Advertisement

ಬರದ ಬಳಿಕ ಜಾನುವಾರುಗಳಿಗೆ ನೆರೆಯ ಬರೆ

11:36 PM Aug 11, 2019 | Lakshmi GovindaRaj |

ಬೆಂಗಳೂರು: ಬರದಿಂದ ತತ್ತರಿಸಿ ಹೋಗಿದ್ದ ಜಾನುವಾರುಗಳಿಗೆ ಈಗ ನೆರೆ ಸಂಕಷ್ಟ ತಂದೊಡ್ಡಿದೆ. ಪ್ರವಾಹ ಪೀಡಿತ ಪ್ರದೇಶಗಳ ಜಾನುವಾರುಗಳಲ್ಲಿ ಮಾರಣಾಂತಿಕ ಕಾಯಿಲೆಗಳ ಭೀತಿ ಎದುರಾಗಿದೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಜಾನುವಾರುಗಳು ಮಾರಕ ಗಳಲೆ ರೋಗ ಅಥವಾ ಗಂಟಲು ಬೇನೆ, ಚಪ್ಪೆ ರೋಗ, ನೆರಡಿ (ಅಂಥ್ತ್ಯಾಕ್ಸ್‌) ತುತ್ತಾಗುವ ಸಾಧ್ಯತೆಗಳಿದ್ದು, ಸರ್ಕಾರ ಹಾಗೂ ಇಲಾಖೆ ಸಕಾಲದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗಬಹುದು.

Advertisement

ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡು ಭಾಗ ಸೇರಿ ರಾಜ್ಯದ 17 ಜಿಲ್ಲೆಗಳ 80 ತಾಲೂಕುಗಳಲ್ಲಿ ಭೀಕರ ಪ್ರವಾಹ ಉಂಟಾಗಿದೆ. ಇಲ್ಲಿ ಯಾವ ರೀತಿ ಜನರ ಬದುಕು ದುಸ್ತರವಾಗಿದೆಯೋ ಅದೇ ರೀತಿ ಜಾನುವಾರುಗಳ ಸ್ಥಿತಿಯೂ ಅದಕ್ಕಿಂತಲೂ ದುರ್ಬರವಾಗಿದೆ. ಬರದ ಹಿನ್ನೆಲೆಯಲ್ಲಿ ಮೇವು, ಕುಡಿಯುವ ನೀರಿನ ಅಲಭ್ಯತೆಯಿಂದ ಸಾಕಷ್ಟು ತೊಂದರೆಗೆ ಸಿಲುಕಿಕೊಂಡಿದ್ದ ಜಾನುವಾರುಗಳಿಗೆ ಈಗ ಮಳೆ ಹಾಗೂ ನೆರೆ ಕಂಗಾಲಾಗಿಸಿದೆ.

ಮಳೆಗಾಲ, ವಾತಾವಾರಣದಲ್ಲಿನ ತೇವಾಂಶ, ಚಳಿ, ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದ, ಸಮರ್ಪಕ ಗಾಳಿ-ಬೆಳಕು ಇಲ್ಲದ ಕೊಟ್ಟಿಗೆಗಳು, ಹವಾಮಾನ ವೈಪರಿತ್ಯ, ಆಯಾಸ ಮತ್ತು ಬಳಲಿಕೆಯಿಂದಾಗಿ ವಿವಿಧ ಬಗೆಯೆ ಸೋಂಕು ರೋಗಗಳು ಜಾನುವಾರುಗಳಿಗೆ ಬಾಧಿಸುತ್ತವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಈ ರೋಗಗಳು ಬಾಧಿಸದಂತೆ ಹಾಗೂ ಅವು ಹರಡದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಇದಕ್ಕಾಗಿ ಪಶುಸಂಗೋಪನಾ ಇಲಾಖೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ನಿಯಮಿತವಾಗಿ ಕಾಯಿಲೆ ತಪಾಸಣೆ, ಅಗತ್ಯ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಪ್ರವಾಹದಿಂದಾಗಿ ಅನೇಕ ಕಡೆ ರಸ್ತೆ, ವಿದ್ಯುತ್‌ ಹಾಗೂ ದೂರವಾಣಿ ಸಂಪರ್ಕ ಕಡಿತವಾಗಿ ರುವುದರಿಂದ ಸಂಪರ್ಕ ಮತ್ತು ಸಂವಹನದಲ್ಲಿ ಅಡಚಣೆ ಉಂಟಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ಅಸಹಾಯತೆ ತೋಡಿಕೊಳ್ಳುತ್ತಿದ್ದಾರೆ.

