Advertisement
1980-84 ಅವಧಿಯಲ್ಲಿ ಹೆಬ್ಬಾರ್ ಅವರು ಕೇಂದ್ರ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಅಕಾಡೆಮಿಯ ಪ್ರಧಾನ ಕಾರ್ಯಕ್ರಮಗಳಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನವೂ ಒಂದು, ಪ್ರಶಸ್ತಿ ಎಂದ ಮೇಲೆ ಲಾಬಿಗಳೂ ಅಪ್ರಧಾನವಾಗಲು ಸಾಧ್ಯವೆ? ಹೀಗೆ ಲಾಬಿ ಮಾಡಿ ಪ್ರಶಸ್ತಿಗೆ ಆಯ್ಕೆಯಾಗದವನೊಬ್ಬನ ಕೋಪ ನೆತ್ತಿಗೇರಿತ್ತು. ಸೀದಾ ಅಧ್ಯಕ್ಷರ ಕಚೇರಿಗೆ ನುಗ್ಗಿ “ನಿಮ್ಮನ್ನು ಕೊಂದೇ ತೀರುವೆ’ ಎಂದ. ಹೆಬ್ಟಾರ್ ಆತನ ಮಾತುಗಳನ್ನೆಲ್ಲ ಕೇಳಿ “ಕೊಲ್ಲು ಮಾರಾಯಾ. ಮಧ್ಯಾಹ್ನ 12 ಗಂಟೆಯಾಗಿದೆ. ಇಬ್ಬರಿಗೂ ಊಟ ಹೇಳಿದ್ದೇನೆ. ನನ್ನನ್ನು ಕೊಲ್ಲಲು ನಿನಗೇನೂ ಕಷ್ಟವೇನಿಲ್ಲ (ಕೃಶ ಶರೀರ). ನಾನೂ ಊಟ ಮಾಡಿ ಸತ್ತಂತಾಗುತ್ತದೆ. ನೀನೂ ಕೂಡ ಊಟ ಮಾಡಿದಂತಾಗುತ್ತದೆ’ ಎಂದು ಹಿತೋಪದೇಶ ನೀಡಿದರು. ಸರಿ, ಇಬ್ಬರದೂ ಊಟ ಆಯಿತು. ಕೊನೆಗೆ “ಏನೋ ಕೆಟ್ಟ ಗಳಿಗೆಯಲ್ಲಿ ಹೇಳಿದೆ. ಕ್ಷಮಿಸಿ’ ಎಂದು ಆಗಂತುಕ ಕಾಲಿಗೆ ಬಿದ್ದು ಆಶೀರ್ವಾದ ಬೇಡಿದ.
ಹೆಬ್ಟಾರರ ಇಳಿವಯಸ್ಸಿನಲ್ಲಿ ಕೃಶ ಶರೀರಕ್ಕೆ ಸಂಬಂಧಿಸಿ ಮೂರು ಪ್ರಧಾನಮಂತ್ರಿಗಳಿಗೆ ಸುದ್ದಿ ಸಲಹೆಗಾರರಾಗಿದ್ದ ಎಚ್.ವೈ. ಶಾರದಾ ಪ್ರಸಾದ್ ಒಂದೆಡೆ ಹೀಗೆ ಬರೆದಿದ್ದಾರೆ: “ಹೆಬ್ಬಾರರ ಮಗಳು ಮೂರು ವರ್ಷದವಳಿದ್ದಾಗ ತನ್ನಪ್ಪ ಅವರ ಬಿದಿರುಕೋಲಿನ ಹಾಗೆಯೇ ಇದ್ದಾರೆ ಎಂದಿದ್ದಳು. ಆಗ ಸ್ವಲ್ಪ ಹೆಚ್ಚು ದಪ್ಪವಾದ ಬಿದಿರು ಕೋಲಿನಂತಿದ್ದಿರಬಹುದು. ಈಗ ಬಿದಿರುಕೋಲು ಇನ್ನಷ್ಟು ಕೃಶವಾಗಿದ್ದರೂ ಹೊಳಪು ಮಾಸಿರಲಿಲ್ಲ’. ಜಗಳ ಬಿಡಿಸುವ ಕಾಳಜಿ
