Advertisement

ತಾನೇ ಆಡಿಸಿ ಬೆಳೆಸಿದವಳನ್ನೇ ಕೊಂದು ನೇಣಿಗೆ ಶರಣಾದ

12:17 PM Nov 28, 2017 | |

ಬೆಂಗಳೂರು: ಕಾರ್ಮಿಕನೊಬ್ಬ ಟವೆಲ್‌ನಿಂದ ವಿದ್ಯಾರ್ಥಿನಿಯ ಕುತ್ತಿಗೆ ಬಿಗಿದು ಕೊಲೆಗೈದು ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯನಗರದ ಮಾರೇನಹಳ್ಳಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಸ್ಥಳೀಯ ಖಾಸಗಿ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿರುವ ದಿವ್ಯಾ (19) ಕೊಲೆಯಾದ ವಿದ್ಯಾರ್ಥಿನಿ.

Advertisement

ಕೃಷ್ಣಮೂರ್ತಿ ಅಲಿಯಾಸ್‌ ರಾಮಕೃಷ್ಣ (34) ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡವನು. ಮಾರೇನಹಳ್ಳಿಯಲ್ಲಿರುವ ಕೊಲೆಗೀಡಾದ ಯುವತಿ ಸೋದರ ಮಾವನ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಾಮಕೃಷ್ಣ, ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಟವಲ್‌ನಿಂದ ಯುವತಿಯ ಕುತ್ತಿಗೆ ಬಿಗಿದು ಕೊಲೆಗೈದಿದ್ದಾನೆ. ಬಳಿಕ ಆಕೆಯ ವೇಲ್‌ ಬಳಸಿ ಅದೇ ಕೊಠಡಿಯ ಫ್ಯಾನ್‌ಗೆ ನೇಣಿಗೆ ಶರಣಾಗಿದ್ದಾನೆ.

ಆಂಧ್ರಪ್ರದೇಶ ಮೂಲದ ಮಧು ಅವರು ಕಳೆದ ಹತ್ತಾರು ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದು, ಮೂರು ಅಂತಸ್ತಿನ ಮನೆ ನಿರ್ಮಿಸಿಕೊಂಡಿದ್ದಾರೆ. ಮಧು ಸಹೋದರಿ ಸುಭಾಷಣಿ ಹಾಗೂ ಭಾವ ಕುಮಾರ್‌ ಹಾಗೂ ಇವರ ಪುತ್ರಿ ದಿವ್ಯಾ ಮೊದಲನೇ ಅಂತಸ್ತಿನಲ್ಲಿ ವಾಸವಿದ್ದಾರೆ. ಇದೇ ಕಟ್ಟಡದ ಹಿಂಭಾಗದ ಕೊಠಡಿಯೊಂದರಲ್ಲಿ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ರಾಮಕೃಷ್ಣ  ವಾಸವಿದ್ದ.

ಇಡೀ ಕುಟುಂಬ ಕೋಳಿ ವ್ಯಾಪಾರ ನಡೆಸುತ್ತಿದ್ದು, ಶರಾವತಿ ನಗರದಲ್ಲಿ ಮಧು ಅವರ ಭಾವ ಕುಮಾರ್‌ ಕೋಳಿ ಅಂಗಡಿ ಇಟ್ಟುಕೊಂಡಿದ್ದಾರೆ. ಮಾರೇನಹಳ್ಳಿಯ ಮನೆ ಮುಂದೆಯೇ ಮಧು ರಾಜರಾಜೇಶ್ವರಿ ಚಿಕನ್‌ ಸೆಂಟ್‌ರ್‌ ನಡೆಸುತ್ತಿದ್ದಾರೆ. ಇದೇ ಅಂಗಡಿಯಲ್ಲಿ ರಾಮಕೃಷ್ಣ ಕೆಲಸ ಮಾಡಿಕೊಂಡಿದ್ದ.

