Advertisement
ಕೆ.ಜಿ.ಹನುಮಂತರಾಯಪ್ಪ: ನೆಲಮಂಗಲ ಸಮೀಪದ ಕಾಚನಹಳ್ಳಿ ಮೂಲದ ಕೆ.ಜಿ.ಹನುಮಂತರಾಯಪ್ಪ ಬಹಳ ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆನಂತರ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದು, ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿದ್ದಾರೆ.
Related Articles
Advertisement
ಎಂ.ರಂಗಪ್ಪ: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರಾಗಿದ್ದ ಎಂ.ರಂಗಪ್ಪ, ರಿಯಲ್ ಎಸ್ಟೇಟ್ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದರು. ಅವರಿಗೆ ಪತ್ನಿ, ಮೂವರು ಮಕ್ಕಳು ಇದ್ದಾರೆ.
ನಿರ್ಲಕ್ಷ್ಯ ವಹಿಸುತ್ತಿದ್ದಾರೆ: “ನಮ್ಮ ತಂದೆಯ ಸಾವಿಗೆ ಪ್ರತಿಷ್ಠಿತ ಹೋಟೆಲ್‌ನ ಭದ್ರತಾ ವೈಫಲ್ಯವೇ ಕಾರಣ’ ಎಂದು ದುರ್ಘಟನೆಯಲ್ಲಿ ಮೃತಪಟ್ಟ ಲಕ್ಷ್ಮೀನಾರಾಯಣ ಪುತ್ರ ಅಭಿಲಾಶ್ ಆರೋಪಿಸಿದ್ದಾರೆ. ಸಾಮಾನ್ಯ ಮಳಿಗೆಗಳಲ್ಲೇ ಲೋಹಶೋಧಕ ಯಂತ್ರ ಅಳವಡಿಸಿರುತ್ತಾರೆ. ಆದರೆ, ಅಷ್ಟು ದೊಡ್ಡ ಹೋಟೆಲ್‌ನಲ್ಲಿ ಮೆಟಲ್ ಡಿಟೆಕ್ಟರ್ ಇಲ್ಲದಿರುವುದು ಬೇಸರದ ಸಂಗತಿ.
ಹೀಗಾಗಿ ದುರ್ಘಟನೆಗೆ ಹೋಟೆಲ್‌ನ ಆಡಳಿತವೇ ಕಾರಣ ಎಂದು ಆರೋಪಿಸಿದರು. ಅಲ್ಲದೆ, ಮುಂಜಾನೆಯಿಂದ ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ನಿರಂತರ ಸಂಪರ್ಕಿಸಲಾಗುತ್ತಿದೆ. ಆದರೆ, ಯಾರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಗೊಂದಲದ ಉತ್ತರ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೊನೆಯ ಕರೆಗಳು: ದುರ್ಘಟನೆಯಲ್ಲಿ ಮೃತಪಟ್ಟ ಹನುಮಂತರಾಯಪ್ಪ ಮತ್ತು ಲಕ್ಷ್ಮೀನಾರಾಯಣ ಕೊನೇ ಬಾರಿಗೆ ತಮ್ಮ ಪುತ್ರರಿಗೆ ಕರೆ ಮಾಡಿದ್ದಾರೆ. ಭಾನುವಾರ ಬೆಳಗ್ಗೆ ಏಳು ಗಂಟೆ ಸುಮಾರಿಗೆ ಕೊಲಂಬೋ ವಿಮಾನ ನಿಲ್ದಾಣದಲ್ಲಿರುವುದಾಗಿ ತಂದೆ ಕರೆ ಮಾಡಿದ್ದು, ತಮ್ಮನ್ನು ಸಂಪರ್ಕಿಸಲು ಅಂತಾರಾಷ್ಟ್ರೀಯ ನಂಬರ್ ಕೂಡ ಕೊಟ್ಟಿದ್ದರು. ಬಳಿಕ 8.15ರ ಸುಮಾರಿಗೆ ಮತ್ತೂಂದು ಕರೆ ಮಾಡಿದ್ದರು ಎಂದು ಲಕ್ಷ್ಮೀನಾರಾಯಣ ಪುತ್ರ ಅಭಿಲಾಶ್ ಹೇಳಿದರು.
ಹನುಮಂತರಾಯಪ್ಪ ಕೂಡ ಪುತ್ರ ಚೇತನ್‌ಗೆ ಕರೆ ಮಾಡಿ ಕೆಲ ಹೊತ್ತು ಮಾತನಾಡಿದ್ದಾರೆ. ಶಿವಕುಮಾರ್ ಸಹ ಪುತ್ರಿಗೆ ಕರೆ ಮಾಡಿ ಮಾತನಾಡಿದ್ದಾರೆಂದು ಅವರ ಸಂಬಂಧಿಗಳು ಹೇಳಿದರು. ಆನಂತರ ಮಾಧ್ಯಮಗಳಲ್ಲಿ ಬಾಂಬ್ ಸ್ಫೋಟದ ಸುದ್ದಿ ಬಿತ್ತರವಾಗುತ್ತಿದ್ದಂತೆ ಆತಂಕಗೊಂಡ ಕುಟುಂಬ ಸದಸ್ಯರು ಕೂಡಲೇ ಅಂತಾರಾಷ್ಟ್ರೀಯ ನಂಬರ್‌ಗೆ ಸಂಪರ್ಕಿಸಿದರೂ ಸಾಧ್ಯವಾಗಿಲ್ಲ.
ಶ್ರೀಲಂಕಾಗೆ ಹೊರಟ ಕುಟುಂಬಸ್ಥರು: ಮೃತ ಸುದ್ದಿ ಖಚಿತವಾಗುತ್ತಿದ್ದಂತೆ ಶಾಸಕರಾದ ಮಂಜುನಾಥ್, ವಿಶ್ವನಾಥ್, ಶ್ರೀನಿವಾಸಮೂರ್ತಿ ಹಾಗೂ ಇತರೆ ಮುಖಂಡರ ಜತೆ ಮೃತ ಕುಟುಂಬದ ಸದಸ್ಯರು ಶ್ರೀಲಂಕಾಕ್ಕೆ ದೌಡಾಯಿಸಿದ್ದಾರೆ.
ಶ್ರೀಲಂಕಾದಲ್ಲಿರುವ ಭಾರತೀಯ ಕಚೇರಿಯ ಇಬ್ಬರು ಅಧಿಕಾರಿಗಳು ಭಾರತೀಯರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಒಂದೆರಡು ದಿನಗಳಲ್ಲಿ ಮುಕ್ತಾಯಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲಿಗೆ ಹೋಗುವ ಸಂಬಂಧಿಗಳಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುವುದು. ಮೃತ ದೇಹಗಳನ್ನು ಆದಷ್ಟು ಬೇಗ ತಾಯ್ನಾಡಿಗೆ ಕರೆ ತರಲಾಗುವುದು.-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