Advertisement

ಬಿ.ಎಲ್.ಸಂತೋಷ್ ವಿರುದ್ಧ ಏಕವಚನದಲ್ಲಿ ಕಿಡಿಕಾರಿದ ಹೆಚ್ ಡಿಕೆ

05:07 PM Dec 19, 2022 | Team Udayavani |

ಬೆಂಗಳೂರು: ”ಅವನ್ಯಾರೋ ಜೋಳಿಗೆ ಇಡ್ಕೊಂಡು ಓಡಾಡೋನು ಏನೋ‌ ಹೇಳಿದ್ದಾನೆ. ಕರ್ನಾಟಕಕ್ಕೂ ನಿನಗೂ ಏನ್ ಸಂಬಂಧ, ಕರ್ನಾಟಕಕ್ಕೆ ನಿನ್ನ ಕೊಡುಗೆ ಏನು?” ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ವಿರುದ್ದ ಹೆಚ್.ಡಿ.ಕುಮಾರಸ್ವಾಮಿ ಸೋಮವಾರ ಕಿಡಿ ಕಾರಿದ್ದಾರೆ.

Advertisement

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಮಿಸ್ಟರ್ ಸಂತೋಷ್, ಲೂಟಿ ದರೋಡೆ ಮಾಡಿ ಕರ್ನಾಟಕ ಹಣವನ್ನ ಕೊಂಡೊಯ್ದಿದ್ದೀರಾ. ಸಂತೋಷವಾಗಿದ್ದೀರಂತೆ ಲೂಟಿ ಹೊಡೆದು. ರಾಜ್ಯದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಮಾಡುವವರು, ವಾಮಾಚಾರ ಮಾಡುವವರಿಂದ ಹಣ ತೆಗೆದುಕೊಂಡು ಆಪರೇಷನ್ ಕಮಲ ಮಾಡಿ ನಮ್ಮ‌ ಸರ್ಕಾರ ತೆಗೆದಿರಿ ಎಂದು ಕಿಡಿಕಾರಿದರು.

ಪ್ರಧಾನಿಗಳ ಬಳಿ ಕೇಳಿ, ನಮ್ಮ ಕುಟುಂಬ ಏನು ಅಂತ. ನಮ್ಮ ಮನೆತನ, ಮಾಜಿ ಪ್ರಧಾನಿಗಳು ಹೇಳ್ತಾರೆ. ಲಘುವಾಗಿ ನಮ್ಮ ಪಕ್ಷದ ಬಗ್ಗೆ ಮಾತನಾಡಬೇಡಿ. 2023ಕ್ಕೆ ನಿಮ್ಮ ಪರಿಸ್ಥಿತಿ ಏನಾಗಿರುತ್ತದೆ ಎನ್ನುವುದನ್ನು ಒಮ್ಮೆ ಊಹೆ ಮಾಡಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮದು 40% ಸರ್ಕಾರ. ನಮ್ಮ ಬಗ್ಗೆ ಮಾತಾಡಲು ನೈತಿಕತೆ ನಿಮಗೆ ಇಲ್ಲ. ಮೋದಿ ಹೆಸರಿನಲ್ಲಿ ಹೊಟ್ಟೆಪಾಡು ನೋಡ್ಕೊಂಡಿರೋರು ನೀವು. ನಾನು ಸರಕಾರ ಮಾಡೋಣ ಎಂದು ನಿಮ್ಮ ಮನೆ ಬಾಗಿಲಿಗೆ ಬಂದಿರಲಿಲ್ಲ. ಯಾರು ಯಾರ ಮನೆ ಬಾಗಿಲಿಗೆ ಬಂದಿದ್ದರು ಎನ್ನುವುದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತು. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತಾಡ್ಬೇಡಿ ಮಿಸ್ಟರ್ ಅಶೋಕ್, ಮಿಸ್ಟರ್ ಸಂತೋಷ್ ಎಂದು ಕಂದಾಯ ಸಚಿವ ಆರ್ ಅಶೋಕ್ ವಿರುದ್ಧವೂ ವಾಗ್ದಾಳಿ ನಡೆಸಿದರು.

ಬಿಜೆಪಿಯವರು ದರೋಡೆಕೋರರು, ಲೂಟಿಕೋರರು. ಇಂಥ ಬಿಜೆಪಿಯವರ ಜತೆ ಸೇರಿ ನಾನು ಸರ್ಕಾರ ನಡೆಸುವುದಕ್ಕೆ ಆಗುತ್ತಾ? ಪಂಚರತ್ನ ಯೋಜನೆಗಳನ್ನು ಜಾರಿ ಮಾಡುವುದಕ್ಕೆ ಆಗುತ್ತಾ? 2023ರ ಚುನಾವಣೆ ನಂತರ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತದೆ. ಆಗ ಬಿಜೆಪಿಯವರು ನಮ್ಮ ಮುಂದೆ ಅರ್ಜಿ ಹಿಡಿದು ಬರುತ್ತಾರೆ ನೋಡೋಣ. ಸಮಾಜವನ್ನು ಒಡೆಯುವ, ಜನರ ನಡುವೆ ದ್ವೇಷ ಬಿತ್ತುವ ಇಂಥವರ ಜತೆ ಸರಕಾರ ರಚನೆ ಮಾಡಲು ಸಾಧ್ಯವೇ? ಎಂದರು.

Advertisement

ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ಭೋಜೆಗೌಡ, ಮಾಜಿ ಸದಸ್ಯ ಹೆಚ್.ಎಂ.ರಮೇಶಗೌಡ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next