Advertisement

ಆರೋಗ್ಯ ಕೇಂದ್ರವೇ ಅನಾರೋಗ್ಯ ಪೀಡಿತ!

05:16 PM Aug 26, 2018 | |

ಸಿರುಗುಪ್ಪ: ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಪಾಡಬೇಕಾದ ನಗರ ಆರೋಗ್ಯ ಕೇಂದ್ರವೇ ಅನಾರೋಗ್ಯ ಪೀಡಿತವಾಗಿದೆ.! ಹೌದು, ನಗರದ ಬೈಪಾಸ್‌ ರಸ್ತೆಯಲ್ಲಿ ನಿರ್ಮಿಸಿರುವ ನಗರ ಆರೋಗ್ಯ ಕೇಂದ್ರದ ಕಟ್ಟಡ ಶಿಥಿಲಗೊಂಡು, ಮೂಲ ಸೌಲಭ್ಯಗಳಿಂದ ವಂಚಿತಗೊಂಡು ಜನರ ಆರೋಗ್ಯ ರಕ್ಷಿಸಬೇಕಾದ ಆರೋಗ್ಯ ಕೇಂದ್ರದ ಕಟ್ಟಡವೇ ರೋಗಗ್ರಸ್ತವಾಗಿದೆ.

Advertisement

ಕಳಪೆ ಗುಣಮಟ್ಟದ ಕಾಮಗಾರಿ: ಕಳೆದ 15ವರ್ಷಗಳ ಹಿಂದೆ ನಗರಸಭೆ ಕಸಾಯಿಖಾನೆಗೆ ನಿರ್ಮಿಸಿದ್ದ ಕಟ್ಟಡದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿ ನಗರ ಆರೋಗ್ಯ ಕೇಂದ್ರ ನಡೆಸುತ್ತಿದ್ದು, ಕಟ್ಟಡ ನಿರ್ಮಿಸುವ ವೇಳೆ ಕಳಪೆ ಗುಣಮಟ್ಟ ಕಾಮಗಾರಿಯಿಂದಾಗಿ ಈ ಕಟ್ಟಡದ ಮೇಲ್ಛಾವಣಿಯ ಸಿಮೆಂಟ್‌ ಉದುರಿ ಬಿಳುತ್ತಿದೆ. ಕಬ್ಬಿಣದ ರಾಡುಗಳು ಎಲ್ಲೆಡೆ ಕಂಡು ಬರುತ್ತಿವೆ. 

ಸಣ್ಣ ಮಳೆ ಬಂದರೂ ತೊಟ್ಟಿಕ್ಕುವ ನೀರು: ಶಿಥಿಲಗೊಂಡಿರುವ ಕಟ್ಟಡದಲ್ಲಿ ಸಣ್ಣ ಮಳೆ ಬಂದರೆ ಸಾಕು ನೀರು ತೊಟ್ಟಿಕ್ಕುತ್ತವೆ. ವಾರಗಟ್ಟಲೆ ಮಳೆ ಬಂದರೆ ದಿನಗಟ್ಟಲೇ ನೀರು ಜಿನುಗುತ್ತಲೇ ಇರುತ್ತದೆ. ಇದರಿಂದಾಗಿ ಮಳೆಗಾಲದಲ್ಲಿ ಈ ಕೇಂದ್ರಕ್ಕೆ ಬರುವ ಜನ ಹಿಂದೇಟು ಹಾಕುತ್ತಿದ್ದು, ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಕೂಡ ಜೀವ ಕೈಲ್ಲಿಡಿದುಕೊಂಡು ಕಾರ್ಯನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಔಷಧಿ ಸಂಗ್ರಹ ಕೊಠಡಿ ವ್ಯವಸ್ಥೆ ಇಲ್ಲ: ಒಟ್ಟು ಆರು ಕೊಠಡಿ ಹೊಂದಿರುವ ಈ ಕೇಂದ್ರದಲ್ಲಿ ನೆಲಕ್ಕೆ ಹಾಸಿರುವ ಬಂಡೆಗಳು ಮತ್ತು ಕಾಂಕ್ರೀಟ್‌ ಕುಸಿದು ಹೋಗಿದ್ದು, ತಗ್ಗುಮಿಟ್ಟೆಗಳಾಗಿವೆ. ರೋಗಿಗಳಿಗೆ ವಿತರಿಸಲು ಸಂಗ್ರಹಿಸಿರುವ ಔಷಧಿ ಮತ್ತು ಮಾತ್ರೆಗಳನ್ನು ಸುರಕ್ಷಿತವಾಗಿಡಲು ರ್ಯಾಕ್‌ಗಳ ವ್ಯವಸ್ಥೆ ಇಲ್ಲದೆ ಬೇಕಾಬಿಟ್ಟಿಯಲ್ಲಿ ಮೂರು ಕೊಠಡಿಗಳಲ್ಲಿ ಹಾಕಲಾಗಿದೆ.

