Advertisement
ಊರ ಮನೆ, ಕೃಷಿಕ ವರ ಎಂಬ ಅರ್ಹತೆ ಹತ್ತಿಪ್ಪತ್ತು ವರ್ಷಗಳ ಹಿಂದೆ ಹೆಣ್ಣು ಹೆತ್ತವರ ಪಾಲಿಗೆ ಅಷ್ಟೇನೂ ಅಪಥ್ಯವಾಗಿರಲಿಲ್ಲ. ಪೌರೋಹಿತ್ಯ, ಅಡುಗೆ, ವ್ಯಾಪಾರ, ಹೊಟೇಲ್ ಕೂಡಾ ಒಂದಿಷ್ಟು ಮಂದಿಗೆ ಒಪ್ಪಿಗೆಯಾಗಿತ್ತು. ಆದರೆ, ಕಳೆದ ಒಂದು ದಶಕದಲ್ಲಿ ಈ ವಧು-ವರ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಊರಿನಲ್ಲಿರುವವರನ್ನು ಮದುವೆಯಾಗಲು ಮುಂದೆ ಬರುವ ಹುಡುಗಿಯರ ಸಂಖ್ಯೆಯಲ್ಲಿ ತೀರಾ ಇಳಿಕೆಯಾಗಿದೆ. ಹುಡುಗರ ಶೈಕ್ಷಣಿಕ ಅರ್ಹತೆ ಏನೇ ಇರಲಿ, ಊರಿನಲ್ಲಿದ್ದರೆ ಅವರದ್ದೆ ಅರ್ಹತೆಯ ಹುಡುಗಿಯರು ಸಿಗುತ್ತಿಲ್ಲ ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ.
Related Articles
Advertisement
ಈ ಎರಡು ಮುಖದ ಹಾವು ಅದೃಷ್ಟ ತಂದುಕೊಡುತ್ತದೆ ಎಂಬ ದೊಡ್ಡ ಹುಸಿ ನಂಬಿಕೆ ಇದೆ. ಈ ಹಾವನ್ನು ಹಿಡಿಯುವವರಾರೋ? ಅದನ್ನು ಮಾರಾಟ ಮಾಡುವವರಾರೊ? ಅದನ್ನು ಕೊಳ್ಳುವವರಾರೊ? ಅದಕ್ಕೆ ಲಕ್ಷಗಟ್ಟಲೆ ತೆರುವ ಮೂರ್ಖನಾರೋ ಎಂಬುದು ತಿಳಿಯುವುದು ಅತಿ ಕ್ಲಿಷ್ಟಕರ ಕೆಲಸ. ಏಕೆಂದರೆ, ಇಲ್ಲಿ ಯಾರಿಗೂ ಯಾರ ಪರಿಚಯವೋ ಇರುವುದಿಲ್ಲ. ಬರೀ ಮಾತಿನ ಮೂಲಕ ನಿರ್ಮಾಣಗೊಳ್ಳುವ ಮಾರಾಟ ಜಾಲವದು. ಯಾವುದೋ ಒಂದು ಹಂತದಲ್ಲಿ ಈ ಜಾಲ ತುಂಡಾಗುತ್ತದೆ, ಕೊಟ್ಟವ ಕೋಡಂಗಿ, ಇಸುಕೊಂಡವ ಈರಭದ್ರ ಎಂಬಂತಾಗುತ್ತದೆ.
