಂತ ಆರೋಗ್ಯ ಮೇಳವನ್ನು ಆಯೋಜಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.

Advertisement

ಡಿಸಿ ಕಚೇರಿಯಲ್ಲಿ ನಡೆದ ಆರೋಗ್ಯ ಮೇಳದ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ 5 ತಾಲೂಕು ಕೇಂದ್ರಗಳಲ್ಲಿ ನಡೆಯಲಿರುವ ಆರೋಗ್ಯ ಮೇಳದಲ್ಲಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ, ರೋಗ ಪತ್ತೆ, ಚಿಕಿತ್ಸೆ ಹಾಗೂ ಆರೋಗ್ಯ ವರ್ಧಕ ಸಲಹೆಗಳನ್ನು ಉಚಿತವಾಗಿ ನೀಡಲಾಗುವುದು. ನೋಂದಣಿ, ಡಿಜಿಟಲ್‌ ಐಡಿ ರಚನೆಯನ್ನು ಉಚಿತವಾಗಿ ಮಾಡಲಾಗುವುದು ಎಂದರು.

ಸೂಪರ್‌ ಸ್ಪೆಷಲಿಸ್ಟ್‌, ತಜ್ಞ ವೈದ್ಯರು, ವೈದ್ಯಾಧಿಕಾರಿಗಳು ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ತಜ್ಞರಿಂದ ಟೆಲಿಕನ್ಸಲ್ಟೇಶನ್‌ ಮೂಲಕ ಉಚಿತ ಸಲಹೆ ನೀಡಲಾಗುವುದು. ಏ.18ರಂದು ಬೆಳಗ್ಗೆ 11 ಗಂಟೆಗೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್‌ ಪ್ರೌಢಶಾಲೆ ಆವರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರು ಮೇಳಕ್ಕೆ ಚಾಲನೆ ನೀಡುವರು.

ಏ.20ರಂದು ಧಾರವಾಡ, 22ರಂದು ನವಲಗುಂದ, 26ರಂದು ಕಲಘಟಗಿ ಹಾಗೂ 28ರಂದು ಕುಂದಗೋಳ ತಾಲೂಕುಗಳಲ್ಲಿ ಆರೋಗ್ಯ ಮೇಳ ಆಯೋಜಿಸಲಾಗುವುದು ಎಂದು ಹೇಳಿದರು.

ಆಹಾರ ಸುರಕ್ಷತಾ ವಿಭಾಗದವರು ಆಹಾರ ಪದಾರ್ಥ ಗಳ ಗುಣಮಟ್ಟ ಪರಿಶೀಲನೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಬೀದಿನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಬೇಕು. ಸಂಚಾರಿ ವಾಹನಗಳ ಮೂಲಕ ನೇತ್ರ ತಪಾಸಣೆ ಕಾರ್ಯಕ್ರಮ ಏರ್ಪಡಿಸಲಾಗುವುದು. ಈ ಎಲ್ಲ ಮಾಹಿತಿಗಳನ್ನು ಎಲ್‌ಇಡಿ ವಾಹನಗಳ ಮೂಲಕ ಪ್ರಚಾರ ಕೈಗೊಳ್ಳಬೇಕು ಎಂದರು.

Advertisement

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಬಿ.ಸಿ. ಕರಿಗೌಡರ ಮಾತನಾಡಿ, ಆರೋಗ್ಯ ಮೇಳದಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಬಾಯಿ, ಗರ್ಭಕೋಶ, ಕಂಠ ಮತ್ತು ಸ್ತನ ಕ್ಯಾನ್ಸರ್‌ ಮುಂತಾದವುಗಳ ಉಚಿತ ನೋಂದಣಿ, ತಪಾಸಣೆ ಮತ್ತು ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಗುವುದು ಎಂದರು. ಆಯುಷ್ಮಾನ ಭಾರತ್‌ ಆರೋಗ್ಯ ಕರ್ನಾಟಕ ಕಾರ್ಯಕ್ರಮದಡಿ ಆರೋಗ್ಯ ಕಾರ್ಡ್‌ಗಳನ್ನು ಅರ್ಹ ಫಲಾನುಭವಿಗಳಿಗೆ ಉಚಿತ ವಿತರಣೆ ಮಾಡಲಾಗುವುದು.

ಮಹಿಳೆಯರ ಆರೋಗ್ಯ ತಪಾಸಣೆಗೆ ಪ್ರತ್ಯೇಕ ಸ್ಥಳ ಇರಲಿದೆ. ಕೋವಿಡ್‌ ಲಸಿಕೆ ನೀಡಲಾಗುತ್ತದೆ. ತಾಯಿ ಮತ್ತು ಮಕ್ಕಳ ಆರೋಗ್ಯ, ಮೂಳೆ, ಕಣ್ಣು, ಕಿವಿ, ಮೂಗು, ದಂತ, ಚರ್ಮರೋಗಗಳನ್ನು ಕೂಡ ಪರೀಕ್ಷಿಸಲಾಗುವುದು ಎಂದರು.

ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಮೀನಾಕ್ಷಿ ಮಾತನಾಡಿ, ಆಯುರ್ವೆàದ ಚಿಕಿತ್ಸಾ ಪದ್ಧತಿ ಸೇರಿದಂತೆ ಭಾರತೀಯ ವೈದ್ಯ ಪದ್ಧತಿ ಇತರ ವಿಧಾನಗಳ ಕುರಿತು ಮೇಳದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next