Advertisement

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಡಾ.ಕಂಬಾರ ಆಯ್ಕೆ

07:15 AM Feb 13, 2018 | Harsha Rao |

ಬೆಂಗಳೂರು: ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನ 25 ವರ್ಷಗಳ ನಂತರ ಕನ್ನಡಿಗರಿಗೆ ದೊರೆತಿದ್ದು, ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Advertisement

ವಿಶ್ವನಾಥ್‌ ಪ್ರತಾಪ್‌ ತಿವಾರಿ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಈ ಬಾರಿ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಜ್ಞಾನಪೀಠ ಪುರಸ್ಕೃತರ ಮಧ್ಯೆ ಪೈಪೋಟಿ ಇತ್ತು. ಸಾಹಿತ್ಯ ಅಕಾಡೆಮಿ ಅಧ್ಯಕ್ಷೀಯ ಗಾದಿಗೆ ಅಕಾಡೆಮಿಯ ಹಾಲಿ ಉಪಾಧ್ಯಕ್ಷರಾಗಿದ್ದ ಚಂದ್ರಶೇಖರ ಕಂಬಾರ ಅವರ ಜತೆ ಕಾಶ್ಮೀರಿ ಲೇಖಕ ಪ್ರೊ.ಶಫಿ ಶೇಖ್‌, ಹಿಂದಿ ಕವಿ ಹಾಗೂ ಸಾಹಿತಿ ಡಾ.ಲೀಲಾಧರ್‌ ಜಗೂಡಿ, ಗುಜರಾತ್‌ ಜಾನಪದ ತಜ್ಞ ಬಲವಂತ್‌ ಜಾನಿ, ಮರಾಠ ಸಾಹಿತಿ
ಬಾಲಚಂದ್ರ ನೆಮಾಡೆ, ಒರಿಯಾ ಸಾಹಿತಿ ಪ್ರತಿಭಾ ರಾಯ್‌ ಸೇರಿ ಆರು ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಅಕಾಡೆಮಿಯ 89 ಗವರ್ನಿಂಗ್‌ ಕೌನ್ಸಿಲ್‌ ಸದಸ್ಯರು ಕಂಬಾರ, ನೆಮಾಡೆ ಮತ್ತು ಪ್ರತಿಭಾ ಅವರನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿದ್ದರು. ಅಂತಿಮವಾಗಿ ಗೌಪ್ಯ ಮತದಾನ ನಡೆದು ಕಂಬಾರರು 89 ಮತಗಳ ಪೈಕಿ 56 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಒರಿಯಾ ಲೇಖಕಿ ಪ್ರತಿಭಾ ರೊಯ್‌ 29 ಹಾಗೂ ಮರಾಠಿ ಲೇಖಕ ಬಾಲಚಂದ್ರ ನೆಮಾಡೆ 4 ಮತಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಕಂಬಾರರು ಐದು ವರ್ಷಗಳ ಕಾಲ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅಕಾಡೆಮಿ 
ಉಪಾಧ್ಯಕ್ಷರಾಗಿದ್ದ ಕಂಬಾರರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರಿಂದ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದಿ ಲೇಖಕ ಮಾಧವ ಕೌಶಿಕ್‌
ಆಯ್ಕೆಯಾಗಿದ್ದಾರೆ. ಕಂಬಾರರು ಕೇಂದ್ರ ಸಾಹಿತ್ಯ ಅಕಾಡೆಮಿಗೆ ಮೂರನೇ ಕನ್ನಡಿಗ ಅಧ್ಯಕ್ಷರು. 1983ರಲ್ಲಿ ವಿ.ಕೃ.ಗೋಕಾಕ್‌, 1993ರಲ್ಲಿ ಡಾ.ಯು. ಆರ್‌.ಅನಂತಮೂರ್ತಿ ಅಧ್ಯಕ್ಷರಾಗಿದ್ದರು. ನಂತರದಲ್ಲಿ ಕನ್ನಡದ ಯಾವ ಸಾಹಿತಿಗಳು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರಲಿಲ್ಲ.

ಶಿಖರ: ಕಂಬಾರರು ಕನ್ನಡ ಸಾಹಿತ್ಯ ಲೋಕದ ಅತ್ಯಂತ ಮಹತ್ವದ ಕವಿ ಮತ್ತು ಚಿಂತಕ. ಕಾವ್ಯ, ನಾಟಕ, ಕಾದಂಬರಿ ಎಲ್ಲದರಲ್ಲೂ ಸೈ ಎನಿಸಿಕೊಂಡಿರುವ ಕಂಬಾರರು 25 ನಾಟಕ, 11 ಕವನ ಸಂಕಲನ, 5 ಕಾದಂಬರಿ, 16 ಸಂಶೋಧನಾ ಪ್ರಬಂಧ ಪ್ರಕಟಿಸಿದ್ದಾರೆ. ಅವುಗಳಲ್ಲಿ ಜೋಕುಮಾರ, ಸಿರಿ ಸಂಪಿಗೆ, ಸಿಂಗಾರೆವ್ವ ಮತ್ತು ಅರಮನೆ , ನಾಯಿ ಕಥೆ, ಮಹಾಮಾಯಿ ಕೃತಿಗಳು ಖ್ಯಾತಿ ಪಡೆದಿವೆ. ಕಾಡುಕುದುರೆ, ಹರಕೆಯ ಕುರಿ, ಸಿಂಗಾರೆವ್ವ (ಸಿಂಗಾರವ್ವ) ಕೃತಿಗಳು ಚಲನಚಿತ್ರಗಳಾಗಿವೆ.

