ಮಲಪ್ಪುರಂ: ದುಬೈನಿಂದ 191 ಪ್ರಯಾಣಿಕರನ್ನು ಕರೆತರುತ್ತಿದ್ದ ಏರ್ ಇಂಡಿಯಾ ವಿಮಾನ ಕೇರಳ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿದ್ದು, ಅಪಘಾತದಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ ದುರಂತದಲ್ಲಿ ಬದುಕುಳಿದಿರುವ ಪ್ರಯಾಣಿಕರು “ತಮ್ಮನ್ನು ಬದುಕಿಸಿ ಪ್ರಾಣ ತ್ಯಾಗ ಮಾಡಿರುವ ಪೈಲಟ್” ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಘಟನೆಯಲ್ಲಿ ಇಬ್ಬರು ಪೈಲಟ್ ಸೇರಿದಂತೆ 20 ಮಂದಿ ಸಾವನ್ನಪ್ಪಿದ್ದಾರೆ. 100ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ದುಬೈಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಜನರನ್ನು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೇರಳಕ್ಕೆ ಕರೆ ತರುವ ವೇಳೆ ಈ ದುರಂತ ಸಂಭವಿಸಿದೆ.
“ಆದರೆ ಧೈರ್ಯ ಶಾಲಿ ಪೈಲಟ್ ಹಾಗೂ ಸ್ಥಳೀಯ ನಿವಾಸಿಗಳು ಭಾರೀ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ವಿಮಾನ ಅಪಘಾತಕ್ಕೀಡಾದ ಬೆನ್ನಲ್ಲೇ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಹೊಗೆಯನ್ನು ನಂದಿಸಿ, ಬೆಂಕಿ ಹಿಡಿಯುವುದನ್ನು ತಪ್ಪಿಸಿದ್ದಾರೆ ಎಂದು ಬದುಕುಳಿದ ಪ್ರಯಾಣಿಕರು ತಿಳಿಸಿದ್ದಾರೆ.
ಇದನ್ನೂ ಓದಿ: ಏನಿದು ಟೇಬಲ್ ಟಾಪ್ ರನ್ ವೇ? ಭಾರತದಲ್ಲಿ ಎಷ್ಟಿವೆ? ಇವು ಯಾಕೆ ಅಪಾಯಕಾರಿ?
ವಿಂಗ್ ಕಮಾಂಡರ್ ದೀಪಕ್ ವಸಂತ್ ಸಾಠೆ(59ವರ್ಷ) ಅವರು ಭಾರತೀಯ ವಾಯುಪಡೆಯಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 1981ರಲ್ಲಿ ಹೈದರಾಬಾದ್ ಸಮೀಪದ ದುಂಡಿಗಲ್ ನಲ್ಲಿ ವಾಯುಪಡೆ ಅಕಾಡೆಮಿಯಲ್ಲಿ ಪದವಿ ಪಡೆದ ಸಂದರ್ಭದಲ್ಲಿ ಸಾಠೆ ಅವರ ಕೌಶಲ್ಯವನ್ನು ಪರಿಗಣಿಸಿ ಗೌರವಿಸಲಾಗಿತ್ತು ಎಂದು ವರದಿ ವಿವರಿಸಿದೆ.
ಸ್ಕ್ವಾಡ್ರನ್ ಲೀಡರ್ ಆಗಿ ನಿವೃತ್ತಿ ಪಡೆದ ಬಳಿಕ ಸಾಠೆ ಅವರು ನಾಗರಿಕ ವಿಮಾನ ಸೇವೆಗೆ ನೇಮಕಗೊಂಡಿದ್ದರು. ದುಬೈನಿಂದ ಕೇರಳಕ್ಕೆ ಆಗಮಿಸಿದ್ದ ವೇಳೆ ಭಾರೀ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಹವಾಮಾನ ತುಂಬಾ ಕೆಟ್ಟದಾಗಿದೆ ಎಂದು ವಿಮಾನ ಲ್ಯಾಂಡ್ ಆಗುವ ಮೊದಲೇ ಪೈಲಟ್ ಸಾಠೆ ಎಚ್ಚರಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ: ನೋವಿನ ಚೀರಾಟ, ಹೊರಬರಲು ಒದ್ದಾಟ, ರಕ್ತ ಮೆತ್ತಿದ ಬಟ್ಟೆಗಳು:ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು!
ತಮ್ಮ ಎಲ್ಲಾ ಕೌಶಲ್ಯವನ್ನು ಪಣಕ್ಕಿಟ್ಟಿದ್ದ ಸಾಠೆ ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಪ್ರಯತ್ನಿಸಿದ್ದರು. ಆದರೆ ಎರಡು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲವಾಗಿತ್ತು. ಆಗ ದಿಢೀರನೆ ನಿಯಂತ್ರಣ ತಪ್ಪಿ ವಿಮಾನ ಸ್ಕಿಡ್ ಆಗಿ ಕಂದಕಕ್ಕೆ ಬಿದ್ದ ಪರಿಣಾಮಮ ಎರಡು ತುಂಡಾಗಿ ಬಿದ್ದಿತ್ತು. ಘಟನೆಯಲ್ಲಿ ಹಲವಾರು ಮಂದಿ ಪ್ರಾಣಾಪಾಯದಿಂದ ಪಾರಾಗಿರುವುದು ಪವಾಡ ಎಂದು ಬದುಕುಳಿದಿರುವ ಪ್ರಯಾಣಿಕ ವಿ. ಇಬ್ರಾಹಿಂ ತಿಳಿಸಿದ್ದಾರೆ.
190 ಮಂದಿ ಪ್ರಯಾಣಿಕರಲ್ಲಿ 123 ಮಂದಿ ಗಾಯಗೊಂಡಿದ್ದಾರೆ. 20 ಮಂದಿ ಚಿಂತಾಜನಕ ಸ್ಥಿತಿಯಲ್ಲಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ. ಕೆಲವು ಪ್ರಯಾಣಿಕರು ಬೆನ್ನು ಹುರಿಗೆ ಪೆಟ್ಟು ಬಿದ್ದಿರುವುದಾಗಿ ಹೇಳಿದೆ. ಕೋಝಿಕೋಡ್ ನ ಎಂಐಎಂ ಎಸ್ ಆಸ್ಪತ್ರೆಯಲ್ಲಿ 38ಪ್ರಯಾಣಿಕರು, ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ 28 ಮಂದಿ ಮತ್ತು ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ 14 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಕೇರಳ ವಿಮಾನ ದುರಂತ: ಮಂಗಳೂರು ದುರಂತ ನೆನಪಿಸಿಕೊಂಡ ಟ್ವೀಟಿಗರು