Advertisement
ಸೂರಜ್ ಲಾಲ್ ಲಿಂಕ್ ಪೆನ್ ಕಂಪೆನಿಯ ಸ್ಥಾಪಕ. 2016ರಲ್ಲಿ ಈ ಕಂಪನಿ 40 ವರ್ಷ ಪೂರೈಸಿದ್ದ ಸಂಭ್ರಮವನ್ನು ಆಚರಿಸಿತ್ತು. ಹೌದು ಇದೇ ಲಿಂಕ್ ಪೆನ್ ಅನ್ನು ನಿಮ್ಮ ಶಾಲಾ ದಿನಗಳಲ್ಲಿ ಪ್ರತಿದಿನ ಬಳಸುತ್ತಿದ್ದ ನೆನಪು ನಿಮಗೆ ಈಗ ಮರುಕಳಿಸಬಹುದು.
Advertisement
ಏತನ್ಮಧ್ಯೆ ವಯಸ್ಸಾದ ತಂದೆ, ತಾಯಿಯನ್ನು ನೋಡಿಕೊಳ್ಳುವ ನಿಟ್ಟಿನಲ್ಲಿ ಸೂರಜ್ ಮಲ್ ಅವರನ್ನು ಊರಿಗೆ ವಾಪಸ್ ಕರೆಯಿಸಿಕೊಂಡಿದ್ದರು. ಇದರಿಂದಾಗಿ ಶ್ರಮಪಟ್ಟು ದುಡಿಯುತ್ತಿದ್ದ ಸೂರಜ್ ಕನಸುಗಳು ವಿರಾಮ ಪಡೆದುಕೊಳ್ಳಲು ಕಾರಣವಾಯಿತು. ಹೀಗೆ ಊರಲ್ಲಿ ಏನೂ ಕೆಲಸ ಇಲ್ಲದೆ ಕುಳಿತುಕೊಳ್ಳುವುದು ಸರಿಯಲ್ಲ, ಏನಾದರೂ ಕೆಲಸ ಮಾಡಬೇಕೆಂದು ನಿರ್ಧರಿಸಿ, ಪೆನ್ನುಗಳನ್ನು ಖರೀದಿಸಿದ ಸೂರಜ್ ಮನೆ, ಮನೆಗೆ ತೆರಳಿ ಮಾರಾಟ ಮಾಡತೊಡಗಿದರು. ಈ ಸಂದರ್ಭದಲ್ಲಿ ಸೂರಜ್ ಗೆ ಒಂದು ವಿಷಯ ಮನದಟ್ಟಾಯಿತು, ಅದೇನೆಂದರೆ ನಮ್ಮ ದೇಶದಲ್ಲಿ ಗುಣಮಟ್ಟದ ಪೆನ್ನು ಇಲ್ಲ ಎಂಬುದಾಗಿತ್ತು.
ಹೀಗೆ ಕನಸು ಚಿಗುರೊಡೆದಾಗ ಕೋಲ್ಕತಾದ ಬಗ್ರಿ ಬಜಾರ್ ಪ್ರದೇಶದಲ್ಲಿ ಒಂದು ಬಾಲ್ ಪೆನ್ ಮಾರಾಟದ ಅಂಗಡಿಯನ್ನು ತೆರೆದಿದ್ದರು. ಯಾಕೋ ಇದರಿಂದಲೂ ಸೂರಜ್ ಅವರ ಮನಸ್ಸಿಗೆ ತೃಪ್ತಿ ತರಲಿಲ್ಲ. ಏನೇ ಆಗಲಿ ಪೆನ್ನು ತಯಾರಿಸುವ ಸ್ವಂತ ಕಂಪನಿ ಮಾಡಬೇಕೆಂಬ ಹಠಕ್ಕೆ ಬಿದ್ದು ಬಿಟ್ಟಿದ್ದರು.
ತನ್ನ ಅಳಿಯನ(ಪತ್ನಿಯ ತಂದೆ) ಕನಸಿಗೆ ನೀರೆರೆದು ಪೋಷಿಸಿದವರು ಮಾವ. ಅವರು ಕೋಲ್ಕತಾದ ಮಾಲ್ಪಾರಾದಲ್ಲಿ ರೂಂ ಅನ್ನು ನೀಡಿದ್ದರು. ಅಲ್ಲಿ ಸೂರಜ್ ಕೇವಲ ಹತ್ತು ಸಾವಿರ ರೂಪಾಯಿ ಬಂಡವಾಳದಲ್ಲಿ ಪೆನ್ನುಗಳನ್ನು ತಯಾರಿಸುವ ಪ್ಲಾಸ್ಟಿಕ್ ಭಾಗಗಳ ವ್ಯವಹಾರ ಆರಂಭಿಸಿದ್ದರು. ಅವರ ಕೆಲಸಕ್ಕೆ ತುಂಬಾ ಮೆಚ್ಚುಗೆ ಕೂಡಾ ವ್ಯಕ್ತವಾಗಿತ್ತು. 1976ರಲ್ಲಿ ಸೂರಜ್ ಅವರು ಕೇವಲ 700 ಚದರ ಅಡಿಯಲ್ಲಿ 700 ರೂಪಾಯಿ ಬಾಡಿಗೆಗೆ ಐದು ಮಂದಿ ನೌಕರರ ಜತೆ ಪುಟ್ಟ ಕಂಪನಿಯನ್ನು ಆರಂಭಿಸಿದ್ದರು.