ಪ್ರಶಸ್ತಿಗಳ ಗರಿ
ಸಾಹಿತ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೌರವಗಳಿಗೆ ಪಾತ್ರರಾದವರು ಕಂಬಾರರು. ಜ್ಞಾನಪೀಠ, ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ದೇವರಾಜ ಅರಸು ಪ್ರಶಸ್ತಿ, ಜೋಶುರ ಸಾಹಿತ್ಯ ಪುರಸ್ಕಾರಂ, ನಾಡೋಜ ಗೌರವ, ಪಂಪ ಪ್ರಶಸ್ತಿ, ಸಂತ ಕಬೀರ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಜನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಡಿಕರ್‌ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್‌ ಪ್ರಶಸ್ತಿ ಸೇರಿ ಹತ್ತಾರು ಪ್ರಶಸ್ತಿಗಳು ಇವರ ಮುಡಿಗೇರಿವೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಆಧ್ಯಕ್ಷರಾಗಿ ಆಯ್ಕೆಯಾಗಿರುವ ಕನ್ನಡದ ಅಭಿಮಾನದ ಕವಿ, ನಾಟಕಕಾರ, ಕಾದಂಬರಿಕಾರ ಮತ್ತು
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಅವರಿಗೆ ಅಭಿನಂದನೆಗಳು. ನಿಮ್ಮ ಸಾಧನೆ ಕನ್ನಡಿಗರ
ಯಶಸ್ವಿನ ಕಿರೀಟಕ್ಕೆ ಮತ್ತೂಂದು ಗರಿ.

● ಸಿದ್ದರಾಮಯ್ಯ, ಮುಖ್ಯಮಂತ್ರಿ( ಟ್ವೀಟ್‌)

Advertisement

ಕಂಬಾರರು ಸಮಕಾಲೀನ ಕನ್ನಡ ಸಾಹಿತ್ಯ ಸಂದರ್ಭದಲ್ಲಿನ ಅತ್ಯಂತ ಮಹತ್ವದ ಕವಿ ಮತ್ತು ಚಿಂತಕ. ಕನ್ನಡಕ್ಕೆ ಜ್ಞಾನಪೀಠ ತಂದುಕೊಟ್ಟವರು. ಅವರ ಕಾವ್ಯ, ನಾಟಕ, ಕಾದಂಬರಿ ಹಾಗೂ ಇನ್ನಿತರ ಬರಹಗಳು ಸಾಹಿತ್ಯ ಲೋಕಕ್ಕೆ ಅನಘ ಕೊಡುಗೆಗಳು.
● ಉಮಾಶ್ರೀ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ

ಡಾ.ಚಂದ್ರಶೇಖರ ಕಂಬಾರ ಅವರಿಗೆ ಅಭಿನಂದನೆಗಳು. ವಿ.ಕೃ.ಗೋಕಾಕ್‌ ಹಾಗೂ ಡಾ.ಯು.ಆರ್‌.ಅನಂತಮೂರ್ತಿ ಅವರ
ನಂತರ ಕಂಬಾರರು ಪ್ರತಿಷ್ಠಿತ ಹುದ್ದೆಗೆ ಏರುತ್ತಿರು ವುದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ವಿಷಯ. 

● ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಿಂದಲೂ ಕರ್ನಾಟಕಕ್ಕೆ ಒಲಿದ ಒಂದು ದೊಡ್ಡ ಗೌರವವಾಗಿದೆ. ವೈಯಕ್ತಿಕವಾಗಿ ನನಗೆ ಬಹಳ ಹೆಮ್ಮೆ ಇದೆ. ನನ್ನ ಸ್ನೇಹಿತನ ಆಯ್ಕೆ ಮತ್ತಷ್ಟು ಸಂತಸ ತಂದಿದೆ.
● ಡಾ. ಹಂಪ ನಾಗರಾಜಯ್ಯ, ಸಾಹಿತಿ ಮತ್ತು ಸಂಶೋಧಕ.

ಸಾಹಿತ್ಯ ಲೋಕಕ್ಕೆ ಕಂಬಾರರ ಕೊಡುಗೆ ಅಪಾರ. ಇಂತವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗುತ್ತಿರುವುದು
ಹೆಮ್ಮೆಯ ಸಂಗತಿ.

● ವೈದೇಹಿ, ಲೇಖಕಿ

ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಚಂದ್ರಶೇಖರ ಕಂಬಾರರು ಆಯ್ಕೆಯಾಗಿರುವುದು ಇಡೀ ಕನ್ನಡಿಗರೆ ಹೆಮ್ಮೆ 
ಪಡುವಂತಾಗಿದೆ. ಇದೊಂದು ಒಳ್ಳೆಯ ಆಯ್ಕೆ .

● ಚಂದ್ರಶೇಖರ ಪಾಟೀಲ್‌, ಹಿರಿಯ ಸಾಹಿತಿ.

Advertisement

Udayavani is now on Telegram. Click here to join our channel and stay updated with the latest news.

Next