1960ರ ದಶಕದಲ್ಲಿ ಹೆಸರಾಂತ ಸಾಹಿತಿ ಕೋಟ ಶಿವರಾಮ ಕಾರಂತರಿಗೂ, ಉಡುಪಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ|ಕು.ಶಿ. ಹರಿದಾಸ ಭಟ್ಟರಿಗೂ ಆತ್ಮೀಯವಾದ ಸ್ನೇಹವಿತ್ತು. ಯಾವುದೋ ಕೆಟ್ಟ ಗಳಿಗೆ, ಮನಸ್ತಾಪ ಆವರಿಸಿತು. ಸಾಕಷ್ಟು ಮುಂದೆಯೂ ಹೋಯಿತು ಎನ್ನುವುದು ಬಹುತೇಕರಿಗೆ ಗೊತ್ತಿದ್ದ ವಿಚಾರ. ಇಬ್ಬರಿಗೂ ಸಮಾನಮಿತ್ರರಾಗಿದ್ದ ಕೆ.ಕೆ. ಹೆಬ್ಬಾರರಿಗೆ ಇದು ಅತೀವ ಬೇಸರ ತರಿಸಿತು. ಇಬ್ಬರಿಗೂ ಕಿವಿ ಮಾತು ಹೇಳಿದರು. ಪ್ರಯೋಜನವಾಗದಿದ್ದಾಗ ಇಬ್ಬರಿಗೂ ಆಡಿದ ಆಶಯ ನುಡಿ ಹೀಗಿತ್ತು: “ನಿಮ್ಮದು ಹೇಗಿದ್ದರೂ ಬೇರೆ ಪ್ರಪಂಚ, ಅವರ ಪ್ರಪಂಚವೂ ಬೇರೆ. ಲೋಕ ವಿಶಾಲ. ಆದದ್ದನ್ನೆಲ್ಲ ಬಿಟ್ಟು ಬಿಡಿ. ನೀವು ನಿಮ್ಮದೇ ಆದ ಲೋಕದಲ್ಲಿದ್ದು ಬಿಡಿ’. “ಯಾರಧ್ದೋ ಮಾತು ಕೇಳಿ, ಹೀಗೆ ಮಾಡಿದರಲ್ಲ’ ಎಂದು ಕು.ಶಿ. ಯವರಿಗೆ ನೋವಿತ್ತು. ಒಮ್ಮೆ ಸಿಟ್ಟಿನಲ್ಲಿ ಕಾದಂಬರಿಯೊಂದನ್ನು ಬರೆದ ಬಳಿಕ ಕಾರಂತರು ಮತ್ತೆಲ್ಲೂ ವ್ಯಂಗ್ಯ, ಕುಹಕವನ್ನು ಎತ್ತಲೇ ಇಲ್ಲ. ಇಷ್ಟರ ಮಟ್ಟಿಗೆ ಹೆಬ್ಬಾರ್ ಹಿತನುಡಿ ಪ್ರಯೋಜನಕ್ಕೆ ಬಂದಿತೆನ್ನಬಹುದು.
Related Articles
ಹೆಬ್ಟಾರರ ಕಲಾಕೃತಿಗಳೆಂದರೆ ಲಕ್ಷಾಂತರ ರೂ. ಮೌಲ್ಯವುಳ್ಳದ್ದು. ಅದರಲ್ಲಿ ಒಂದು ಗಾಂಧಿ, ಬುದ್ಧ, ಏಸುವಿಗೆ ಸಂಬಂಧಿಸಿದ್ದು. ಮೂವರೂ ಅಹಿಂಸೆಗಾಗಿ ಜೀವನ ಮುಡಿಪಾಗಿಟ್ಟವರು, ಕೊನೆಗೆ ಹಿಂಸೆಗೇ ಬಲಿಯಾದವರು. ಇಲ್ಲಿ ಕೇವಲ ಚಿತ್ರ ಕಲಾಕೃತಿಯಲ್ಲ, ಫಿಲಾಸಫಿಯೂ ಅಡಗಿದೆ. ಇಂತಹ ಮೂರ್‍ನಾಲ್ಕು ಕೃತಿಗಳನ್ನು ಪ್ರೊ| ಕು.ಶಿ. ಯವರ ಮೇಲಿನ ಪ್ರೇಮದಿಂದ ಉಚಿತವಾಗಿ ಎಂಜಿಎಂ ಕಾಲೇಜು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರಕ್ಕೆ ಹೆಬ್ಬಾರ್ ಕೊಟ್ಟಿದ್ದರು.