ಮನೆ ಮಗನಿಂದಲೇ ಕೊಲೆ!: ರಾಮಕೃಷ್ಣ ಮತ್ತು ದಿವ್ಯಾ 15 ವರ್ಷಗಳಿಂದ ಪರಿಚಿತರು. ಅಷ್ಟೇ ಅಲ್ಲದೆ ಚಿಕ್ಕವಯಸ್ಸಿನಿಂದ ದಿವ್ಯಾಳನ್ನು ರಾಮಕೃಷ್ಣ ಆಡಿಸಿ ಬೆಳೆಸಿದ್ದಾನೆ. ಕುಮಾರ್‌ ಮತ್ತು ಮಧು ಮನೆಯ ಎಲ್ಲ ಸದಸ್ಯರ ಪರಿಚಯ ಹಾಗೂ ವ್ಯವಹಾರಗಳು ರಾಮಕೃಷ್ಣನಿಗೆ ಚೆನ್ನಾಗಿ ಗೊತ್ತಿತ್ತು. ಒಟ್ಟಾರೆ ಮನೆ ಮಗನಂತೆ ರಾಮಕೃಷ್ಣ ಇದ್ದ. ಇದೀಗ ಆತನೇ ದಿವ್ಯಾಳನ್ನು ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಸ್ಥಳಕ್ಕೆ ಭೇಟಿ ನೀಡಿದ ಪಶ್ಚಿಮ ವಲಯ ಡಿಸಿಪಿ ಅನುಚೇತ್‌, ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಇಬ್ಬರು ಪ್ರೀತಿ ಮಾಡುತ್ತಿದ್ದರು ಎಂದು ಹೇಳಲು ಸಾಧ್ಯವಿಲ್ಲ. ತನಿಖೆ ನಂತರ ಕೊಲೆಗೆ ನಿಜವಾದ ಕಾರಣ ತಿಳಿದು ಬರಲಿದೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದಿವ್ಯಾ ಹಾಗೂ ರಾಮಕೃಷ್ಣ ಅವರ ಮೊಬೈಲ್‌ಗ‌ಳ ಸಿಡಿಆರ್‌ ಪರಿಶೀಲನೆ ನಡೆಸಲಾಗುತ್ತಿದೆ  ಎಂದು ತಿಳಿಸಿದ್ದಾರೆ.

ಇಬ್ಬರೂ ಗಂಟೆಗಟ್ಟಲೆ ಹರಟಿದ್ದರು: ಸೋಮವಾರ ಮಧ್ಯಾಹ್ನ ದಿವ್ಯಾ ಪೋಷಕರಾದ ಕುಮಾರ್‌ ಮತ್ತು ಸುಭಾಷಿಣಿ ಕಾರ್ಯನಿಮಿತ್ತ ಹೊರಗಡೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ರಾಮಕೃಷ್ಣ  ಮತ್ತು ದಿವ್ಯಾ ಮನೆ ಟೆರೆಸ್‌ ಮೇಲೆ ಗಂಟೆಗಳ ಕಾಲ ಮಾತನಾಡಿದ್ದಾರೆ.

ನಂತರ ಮನೆಯೊಳಗೆ ಹೋದ ಇಬ್ಬರೂ, ಮನೆಯ ಬಾಗಿಲು ಹಾಕಿಕೊಂಡಿದ್ದಾರೆ. ಬಳಿಕ ಒಳಗೆ ಏನಾಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಸಂಜೆ ಸುಮಾರು 4 ಗಂಟೆ ಸುಮಾರಿಗೆ ಪೋಷಕರು ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಲಾಕ್‌ ಆಗಿತ್ತು. ಎಷ್ಟೇ ಕೂಗಿದರು ಒಳಗಡೆಯಿಂದ ಯಾರೂ ಪ್ರತಿಕ್ರಿಯೆ ನೀಡದಿದ್ದಾಗ ಗಾಬರಿಗೊಂಡಿದ್ದಾರೆ.

ನಂತರ ಸ್ಥಳೀಯರ ನೆರವಿನಿಂದ ಬಾಗಿಲು ಒಡೆದು ಒಳ ಹೋದಾಗ ಹಾಸಿಗೆ ಮೇಲೆ ಬಿದ್ದಿದ್ದ ದಿವ್ಯಾಳ ಕುತ್ತಿಗೆಯಲ್ಲಿ ಟವೆಲ್‌ ಇತ್ತು. ರಾಮಕೃಷ್ಣ ನ ಶವ ಫ್ಯಾನ್‌ನಲ್ಲಿ ನೇತಾಡುತ್ತಿತ್ತು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next