ಮದುವೆಯ ಏಜೆಂಟರ ಕಥೆ ಇದಕ್ಕಿಂತ ಭಿನ್ನವಾಗಿಲ್ಲ. ನಂಬಲು ಕಷ್ಟವಾಗಬಹುದು. ಆದರೆ, ಈ ಏಜೆಂಟರ ಕನಿಷ್ಠ ಶುಲ್ಕ ರೂಪಾಯಿ 50,000ದಿಂದ ಆರಂಭವಾಗುತ್ತದೆ. 2-3 ಲಕ್ಷ ಕೊಟ್ಟರೆ ಮಾತ್ರ ಒಳ್ಳೆಯ ಸಂಬಂಧಗಳನ್ನು ಕುದುರಿಸಲಾಗುತ್ತದೆ. ಅಂದ ಹಾಗೆ, ಈ ಏಜೆಂಟರನ್ನು ನೋಡಿದವರು ಯಾರೂ ಇರುವುದಿಲ್ಲ. ಒಬ್ಬರಿಂದ ಇನ್ನೊಬ್ಬರಿಗೆ ಈತನ ಮೊಬೈಲ್ ನಂಬರ್ ಕೈ ಬದಲಾಗುತ್ತಿರುತ್ತದೆ. ಹಣವನ್ನು ಕೂಡ ಆತ ಮೂರನೆಯ ವ್ಯಕ್ತಿಯ ಮೂಲಕ ಸಂಗ್ರಹಿಸುತ್ತಾನೆ. ಆತನ ಊರು ಯಾವುದೋ; ಆತ ಹುಡುಕಿ ಕೊಡುವ ಹುಡುಗಿ ಇನ್ಯಾವುದೋ ಊರಿನದ್ದು.
ಮದುವೆ ಮಾತುಕತೆಯ ಆರಂಭದಲ್ಲಿ ಆತ ಹುಡುಗನ ಹೆತ್ತವರಿಗೆ ಕಳುಹಿಸಿಕೊಡುವ ಹುಡುಗಿಯರ ಪೋಟೋಗಳು ಒಂದು; ಆದರೆ ಹುಡುಗ-ಹುಡುಗಿ ಮಾತುಕತೆ ಸಂದರ್ಭದಲ್ಲಿ ಅದೇ ಹುಡುಗಿಯರ ಮುಖ ಚಹರೆಯೇ ಬದಲಾಗಿರುತ್ತದೆ. ಹಲವು ಸಂದರ್ಭಗಳಲ್ಲಿ ಮದುವೆಯ ಹಿಂದಿನ ದಿನ ನಿಶ್ಚಿತಾರ್ಥಗೊಂಡ ಹುಡುಗಿ ಇಲ್ಲವಾಗಿ, ಇನ್ನೊಂದು ಹುಡುಗಿ ಮದುವೆ ಕಲ್ಯಾಣಮಂಟಪಕ್ಕೆ ಬಂದಿರುತ್ತಾಳೆ. ಹುಡುಗನ ಕಡೆಯವರು ಸ್ವಲ್ಪ ಯಾಮಾರಿದರೂ ಏಜೆಂಟರು ತಮ್ಮ ಕೈಚಳಕ ಮೆರೆದಿರುತ್ತಾರೆ. ಒಂದೊಮ್ಮೆ ವಾಗ್ವಾದಕ್ಕಿಳಿದರೆ ಈ ಏಜೆಂಟರು ಪ್ರತಿಯೊಂದಕ್ಕೂ ಒಂದು ಹಸಿ ಸುಳ್ಳನ್ನು ಸಿದ್ಧಪಡಿಸಿಕೊಂಡಿರುತ್ತಾರೆ. ಒಂದೊಮ್ಮೆ ವರನ ಕಡೆಯವರು ಗಲಾಟೆ ಮಾಡಿದರೆ ಅವರಿಗೆ ಹುಡುಗಿಯೂ ಇಲ್ಲ; ಕೊಟ್ಟ ಹಣವೂ ಇಲ್ಲ. ಎಲ್ಲವೂ ಕ್ಯಾಶ್ ವ್ಯವಹಾರ ಆಗಿರುವುದರಿಂದ ಪೊಲೀಸರ ನೆರವೂ ಪಡೆಯುವ ಹಾಗಿಲ್ಲ.