ಜಿಲ್ಲೆಗೊಬ್ಬ ಅಧಿಕಾರಿ: ಜಾನುವಾರುಗಳ ರಕ್ಷಣೆ, ಚಿಕಿತ್ಸೆಯ ದೃಷ್ಟಿಯಿಂದ ಪ್ರವಾಹ ಪೀಡಿತ ಪ್ರದೇಶಗಳ ಜಿಲ್ಲೆಗಳಿಗೆ ಇಲಾಖೆ ಕೇಂದ್ರ ಕಚೇರಿಯಿಂದ ಪ್ರತಿ ಜಿಲ್ಲೆಗೆ ಒಬ್ಬೊಬ್ಬ ಅಧಿಕಾರಿಯನ್ನು ನಿಯೋಜಿ ಸಲಾಗಿದೆ. ಇವರೆಗೆ ರಾಜ್ಯದಲ್ಲಿ 180ಕ್ಕೂ ಹೆಚ್ಚು ಗೋಶಾಲೆಗಳನ್ನು ತೆರೆಯಲಾಗಿದ್ದು, ಪ್ರವಾಹ ಪೀಡಿತ ಜಿಲ್ಲೆಗಳ ಗೋಶಾಲೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಜಾನುವಾರುಗಳಿಗೆ ಆಶ್ರಯ ನೀಡಲಾಗಿದೆ.

Advertisement

ಅಲ್ಲಿ ಮೇವು, ಸೂಕ್ತ ಔಷಧಿಗಳ ವ್ಯವಸ್ಥೆ ಸಹ ಮಾಡಲಾಗಿದೆ. ಪಶು ವೈದ್ಯರಿಂದ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಸದ್ಯ ಎಲ್ಲೆಲ್ಲಿ ಎಷ್ಟು ಜಾನುವಾರುಗಳಿಗೆ, ಅವುಗಳಲ್ಲಿ ಎಷ್ಟು ಜಾನುವಾರುಗಳಿಗೆ ಯಾವ್ಯಾವ ಕಾಯಿಲೆಗಳ ಲಕ್ಷಣಗಳು ಕಂಡು ಬಂದಿವೆ, ರೋಗ ಬಾಧಿಸಿದೆ ಎಂಬ ಮಾಹಿತಿ ಇನ್ನೂ ಕಲೆ ಹಾಕಲಾಗುತ್ತಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆ ಇಲಾಖೆಯ ಆಯುಕ್ತ ಉಪೇಂದ್ರ ಪ್ರತಾಪ್‌ ಸಿಂಗ್‌ ಹೇಳಿದ್ದಾರೆ.

ಕಾಣಿಸಿಕೊಳ್ಳುವ ರೋಗಗಳು: ಸಾಮಾನ್ಯವಾಗಿ ಮಳೆಗಾಲದಲ್ಲಿ ಜಾನುವಾರುಗಳಲ್ಲಿ ಗಳಲೆ ರೋಗ (ಗಂಟಲು ಬೇನೆ), ಚಪ್ಪೆ ರೋಗ (ಬ್ಲಾಕ್‌ ಕ್ವಾರ್ಟರ್‌), ನೆರಡಿ ರೋಗ (ಅಂಥ್ತ್ಯಾಕ್ಸ್‌), ಕಾಲು ಬಾಯಿ ಜ್ವರ ಸೇರಿದಂತೆ ಬ್ರೂಸೆಲ್ಲೋಸಿಸ್‌ (ಕಂದು ಹಾಕುವ ರೋಗ), ಕೆಚ್ಚಲು ಬಾವು ರೋಗಗಳು ಬಾಧಿಸುತ್ತವೆ. ಕೆಲವೊಮ್ಮೆ ಇಲಿ ಜ್ವರ ಸಹ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಪ್ಯಾಶ್ಚುರೆಲ್ಲಾ ಮಲ್ಟೊಸಿಡಾ ಬ್ಯಾಕ್ಟೀರಿಯಾದಿಂದ ಹರಡುವ ಗಳಲೆ ರೋಗ, ಕ್ಲಾಸ್ಟ್ರೀಡಿಯಂ ಚವೈ ರೋಗಾಣುನಿಂದ ಹರಡುವ ಚಪ್ಪೆ ರೋಗ, ಬ್ಯಾಲಾಸಿಸ್‌ ಅಂತ್ರಾಸಿಸ್‌ ವೈರಸ್‌ನಿಂದ ಉಲ್ಬಣಿಸುವ ನೆರಡಿ ರೋಗ, ಬ್ರುಸಲ್ಲಾ ಅಬಾರ್ಟಸ್‌ ವೈರಸ್‌ನಿಂದ ಬರುವ ಕಂದು ಹಾಕುವ ರೋಗ, ಸಾಮಾನ್ಯವಾಗಿ ದನ, ಹಸು, ಎಮ್ಮೆ, ಕುರಿ, ಮೇಕೆ ಹಾಗೂ ಹಂದಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಪ್ರವಾಹ ಪೀಡಿತ ಪ್ರದೇಶಗಳ ಜಾನುವಾರುಗಳ ಆರೋಗ್ಯ ರಕ್ಷಣೆ ಸೇರಿದಂತೆ ಅವುಗಳಿಗೆ ಸೂಕ್ತ ಔಷಧಿ, ಮೇವು ಹಾಗೂ ಇತರ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಲು ಇಲಾಖೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಜಿಲ್ಲಾ ಹಂತದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಕೇಂದ್ರ ಕಚೇರಿಯಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ.
-ಪಿ. ಮಣಿವಣ್ಣನ್‌, ಕಾರ್ಯದರ್ಶಿ (ಪ್ರಭಾರ), ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆ ಇಲಾಖೆ

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next