ಔಷಧಿ ಸಂಗ್ರಹ ಕೊಠಡಿಯು ಚಿಕ್ಕದಾಗಿದ್ದು, ಇಲ್ಲಿಯೂ ಔಷಧಿಗಳ ಪೆಟ್ಟಿಗೆಯಲ್ಲಿ ವಿತರಣೆಯಾಗದಿರುವ ಪೆಟ್ಟಿಗೆಗಳ ಸಂಗ್ರಹದ ಜೊತೆಗೆ ಕ್ಷಯರೋಗದ ರೋಗಿಗಳಿಗೆ ನೀಡಲಾದ ಮಾತ್ರೆಗಳ ಖಾಲಿ ಪೆಟ್ಟಿಗೆ ಹಾಕಿದ್ದು, ಔಷಧಿ ಸಂಗ್ರಹ ಕೊಠಡಿ ಡಸ್ಟ್‌ಬಿನ್‌ನಂತಾಗಿದೆ. ಅಷ್ಟೇ ಅಲ್ಲದೇ ಈ ಕೊಠಡಿಯಲ್ಲಿ ಮೇಲ್ಛಾವಣಿಯ ರಾಡ್‌ ನೆಲಕ್ಕೆ ಬಾಗಿದ್ದು, ಕೊಠಡಿಯೊಳಗೆ ಹೋಗುವವರಿಗೆ ಅಪಾಯ ತಂದೊಡ್ಡುವಂತಿದೆ. ಆದರೂ ಈ ರಾಡ್‌ ತೆರವುಗೊಳಿಸುವ ಕಾರ್ಯ ಮಾಡಿಲ್ಲ.

Advertisement

ಕುಡಿಯುವ ನೀರಿನ ವ್ಯವಸ್ಥೆ ಕೇಳಲೇ ಬೇಡಿ: ಇನ್ನು ಕುಡಿಯುವ ನೀರಿನ ವ್ಯವಸ್ಥೆಯಂತೂ ಕೇಳುವುದೇ ಬೇಡ. ಇಲ್ಲಿಗೆ ನೀರು ಪೂರೈಸಲು ತಂದಿರುವ ಪಂಪ್‌ ಸೆಟ್‌ ಮೋಟಾರ್‌ ಮೂಲೆ ಸೇರಿದ್ದು, ಹೊರಗಿನಿಂದಲೇ ನೀರು ತರುವುದು ಅನಿವಾರ್ಯವಾಗಿದೆ. ಸಿಬ್ಬಂದಿ ಮತ್ತು ರೋಗಿಗಳಿಗೆ ಕುಡಿಯುವ ನೀರು ಈ ಕೇಂದ್ರದಲ್ಲಿ ಕನಸಿನ ಮಾತಾಗಿದೆ.

 ಮೂಲೆ ಸೇರಿದ ಮಾಹಿತಿ ನೀಡುವ ನಾಮಫಲಕ: ಆರೋಗ್ಯ ಇಲಾಖೆಯ ಮಾಹಿತಿ ನೀಡುವ ನಾಮಫಲಕಗಳು ಧೂಳು ಹಿಡಿದು ಮೂಲೆ ಸೇರಿಕೊಂಡಿವೆ. ಒಟ್ಟಾರೆ ಈ ಆರೋಗ್ಯ ಕೇಂದ್ರದ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಯಾವಾಗ ಯಾರ ಮೇಲೆ ಬೀಳುತ್ತದೆಯೋ ಆ ದೇವರಿಗೇ
ಪ್ರೀತಿ.

ಕಟ್ಟಡ ನಿರ್ಮಾಣಕ್ಕೆ ಆಗ್ರಹ ಕಟ್ಟಡ ನಿರ್ವಹಣೆ ಮಾಡಬೇಕಾದ ನಗರಸಭೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಇತ್ತ ಕಟ್ಟಡದ ದುರಸ್ತಿಯನ್ನೂ ಮಾಡುತ್ತಿಲ್ಲ. ಅಲ್ಲದೇ, ಆರೋಗ್ಯ ಇಲಾಖೆಯಿಂದ ಕಟ್ಟಡ ರಿಪೇರಿಗಾಗಿ ಯಾವುದೇ ಅನುದಾನ ಬರುತ್ತಿಲ್ಲ. ಸಂಪೂರ್ಣ ಶಿಥಿಲಗೊಂಡಿರುವ
ಆರೋಗ್ಯ ಕೇಂದ್ರದ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕು. ಈ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು,
ಯಾವಾಗ ನಮ್ಮ ಮೇಲೆ ಬೀಳುತ್ತದೆಯೋ ಎನ್ನುವ ಭಯದಲ್ಲಿಯೇ ಈ ಆಸ್ಪತ್ರೆಗೆ ಬರುತ್ತಿದ್ದೇವೆ. ಆದ್ದರಿಂದ ಶಿಥಿಲಗೊಂಡಿರುವ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶಿಥಿಲಗೊಂಡ ಕಟ್ಟಡದಲ್ಲಿ ನಮ್ಮ ಸಿಬ್ಬಂದಿ ಕಾರ್ಯನಿರ್ವಹಿಸಲು ಹಾಗೂ ರೋಗಿಗಳಿಗೆ ತೊಂದರೆಯಾಗಿದೆ. ನಗರ ಆರೋಗ್ಯ ಕೇಂದ್ರದ ಪಕ್ಕದಲ್ಲಿರುವ ವಾಲ್ಮೀಕಿ ಭವನವನ್ನು ತಾತ್ಕಾಲಿಕವಾಗಿ ನೀಡಿದರೆ ಅಲ್ಲಿಯೇ ರೋಗಿಗಳಿಗೆ ಆರೋಗ್ಯ ಸೇವೆ ಆರಂಭಿಸಲಾಗುವುದು. ಈ ಬಗ್ಗೆ
ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒ ಹಾಗೂ ಶಾಸಕರ ಗಮನಕ್ಕೆ ತರಲಾಗಿದೆ.
  ಸುರೇಶ್‌ಗೌಡ, ತಾಲೂಕು ಆರೋಗ್ಯ ವೈದ್ಯಾಧಿಕಾರಿ, ಸಿರುಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next