ಈ ಏಜೆಂಟರ ಕಾರ್ಯವೈಖರಿಯೇ ತುಂಬಾ ವಿಚಿತ್ರವಾದದ್ದು. ಅವರ ಮೊಬೈಲ್ ನಂಬರ್ ಹೊರತುಪಡಿಸಿದರೆ, ನಿಮಗೆ ಇನ್ನಾವುದೇ ವಿವರ ಪತ್ತೆ ಹಚ್ಚಲು ಸಾಧ್ಯವೇ ಇರುವುದಿಲ್ಲ. ಅವರದ್ದೇ ಒಂದು ರಹಸ್ಯ ನೆಟ್‌ವರ್ಕ್. ಅವರು ಹೇಳುವ ಅವರ ಊರೇ ಬೇರೆ; ಅವರು ತೋರಿಸುವ ಹುಡುಗಿಯ ವಿಳಾಸ ಇನ್ನಾವುದೋ ಮೂಲೆಯಲ್ಲಿರುತ್ತದೆ. ಅವರ ಬತ್ತಳಿಕೆಯಲ್ಲಿರುವ ಹುಡುಗಿಯರ ವಿವರಗಳೂ ಹಾಗೇ ಇರುತ್ತವೆ. ವಿಚ್ಛೇದನ, ನಿರ್ಗತಿಕ ಮನೆಯ ಹುಡುಗಿಯರಿಗೆ ಸುಲಭವಾಗಿ ಮದುವೆ ಮಾಡಿಸಿಕೊಡುವುದಾಗಿ ಅವರ ಕಡೆಯಿಂದಲೂ ಒಂದಿಷ್ಟು ಹಣ ಕಿತ್ತುಕೊಂಡಿರುತ್ತಾರೆ. ಹೆಚ್ಚು ಹಣ ಕೊಟ್ಟರೆ ಒಳ್ಳೆಯ ಸಂಬಂಧ ಕುದುರಿಸುತ್ತಾರೆ. ಒಂದೊಮ್ಮೆ ಮತ್ತೂ ಹೆಚ್ಚು ಹಣ ಕೊಟ್ಟರೆ, ಮದುವೆ ಮಂಟಪದಲ್ಲೇ ಮದುವೆ ಮುರಿಸಲೂ ಇವರು ಹಿಂಜರಿಯುವುದಿಲ್ಲ.
ಈ ಏಜೆಂಟರ ಇನ್ನೊಂದು ವೈಶಿಷ್ಟ್ಯ ಎಂದರೆ ಒಂದೇ ಜಿಲ್ಲೆಯ ಒಳಗೆ ಅವರೆಂದೂ ವಧೂಗಳನ್ನು ತೋರಿಸುವುದಿಲ್ಲ. ಒಂದೆರಡು ಜಿಲ್ಲೆಗಳಷ್ಟಾದರೂ ದೂರವಿರಬೇಕು. ಪಕ್ಕದ ರಾಜ್ಯದವರಾದರೆ ಇವರಿಗೆ ಇನ್ನಷ್ಟು ಹೆಚ್ಚು ಲಾಭ. ಒಂದಕ್ಕೆರಡು ಹಣ ವಸೂಲಿ ಮಾಡುವ ಕಲೆ ಇವರಿಗೆ ಕರಗತವಾಗಿರುತ್ತದೆ.
