Advertisement

HDK ಭೇಟಿಗೆ ಬಿಜೆಪಿಗರಿಂದಲೇ ವಿರೋಧ

11:21 PM Feb 06, 2024 | Team Udayavani |

ಬೆಂಗಳೂರು: ಬಿಜೆಪಿ ನಾಯಕರು ಪದೇಪದೆ ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡುತ್ತಿರುವುದು ಕೇಸರಿಪಡೆಯ ಸಂಘಟನ ವಲಯದಲ್ಲಿ ಭಾರೀ ಆಕ್ಷೇಪಕ್ಕೆ ಕಾರಣವಾಗುತ್ತಿದ್ದು, ಬಿಡದಿ ತೋಟದ ಮನೆ ಪರ್ಯಾಯ ಶಕ್ತಿ ಕೇಂದ್ರವಾಗುತ್ತಿರುವುದು ಪಕ್ಷದ ಹಿರಿಯರ ಅಸಹನೆಗೆ ಕಾರಣವಾಗಿದೆ.

Advertisement

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಘೋಷಣೆಯಾದ ಬಳಿಕ ಬಿಜೆಪಿ ನಾಯಕರು ಜಗನ್ನಾಥ ಭವನಕ್ಕಿಂತಲೂ ಹೆಚ್ಚಾಗಿ ಬಿಡದಿ ತೋಟದ ಮನೆಗೆ ಎಡತಾಕುತ್ತಿದ್ದಾರೆ. ಇದರಲ್ಲಿ ಬಹುತೇಕರು ಲೋಕಸಭಾ ಚುನಾವಣ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಅನ್ಯ ಪಕ್ಷದಿಂದ ವಲಸೆ ಬಂದವರ ಜತೆಗೆ ಬಿಜೆಪಿಯಲ್ಲಿ ಹುಟ್ಟಿ-ಬೆಳೆದ ನಾಯಕರು ಕೂಡಾ ಮಲ್ಲೇಶ್ವರದ ಬದಲು ರಾಮನಗರದತ್ತ ರಥಯಾತ್ರೆ ನಡೆಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಈ ರೀತಿ ರಾಜಕೀಯ ತಳಿ ಸಂಕರ ಭವಿಷ್ಯದಲ್ಲಿ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಬಹುದೆಂಬ ಚರ್ಚೆ ಪಕ್ಷದ ವಲಯದಲ್ಲಿ ತೀವ್ರವಾಗುತ್ತಿದ್ದು, ಸಂಘದಿಂದ ಸಂಘಟನೆಗೆ ನಿಯೋಜನೆಗೊಂಡ ಪ್ರಧಾನ ಕಾರ್ಯದರ್ಶಿಯೊಬ್ಬರು ಪಕ್ಷದ ವೇದಿಕೆಯಲ್ಲೇ ಕೆಲವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಒಂದು ಕಾಲದಲ್ಲಿ ಕುಮಾರಸ್ವಾಮಿ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಆಕ್ಷೇಪ ವ್ಯಕ್ತಪಡಿಸಿದ್ದ ಮಾಜಿ ಸಚಿವರಾದ ಆರ್‌. ಅಶೋಕ, ಸಿ.ಟಿ. ರವಿ, ವಿ. ಸೋಮಣ್ಣ, ಡಾ| ಕೆ. ಸುಧಾಕರ್‌, ಸಿ.ಪಿ. ಯೋಗೇಶ್ವರ, ಸಂಸದ ಪ್ರತಾಪ್‌ ಸಿಂಹ, ರಮೇಶ್‌ ಜಾರಕಿಹೊಳಿಯವರಂಥ ಘಟಾನುಘಟಿಗಳ ಜತೆಗೆ ಎರಡನೇ ಹಂತದಲ್ಲಿರುವ ಹಲವು ನಾಯಕರು ಬಿಡದಿ ತೋಟದ ಮನೆಗೆ ತೆರಳಿ ಕುಮಾರಸ್ವಾಮಿ ಜತೆ ರಾಜಕೀಯ ಸಮಾಲೋಚನೆ ನಡೆಸಿದ್ದಾರೆ. ಈ ಪರಿಸ್ಥಿತಿ ಮುಂದುವರಿದರೆ ಪಕ್ಷದಲ್ಲಿ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂಬ ಆತಂಕ ಬಿಜೆಪಿ ಹಿರಿಯರನ್ನು ಕಾಡುತ್ತಿದೆ. ಕುಮಾರಸ್ವಾಮಿ ನೀಡಿದ ಸಲಹೆಯನ್ನು ದಿಲ್ಲಿಯಲ್ಲಿ ರಾಷ್ಟ್ರೀಯ ನಾಯಕರು ಪರಿಗಣಿಸುತ್ತಾರೆಂಬ ಕಾರಣಕ್ಕೆ ಬಿಜೆಪಿ ನಾಯಕರು ಜೆಡಿಎಸ್‌ ಪ್ರಾಂಗಣದಲ್ಲಿ ಕಾವಲು ಸೇವೆ ಪ್ರಾರಂಭಿಸಿದ್ದಾರೆಂಬ ಚರ್ಚೆ ಬಿಜೆಪಿಯಲ್ಲಿ ವ್ಯತಿರಿಕ್ತ ಪರಿಣಾಮ ಮಾಡಲಾರಂಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next