ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎರಡನೇ ದಿನವೂ ಚುನಾವಣಾ ಪ್ರಚಾರ ಮುಂದುವರಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಪಕ್ಷದ ಅಭ್ಯರ್ಥಿ ಜಿ.ಟಿ.ದೇವೇಗೌಡ ಪರ ಮತಯಾಚಿಸಿದರು.
ಭಾನುವಾರ ಬೆಳಗ್ಗೆ ಲಿಂಗಾಂಬುದಿಪಾಳ್ಯದಿಂದ ಚುನಾವಣಾ ಪ್ರಚಾರಕ್ಕಾಗಿಯೇ ವಿಶೇಷವಾಗಿ ಸಿದ್ಧಪಡಿಸಿರುವ ವಿಕಾಸವಾಹಿನಿ ಏರಿದ ಎಚ್.ಡಿ.ಕುಮಾರಸ್ವಾಮಿ ಮತ್ತು ಜಿ.ಟಿ.ದೇವೇಗೌಡ ಜೆಡಿಎಸ್‌ಗೆ ಮತ ನೀಡುವಂತೆ ಮನವಿ ಮಾಡಿದರು.
ಶ್ರೀರಾಂಪುರ ವೃತ್ತದಿಂದ ಉದ್ಬೂರು ಗ್ರಾಮಕ್ಕೆ ಆಗಮಿಸಿದ ಕುಮಾರಸ್ವಾಮಿ ಅವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಗ್ರಾಮದ ಮುಖಂಡರು, ಯುವಕರು, ