ಬೆಂಗಳೂರು: ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್‌ನ 19 ಶಾಸಕರೂ ಬೆಂಬಲ ನೀಡುತ್ತೇವೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೀಡಿದ್ದ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕುಮಾರಸ್ವಾಮಿ ಅವರದ್ದು ನಾಟಕೀಯ ಹೇಳಿಕೆ ಎಂದು ಸಚಿವ ಎಂ.ಬಿ. ಪಾಟೀಲ್ ಜರೆದಿದ್ದರೆ, ಅವರು ಎಷ್ಟು ಅಸಹಾಯಕರಾಗಿದ್ದಾರೆ ತಿಳಿದುಕೊಳ್ಳಿ ಎಂದು ಸಚಿವ ಆರ್.ಬಿ. ತಿಮ್ಮಾಪುರ ಟೀಕಿಸಿದ್ದಾರೆ. ಇವರ ಬೆಂಬಲ ಕೇಳಿದ ವರ್ಯಾರು? ಅವರ ಪಕ್ಷದ ಗೊಂದಲಗಳನ್ನು ನಿವಾರಿಸಿ ಕೊಳ್ಳಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕುಮಾರಸ್ವಾಮಿ ಬೆಂಬಲಿಸಿದರೆ ಒಳ್ಳೆಯದೇ ಎಂದು ಗೃಹಸಚಿವ ಡಾ| ಜಿ. ಪರಮೇಶ್ವರ್ ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಬಿಟ್ಟು ಬಂದರೆ ಯೋಚಿಸ ಬಹುದು ಎಂದು ಬಿಜೆಪಿಯ ಸಿ.ಟಿ. ರವಿ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ. ಪಾಟೀಲ್, ಕುಮಾರಸ್ವಾಮಿ ಹೇಳಿಕೆ ಬಗ್ಗೆ ಅವರಿಂದಲೇ ಸ್ಪಷ್ಟನೆ ಕೇಳಬೇಕು. ಯಾವ ಅರ್ಥದಲ್ಲಿ ಮಾತನಾಡಿದ್ದಾರೋ ಗೊತ್ತಿಲ್ಲ. ನಮ್ಮಲ್ಲಿ ಗೊಂದಲ ಸೃಷ್ಟಿಸಬೇಕೆಂದುಕೊಂಡು ಹೇಳಿದ್ದರೆ, ಅವರು ತಮ್ಮ ಪ್ರಯತ್ನದಲ್ಲಿ ಸಫಲರಾಗಲು ಸಾಧ್ಯವಿಲ್ಲ. ಹೀಗಾಗಿ ಇದೊಂದು ನಾಟಕೀಯ ಹೇಳಿಕೆ ಎಂದು ತಳ್ಳಿ ಹಾಕಿದರು.
ಕೋಮುವಾದಿ ಪಕ್ಷವನ್ನು ದೂರ ಇಡಬೇಕಿದ್ದಾಗ ಜೆಡಿಎಸ್‌ನ ಬೆಂಬಲ ಕೇಳಿದ್ದು ನಿಜ. ಈಗ ನಮಗೆ ಅವರ ಅಗತ್ಯ ಏನಿದೆ? ನಮ್ಮಲ್ಲಿ 136 ಶಾಸಕರಿದ್ದಾರೆ. ನಮ್ಮ ಪಕ್ಷದಲ್ಲಿ ಯಾರು ಸಿಎಂ ಆಗುತ್ತಾರೆ, ಪಕ್ಷದ ಅಧ್ಯಕ್ಷರಾಗುತ್ತಾರೆ ಎಂಬುದನ್ನು ಕಟ್ಟಿಕೊಂಡು ಬಿಜೆಪಿ ಹಾಗೂ ಜೆಡಿಎಸ್‌ಗೆ ಏನಾಗಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಕುಮಾರಸ್ವಾಮಿ ಹೇಳಿಕೆಗೆ ನಗುತ್ತಲೇ ಪ್ರತಿಕ್ರಿಯಿಸಿದ ಸಿ.ಟಿ.ರವಿ, ನಮ್ಮದು ಬಿಜೆಪಿ, ಅವರದ್ದು ಕಾಂಗ್ರೆಸ್. ಅವರು ಬೆಂಬಲ ಕೇಳ್ಳೋ ಹಾಗಿಲ್ಲ. ನಾವು ಕೊಡೋ ಹಾಗಿಲ್ಲ. ನಾವು ಅಪ್ಪಟ ರಾಷ್ಟ್ರೀಯವಾದಿಗಳು. ಆದರೆ ಅವರ ಪ್ರಕಾರ ಕೋಮುವಾದಿಗಳು. ಹೀಗಾಗಿ ಎಣ್ಣೆ-ಸೀಗೇಕಾಯಿ ಇದ್ದಂತೆ. ಒಂದು ವೇಳೆ ಡಿಕೆಶಿ ಕಾಂಗ್ರೆಸ್ ಬಿಟ್ಟು ಬಂದರೆ ಯೋಚನೆ ಮಾಡಬಹುದು ಎಂದು ಕಾಲೆಳೆದಿದ್ದಾರೆ.