Advertisement

ಒಮ್ಮೆ ಅಕಾಲಿಕ ಮಳೆ, ಮತ್ತೊಮ್ಮೆ ಬರಗಾಲ: ಪಂದ್ಯ ನಡೆಸುವ ಬಗ್ಗೆ ಬಿಸಿಸಿಐಗೆ ಶುರುವಾಗಿದೆ ಆತಂಕ

10:04 AM Jan 17, 2020 | keerthan |

ಮುಂಬೈ: ಇಡೀ ಜಗತ್ತಿನ ಪ್ರಾಕೃತಿಕ ಸ್ಥಿತಿಗತಿಯಲ್ಲಿ ಪ್ರಸ್ತುತ ತೀವ್ರ ಏರುಪೇರುಗಳಾಗುತ್ತಿವೆ. ಭಾರತದಲ್ಲೂ ಅದು ಜೋರಾಗಿಯೇ ಇದೆ. ಇದರ ನೇರ ಪರಿಣಾಮವಾಗಿರುವುದು ಕ್ರೀಡೆಗಳ ಮೇಲೆ. ಅದರಲ್ಲೂ ಕ್ರಿಕೆಟ್‌ನ ಮೇಲೆ. ಹವಾಮಾನ ವೈಪರೀತ್ಯದಿಂದ ಬಿಸಿಸಿಐ ತಬ್ಬಿಬ್ಟಾಗಿದೆ. ಯಾವಾಗ ಕ್ರಿಕೆಟ್‌ ಪಂದ್ಯಗಳನ್ನು ನಡೆಸುವುದು? ಎಲ್ಲಿ ನಡೆಸುವುದು? ಹೇಗೆ ನಡೆಸುವುದು? ಇದು ಸದ್ಯ ಬಿಸಿಸಿಐಯನ್ನು ಕಾಡುತ್ತಿರುವ ಪ್ರಶ್ನೆ. ಆದರೆ ಇದು ಬಿಸಿಸಿಐಗೆ ಮಾತ್ರವಲ್ಲ, ಇಡೀ ದೇಶಕ್ಕೇ ಎಚ್ಚರಿಕೆಯ ಸಂದೇಶ. ಇದನ್ನು ಅರಿಯದಿದ್ದರೆ, ಮುಂದೊಂದು ದಿನ ಜನಜೀವನವೇ ಅಸ್ತವ್ಯಸ್ತವಾಗಬಹುದು.

Advertisement

ಬೇರೆ ಯಾವುದೇ ಸನ್ನಿವೇಶವನ್ನು ಬಿಸಿಸಿಐ ನಿಯಂತ್ರಿಸಬಹುದು. ಆದರೆ ಹವಾಮಾನ ವೈಪರೀತ್ಯವನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ. ತನ್ನ ನಿಯಂತ್ರಣದಲ್ಲಿಲ್ಲದ ವಿಷಯವನ್ನು ನಿಭಾಯಿಸುವುದು ಹೇಗೆಂದು ತಿಳಿಯದೇ ಅದು ಸಂಕಷ್ಟಕ್ಕೆ ಸಿಲುಕಿದೆ. ಅದು ಎಷ್ಟೇ ಯೋಜಿತವಾಗಿ ಪಂದ್ಯಗಳನ್ನು ಆಯೋಜಿಸಿದರೂ, ಪರಿಸ್ಥಿತಿ ಅದರ ಕೈಮೀರಿ ಹೋಗುತ್ತಿದೆ. ಮಳೆ ಬರಲು ಸಾಧ್ಯವೇ ಇಲ್ಲ ಅಂದುಕೊಂಡಿದ್ದ ಕಡೆ ಮಳೆ ಬರುತ್ತಿದೆ. ಕೆಲವೊಮ್ಮೆ ಮಳೆ ಸರಿಯಾಗಿ ಬರದೆಯೂ ಅದು ಇಕ್ಕಟ್ಟಿಗೆ ಸಿಕ್ಕಿದೆ. ಮಳೆ ಬಂದು ತೊಂದರೆ: ಅನಿರೀಕ್ಷಿತವಾಗಿ ಮಳೆ ಬಂದು ಬಿಸಿಸಿಐ ಬಹಳ ತೊಂದರೆ ಅನುಭವಿಸಿದೆ.

