ಮುದಗಲ್ಲ: ಪಟ್ಟಣ ಸಮೀಪದ ಮಾಕಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೇಜರ್ ಸರ್ಜರಿ ಅವಶ್ಯವಿದೆ. 30 ವರ್ಷಗಳ ಹಿಂದೆ ಪಿಎಚ್‌ಯುದಿಂದ ಪ್ರಾಥಮಿಕ ಆರೋಗ್ಯ ಕೇಂದ್ರವೆಂದು ಪರಿಗಣಿಸ ಲಾದ ಮಾಕಾಪೂರ ಆರೋಗ್ಯ ಕೇಂದ್ರಕ್ಕೆ ಇತ್ತೀಚಿಗಷ್ಟೆ ನೂತನ ಕಟ್ಟಡ ನಿರ್ಮಿಸಲಾಗಿದೆ. 4 ಸಬ್ ಸೆಂಟರ್‌ಗಳನ್ನು ಹೊಂದಿರುವ ಮಾಕಾಪೂರ ಆರೋಗ್ಯ ಕೇಂದ್ರ ಇತರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗಿಂತಲೂ ಹಿರಿದು. ಆದರೆ ಸಿಬ್ಬಂದಿ ಕೊರತೆ ಇರುವುದರಿಂದ ಆಸ್ಪತ್ರೆಯಲ್ಲಿ ಸ್ವತ್ಛತೆ ಮರೀಚಿಕೆಯಾಗಿದೆ. ದುರ್ವಾಸನೆ ಸ್ವಾಗತಿಸುತ್ತದೆ.
ಮಾಕಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬನ್ನಿಗೋಳ, ನಾಗಲಾಪೂರ, ದೇಸಾಯಿ ಭೋಗಾಪೂರ ಹಾಗೂ ಮಾಕಾಪೂರ ಸಬ್ ಸೆಂಟರ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಈ ಸಬ್ ಸೆಂಟರ್‌ಗಳಲ್ಲಿ ಸೇವೆ ಸಲ್ಲಿಸಲು ಸಿಬ್ಬಂದಿ ಕೊರತೆ ಎದುರಾಗಿದೆ.
ಮಾಕಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ 28ಹಳ್ಳಿ, ಹಾಗೂ 9 ತಾಂಡಾಗಳು ಕಾರ್ಯವ್ಯಾಪ್ತಿಗೆ ಬರುತ್ತಿದ್ದು, ನಾಗಲಾಪೂರ ಹಾಗೂ ದೇಸಾಯಿ ಭೋಗಾಪೂರ ಸಬ್ ಸೆಂಟರ್‌ಗೆ ಸೇರುವ ಜನಸಾಮಾನ್ಯರಿಗೆ ಮಾಕಾಪೂರ ಆಸ್ಪತ್ರೆ ತಲುಪಲು ಸೂಕ್ತ ವ್ಯವಸ್ಥೆ ಇಲ್ಲದೇ ಪರಿತಪಿಸುವಂತಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿ ದೊಡ್ಡದಾಗಿದ್ದು, ಸರಕಾರ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ.
ಸಿಬ್ಬಂದಿ ಕೊರತೆ : 40 ಸಾವಿರ ಜನಸಂಖ್ಯೆಗೆ ಕೇವಲ 1 ಆಯುಷ್ ವೈದ್ಯಾಧಿಕಾರಿ ಹಾಗೂ ಒಬ್ಬ ಮುಖ್ಯ ವೈದ್ಯಾಧಿಕಾರಿಗಳನ್ನು ಸರಕಾರ ನಿಯೋಜನೆಗೊಳಿಸಿದೆ. ಆದರೆ ಮುಖ್ಯ ವೈದ್ಯಾಧಿಕಾರಿಗಳು ಮುದಗಲ್ಲ ಆಸ್ಪತ್ರೆ ಸೇರಿದಂತೆ ಐದಾರು ಆಸ್ಪತ್ರೆಗಳಿಗೆ ಉಸ್ತುವಾರಿ ವಹಿಸಿರುವುದರಿಂದ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಮುಖ್ಯ ವೈದ್ಯಾಧಿ ಕಾರಿಗಳನ್ನು ಮಾಕಾಪೂರಗೆ ಮಾತ್ರ ಮೀಸಲಿರಿಸುವಂತೆ ಈ ಭಾಗದ ಜನಪ್ರತಿನಿಧಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಹಿರಿಯ ಆರೋಗ್ಯ ಸಹಾಯಕರ ಹುದ್ದೆ, ಡಿ.ದರ್ಜೆ ಸೇರಿ ವಿವೀಧ ಹುದ್ದೆಗಳು ಖಾಲಿ ಇದ್ದು, ಹಲವು ವರ್ಷ ಗತಿಸಿದರೂ ಇಲಾಖೆ ಅಧಿಕಾರಿಗಳು ಮಾತ್ರ ಮೌನ ಮುರಿಯುತ್ತಿಲ್ಲ. ಕೇಂದ್ರ ಸ್ಥಾನದಲ್ಲಿ ವೈದ್ಯರಿಲ್ಲದೇ ಇರುವುದರಿಂದ ರಾತ್ರಿ ವೇಳೆ ರೋಗಿಗಳು ಪರದಾಡುವಂತಾಗಿದೆ. ದೂರದ ಮುದಗಲ್, ಇಲಕಲ್, ಕುಷ್ಟಗಿಗಳಂತಹ ಪಟ್ಟಣ ಪ್ರದೇಶಗಳತ್ತ ಚಿಕಿತ್ಸೆಗೆ ತೆರಳುವಂತಾಗಿದೆ.
ದೇವಪ್ಪ ರಾಠೊಡ