ಅವರ ಗೆಳೆಯರ ಸಲಹೆಯಂತೆ ತಮ್ಮ ಬ್ರ್ಯಾಂಡ್ ಗೆ ಲಿಂಕ್ ಎಂಬ ಹೆಸರನ್ನು ಇಟ್ಟಿದ್ದರು. ಸೂರಜ್ ಅವರ ಪೆನ್ನಿನ ವ್ಯವಹಾರಕ್ಕೆ ಜನರು ಕೂಡಾ ಪ್ರೋತ್ಸಾಹ ನೀಡಿದ್ದು, ಇವರ ಬಳಿಯೇ ದೊಡ್ಡ ಪ್ರಮಾಣದಲ್ಲಿ ಪೆನ್ನುಗಳನ್ನು ಖರೀದಿಸತೊಡಗಿದ್ದರು. 1980ರಲ್ಲಿ ಸೂರಜ್ ಅವರ ಪುತ್ರ 17 ವರ್ಷದ ದೀಪಕ್ ಜಲಾನ್ ತರಬೇತುದಾರನಾಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದ. ಈಗ ದೀಪಕ್ ಕಂಪನಿಯ ಆಡಳಿತ ನಿರ್ದೇಶಕರಾಗಿದ್ದಾರೆ. 1992ರಲ್ಲಿ ಲಿಂಕ್ ಕಂಪನಿ ಮಿಟ್ಸುಬಿಷಿ ಜತೆ ಯುನಿ ಬಾಲ್ ಪೆನ್ನುಗಳ ಮಾರಾಟಕ್ಕೆ ಒಪ್ಪಂದ ಮಾಡಿಕೊಂಡಿತ್ತು. ಆ ನಂತರ ದಕ್ಷಿಣ ಕೊರಿಯಾಕ್ಕೆ 12 ಲಕ್ಷ ಪೆನ್ನುಗಳನ್ನು ಮಾರಾಟ ಮಾಡಿತ್ತು. ತದನಂತರ ಲಿಂಕ್ ಓಷನ್ ಜೆಲ್ ಮತ್ತು ಲಿಂಕ್ ಸ್ಮಾರ್ಟ್ ಜೆಲ್ ಪೆನ್ನುಗಳು ಶಾಲೆ ಮತ್ತು ಕಚೇರಿಗಳಲ್ಲಿ ಅತೀ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು. 2005ರಲ್ಲಿ ಲಿಂಕ್ ಕಂಪನಿ ತನ್ನ ಲಿಂಕ್ ಗ್ಲಿಸರಿನ್ ಪೆನ್ನುಗಳ ಮಾರಾಟವನ್ನು ಆರಂಭಿಸಿತ್ತು.
ಪ್ರಸ್ತುತ ಲಿಂಕ್ ಕಂಪನಿ ಪೆನ್ನುಗಳ ವಿತರಣೆ, ಮಾರ್ಕರ್, ರಬ್ಬರ್, ನೋಟಬುಕ್ಸ್, ಫೈಲ್ ಪೋಲ್ಡರ್ಸ್ ಮಾರಾಟದ ಅತೀ ದೊಡ್ಡ ವಿತರಕ ಕಂಪನಿಯಾಗಿ ಬೆಳೆದು ನಿಂತಿದೆ. ಮೌಂಟ್ ಬ್ಲಾಕ್ ಕಂಪನಿಯು ವಿಶ್ವದಲ್ಲಿಯೇ ಪೆನ್ನು ಉತ್ಪಾದನಾ ಕ್ಷೇತ್ರದಲ್ಲಿ ಹೆಸರುವಾಸಿಯಾದ ಕಂಪನಿ. ಆ ನಂತರ ಪಾರ್ಕರ್ ಕಂಪನಿಗೆ ಎರಡನೇ ಸ್ಥಾನ ಇದ್ದು, ಆ ಕಂಪನಿಗಳಿಗೆ ಸಡ್ಡು ಹೊಡೆದು ಬೆಳೆದಿರುವುದು ಲಿಂಕ್ ಕಂಪನಿಯ ಹೆಗ್ಗಳಿಕೆಯಾಗಿದೆ.
*ನಾಗೇಂದ್ರ ತ್ರಾಸಿ