ಸಾಮಾನ್ಯವಾಗಿ ಜೂನ್‌, ಜುಲೈ, ಆಗಸ್ಟ್‌, ಸೆಪ್ಟೆಂಬರ್‌ ಮಳೆಗಾಲ. ಉತ್ತರ ಭಾರತದಲ್ಲಿ ನವೆಂಬರ್‌, ಡಿಸೆಂಬರ್‌, ಜನವರಿಯಲ್ಲಿ ಪಂದ್ಯಗಳನ್ನು ನಡೆಸುವುದು ಕಷ್ಟ. ಮೇ, ಜೂನ್‌ನಲ್ಲಿ ವಿಪರೀತ ಸೆಖೆ. ಆಗ ಅಲ್ಲಿ ವಾಸಿಸುವುದೇ ಹಿಂಸೆ. ಇದನ್ನೆಲ್ಲ ನೋಡಿಕೊಂಡು ಅದು ಪಂದ್ಯಗಳನ್ನು ಆಯೋಜಿಸುತ್ತದೆ. ಈಗ ಸೆಪ್ಟೆಂಬರ್‌ ಮುಗಿದು, ಅಕ್ಟೋಬರ್‌ ಕಳೆದರೂ ಮಳೆ ಬರುತ್ತಲೇ ಇರುತ್ತದೆ. ಅದರ ಪರಿಣಾಮ ಸಂಪೂರ್ಣ ಪ್ರಕೃತಿ ಚಕ್ರ ವ್ಯತ್ಯಾಸವಾಗಿ ಬಿಸಿಸಿಐ ಗೊಂದಲಗೊಂಡಿದೆ. ಇದಕ್ಕೆ ಇತ್ತೀಚೆಗಿನ ಉದಾರಣೆ ಭಾರತ-ಶ್ರೀಲಂಕಾ ಟಿ20 ಪಂದ್ಯ. ಜ.5ರಂದು ಅಸ್ಸಾಂನ ಗುವಾಹಟಿಯಲ್ಲಿ ಆಯೋಜಿಸಲ್ಪಟ್ಟಿದ್ದ ಪಂದ್ಯ ದಿಢೀರ್‌ ಮಳೆಯಿಂದ ರದ್ದಾಯಿ ತು. ಜ.2ರಿಂದ 8ವರೆಗೆ ಅಸ್ಸಾಂನಲ್ಲಿ ಮಳೆ ಸುರಿಯುತ್ತಲೇ ಇತ್ತು.

ರಾಜ್‌ಕೋಟ್‌ನಲ್ಲಿ ಕಳೆದವರ್ಷ ನವೆಂಬರ್‌ನಲ್ಲಿ ನಡೆದ ಭಾರತ-ಬಾಂಗ್ಲಾ ಟಿ20 ಪಂದ್ಯ ಸೈಕ್ಲೋನ್‌ ಭೀತಿ ಎದುರಿಸಿತ್ತು. ಇನ್ನು ದೇಶೀಯ ಕ್ರಿಕೆಟ್‌ನಲ್ಲೂ ಅಂತಹದ್ದೇ ಸ್ಥಿತಿಯಿದೆ. ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಿ ಉಂಟಾದ ವಿಪರೀತ ಮಳೆಯಿಂದ ವಿಜಯ್‌ ಹಜಾರೆ ಏಕದಿನ ಕೂಟ ತೊಂದರೆಗೆ ಸಿಲುಕಿತು. ಉತ್ತರಾಖಂಡದ ಡೆಹ್ರಾಡೂನ್‌, ಗುಜರಾತ್‌ನ ಬರೋಡ, ಕರ್ನಾಟಕದ ಆಲೂರು, ಬೆಂಗಳೂರು, ರಾಜಸ್ಥಾನದ ಜೈಪುರದಲ್ಲಿ ಆಯೋಜಿಸಲ್ಪಟ್ಟಿದ್ದ ಪಂದ್ಯಗಳು ಪೂರ್ತಿಯಾಗಿ ಕೊಚ್ಚಿಕೊಂಡು ಹೋಗಿದ್ದವು. ಎರಡು ಕ್ವಾರ್ಟರ್‌ ಫೈನಲ್‌ ಹಾಗೂ ಫೈನಲ್‌ ಪಂದ್ಯಗಳು ನಿಗದಿತ ದಿನದಲ್ಲಿ ಅರ್ಧಂಬರ್ದ ನಡೆದು, ಮರುದಿನ ಮುಂದುವರಿದಿದ್ದವು!