ಬೆಳಗಾವಿ, ಬೀದರ್ ಹೀಗೆ ಮಹಾರಾಷ್ಟ್ರದ ಗಡಿ ಭಾಗಗಳಲ್ಲಿ ಹಲವಾರು ಬಾರಿ ವಿವಾದ ಎಬ್ಬಿಸುವುದು ದೂರದ ರಾಜ್ಯಗಳಿಗೆ ಹುಡುಗಿಯರನ್ನು ಮದುವೆ ಮಾಡಿಕೊಡುವ ಗ್ಯಾಂಗ್‌ಗಳ ಬಗ್ಗೆ. ಹಲವಾರು ದಶಕಗಳಿಂದ ಈ ಬಗ್ಗೆ ಹಲವು ವಾದ-ವಿವಾದಗಳಾಗುತ್ತಿವೆ. ಕರ್ನಾಟಕದ ಘಟ್ಟದ ಕೆಳಗಿನ ಪ್ರದೇಶಗಳಿಗೆ ಹೋಲಿಸಿದರೆ, ಹೆಣ್ಣು ಮಕ್ಕಳ ಸಂಖ್ಯೆ ಗುಜರಾತ್, ಹರ್ಯಾಣ, ರಾಜಸ್ತಾನದಂತಹ ರಾಜ್ಯಗಳಲ್ಲಿ ಇನ್ನಷ್ಟು ಕಡಿಮೆ ಇದೆ. ಹೀಗಾಗಿ ಮದುವೆ ವಯಸ್ಸಿನ ತಮ್ಮ ಗಂಡು ಮಕ್ಕಳಿಗೆ ಮದುವೆ ಮಾಡಲು, ಇಂತಹ ಏಜೆಂಟರ ಕಾಲು ಹಿಡಿಯುವುದು ಗಂಡು ಹೆತ್ತವರ ಪಾಲಿಗೆ ಅನಿವಾರ್ಯ. ಹಲವು ಸಂದರ್ಭಗಳಲ್ಲಿ ಈ ಕುರಿತ ಮಾತುಕತೆಗಳು ದಾರಿ ತಪ್ಪಿ , ಇನ್ನೊಂದು ಅನರ್ಥಕ್ಕೆ ಕಾರಣವಾಗುತ್ತದೆ. ಒಟ್ಟಾರೆ ಮದುವೆಯ ಮಾರುಕಟ್ಟೆಯ ವ್ಯಾಪ್ತಿ ಸುಲಭದ ಕಲ್ಪನೆಗೆ ನಿಲುಕುವಂತದ್ದಲ್ಲ.
ಮದುವೆಗೆ ಸಂಬಂಧಿಸಿ, ನಮ್ಮಲ್ಲಿ ಇರುವ ಕಟ್ಟುಪಾಡುಗಳು ಒಂದೆರಡಲ್ಲ. ಆದರೆ, ಬದಲಾದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯಲ್ಲಿ, ಈ ಕಟ್ಟುಪಾಡುಗಳು ಬಹುತೇಕ ಧ್ವಂಸವಾಗಿವೆ. ಒಂದೊಮ್ಮೆ ಮದುವೆಗೆ ಸಂಬಂಧಿಸಿ, ನಮ್ಮ ಹಿರಿಯರು ಇಷ್ಟು ಕಟ್ಟುಪಾಡುಗಳನ್ನು ವಿಧಿಸದೆ ಇರುತ್ತಿದ್ದರೆ, ಹೆಣ್ಣು ಮಕ್ಕಳ ಬಗೆಗಿನ ಕೌಟುಂಬಿಕ ಧೋರಣೆಗಳು ಒಂದಿಷ್ಟು ಮೆದುವಾಗಿದ್ದರೆ ಇಂತಹ ಪರಿಸ್ಥಿತಿ ಬದಲಾಗುತ್ತಿತ್ತೇನೋ. ಆದರೆ ಈ ಬದಲಾದ ಸಂಕೀರ್ಣ ಪರಿಸ್ಥಿತಿ ಕೂಡಾ ಇನ್ನೊಂದು ತೆರನಾದ ಗೋಜಲಿಗೆ ಕಾರಣವಾಗುತ್ತಿದೆ. ಈ ಮದುವೆ ಕುರಿತ ಸಮಸ್ಯೆಗೆ ಒಂದಿಷ್ಟು ಪರಿಹಾರಗಳನ್ನು ಆಗಾಗ್ಗೆ ಮುಂದಿಡಲಾಗುತ್ತಿದೆ. ಆದರೆ, ಅವಾವುದೂ ವಾಸ್ತವಿಕವಲ್ಲ.
– ಶ್ರೀನಿವಾಸ ಎಂ.