Advertisement
ಸಾರ್ವಕಾಲಿಕ ಮೌಲ್ಯದ ಮಾತುಕೊಲೆ ಮಾಡುತ್ತೇನೆಂದು ಬಂದವನಿಗೆ ಹೆಬ್ಬಾರ್ ಆಡಿದ ಮಾತು, ಕಾರಂತ- ಕು.ಶಿ. ನಡುವಿನ ವಿರಸ ಕೊನೆಗಾಣಿಸಲು ಪಟ್ಟ ಪರಿಶ್ರಮ, ಮಾನವೀಯ ಕಳಕಳಿ ಸಾರ್ವಕಾಲಿಕ ಮೌಲ್ಯವುಳ್ಳದ್ದು. ಬೇರೆಯವರು ಸಿಟ್ಟು ಮಾಡಿಕೊಳ್ಳುವಾಗ ನಾವೂ ಸಿಟ್ಟು ಮಾಡಿಕೊಳ್ಳುವುದೇ ಎನ್ನುವುದು ಮಾತ್ರವಲ್ಲ, ಹಾಗೆ ಜೀವನದಲ್ಲಿ ನಡೆದುಕೊಳ್ಳುತ್ತಿದ್ದರು ಹೆಬ್ಬಾರ್. ಇಂದು ಲೋಕದಲ್ಲಿ ಎಷ್ಟು ಜಗಳ, ಕೊಲೆಗಳು ನಡೆಯುತ್ತಿವೆ? ಇಬ್ಬರಲ್ಲಿ ಯಾರಾದರೂ ಒಬ್ಬರು ವಿವೇಕ ತಾಳಿದರೆ ಎಷ್ಟೋ ಕೊಲೆ, ಜಗಳಗಳು ಇನ್ನಿಲ್ಲವಾಗುತ್ತವೆ. ಇಂತಹ ಕೃತ್ಯಗಳಿಂದ ಯಾವುದೇ ಲಾಭವಿಲ್ಲದಿರುವುದು ಮಾತ್ರವಲ್ಲ, ಭಾರೀ ನಷ್ಟಕ್ಕೂ ತಲೆ ಕೊಡಬೇಕಾಗುತ್ತದೆ. ಇದು ವೈಯಕ್ತಿಕ ನಷ್ಟವೂ ಆಗಿರದೆ ರಾಷ್ಟ್ರ, ಜಾಗತಿಕ ನಷ್ಟವಾಗುತ್ತದೆ. ಇಂತಹ ನಷ್ಟಗಳನ್ನು ತಪ್ಪಿಸಿದರೆ ಒಂದು ರಾಷ್ಟ್ರವಲ್ಲ, ಹಲವು ಜಗತ್ತು ನಿರ್ಮಿಸಲು ಬೇಕಾದ “ಇಂಧನ’ (ಶಕ್ತಿ) ಉಳಿತಾಯವಾಗಬಹುದು. 110ನೆಯ ಜನ್ಮದಿನ- ಗ್ರಂಥ ಪ್ರಕಟನೆ
ಜೂ. 15ರಂದು ಹೆಬ್ಬಾರರ 110ನೆಯ ಜನ್ಮದಿನ. ಮಣಿಪಾಲ ಮಾಹೆ ವಿ.ವಿ.ಯ ಪ್ರಸಾರಾಂಗ ಮಣಿಪಾಲ್ ಯುನಿವರ್ಸಲ್ ಪ್ರೆಸ್ (ಎಂಯುಪಿ) 1988ರಲ್ಲಿ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದಿಂದ ಪ್ರೊ|ಕು. ಶಿ.ಹರಿದಾಸ ಭಟ್ಟರು ಹೊರತಂದ ಕನ್ನಡ ಪುಸ್ತಕದ ಇಂಗ್ಲೀಷ್ ಆವೃತ್ತಿ “ಲೈಫ್ ಆ್ಯಂಡ್ ಆರ್ಟ್ ಆಫ್ ಕೆ.ಕೆ. ಹೆಬ್ಬಾರ್’ ಕೃತಿಯನ್ನು ಹೊರತರುತ್ತಿದೆ. ದಶಮಾನೋತ್ಸವದ ಎಂಯುಪಿ 206 ಪುಸ್ತಕ ಗಳನ್ನು ಹೊರತಂದಿದೆ. ಮಣಿಪಾಲದ ಡಾ|ಟಿಎಂಎ ಪೈ ಪ್ಲಾನಿಟೇರಿಯಂ ಆವರಣದಲ್ಲಿ ಕೆ.ಕೆ.ಹೆಬ್ಬಾರ್ ಗ್ಯಾಲರಿ ಆ್ಯಂಡ್ ಆರ್ಟ್ ಸೆಂಟರ್ ಇದೆ. – ಮಟಪಾಡಿ ಕುಮಾರಸ್ವಾಮಿ