ಹೊಗೆಯಿಂದಲೂ ತೊಂದರೆ
ಮಳೆ ಬರುವುದು, ಬರದೇ ಇರುವುದು ಒಂದು ರೀತಿಯ ಸಮಸ್ಯೆಯಾದರೆ, ಊಹೆ ಮಾಡಲು ಸಾಧ್ಯವಾಗದಂತಹ ಇನ್ನೊಂದು ತೊಂದರೆಯೂ ಎದುರಾಗಿದೆ. ಅದು ದೆಹಲಿಯ ವಾಯು ಮಾಲಿನ್ಯ. ಹರ್ಯಾಣ-ಪಂಜಾಬ್‌ ರೈತರು ಭತ್ತದ ಗದ್ದೆಗಳಲ್ಲಿನ ಹುಲ್ಲನ್ನು ಸುಡುವುದರಿಂದ, ಅಲ್ಲಿಂದ ವಿಪರೀತ
ಹೊಗೆಯೇಳುತ್ತಿದೆ. ಅದು ದೆಹಲಿಗೆ ತಲುಪಿ, ಅಲ್ಲಿನ ಜನ ಉಸಿರಾಡುವುದೇ ಕಷ್ಟವಾಗಿದೆ. ಹಾಗಾಗಿ ಅಲ್ಲಿ ಪಂದ್ಯಗಳನ್ನು ನಡೆಸಿದ ಸಂದರ್ಭಗಳಲ್ಲಿ ಬಿಸಿಸಿಐ ಮುಜುಗರ ಎದುರಿಸಿದೆ. ಉಳಿದ ಕ್ರೀಡೆಗಳಿಗೆ ಅಂತಹ ಸಮಸ್ಯೆಯಿಲ್ಲ ಕ್ರಿಕೆಟ್‌ ಹೊರತುಪಡಿಸಿ ಉಳಿದ ಯಾವ ಕ್ರೀಡೆಗಳೂ ಅಷ್ಟು ದೀರ್ಘ‌ಕಾಲ ನಡೆಯುವುದಿಲ್ಲ. ಗರಿಷ್ಠವೆಂದರೆ ಒಂದು, ಒಂದೂವರೆ ಗಂಟೆಯಲ್ಲಿ ಮುಗಿಯುತ್ತವೆ. ಇನ್ನು ಕೆಲವು ಆಟಗಳನ್ನು ಒಳಾಂಗಣದಲ್ಲೇ ಆಡಬಹುದು. ಆದ್ದರಿಂದ ಅವುಗಳಿಗೆ ತಾಪತ್ರಯವಿಲ್ಲ. ಕ್ರಿಕೆಟ್‌ ಮತ್ತೆ ಮೈದಾನದಲ್ಲೇ, ಅದೂ ದೀರ್ಘ‌ ಕಾಲ ಆಡಬೇಕಾಗಿರುವುದರಿಂದ ಪರಿಹಾರ ಕಾಣದೇ ಕಂಗಾಲಾಗಿದೆ.

Advertisement

ಮಳೆ ಬರದೆಯೂ ಇಕ್ಕಟ್ಟು!
ಕೆಲವು ವರ್ಷಗಳ ಹಿಂದೆ ದೇಶಾದ್ಯಂತ ಐಪಿಎಲ್‌ ಪಂದ್ಯಗಳು ಸಂಕಷ್ಟಕ್ಕೆ ಸಿಲುಕಿದ್ದವು. ಇದಕ್ಕೆ ಕಾರಣ ಬರ. ಮಳೆ ಬರದೇ ಇರುವುದರಿಂದ ಎಲ್ಲ ನೀರಿಗೆ ಬಹಳ ಸಂಕಷ್ಟ ಇದೆ. ಕ್ರಿಕೆಟ್‌ ಮೈದಾನಗಳನ್ನು ನಿಭಾಯಿಸಲು ವಿಪರೀತ ನೀರು ಬೇಕು. ಆದ್ದರಿಂದ ಪಂದ್ಯಗಳನ್ನೇ ಮುಂಬೈನಿಂದ ಸ್ಥಳಾಂತರಿಸಿ ಎಂದು ಒಬ್ಬ ಸಾಮಾಜಿಕ ಕಾರ್ಯಕರ್ತರು ಅರ್ಜಿ ಹಾಕಿದ್ದರು. ಆದ್ದರಿಂದ ಅರ್ಧಕ್ಕರ್ಧ ಪಂದ್ಯಗಳು ಬೇರೆ ರಾಜ್ಯಕ್ಕೆ ಸ್ಥಳಾಂತರವಾಗಿದ್ದವು. ಆಗ ಇಡೀ ದೇಶದಲ್ಲಿ ಅದೇ ಮಾದರಿಯ ಅರ್ಜಿಗಳು ಸಲ್ಲಿಕೆಯಾಗಿ ಬಿಸಿಸಿಐ ಗೊಂದಲ ಕ್ಕೊಳಗಾಗಿತ್ತು. ಮುಂದೆ ಬಿಸಿಸಿಐ ತಾನು ಶುದ್ಧ ನೀರನ್ನು ಬಳಸುವುದಿಲ್ಲ. ಕೊಳಚೆ ನೀರನ್ನು ಸಂಸ್ಕರಿಸಿ ಬಳಸುತ್ತೇನೆಂದು ಹೇಳಿ ಮತ್ತೆ ಮುಂಬೈನಲ್ಲಿ ಪಂದ್ಯವಾಡಿಸುವ ಅವಕಾಶ ಪಡೆದಿತ್ತು. ಬೆಂಗಳೂರಿನಲ್ಲೂ ಅಂತಹದ್ದೇ ಅರ್ಜಿ ಸಲ್ಲಿಕೆಯಾಗಿದ್ದರೂ ನ್ಯಾಯಪೀಠ ಅದನ್ನು ಪುರಸ್ಕರಿಸಿರಲಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next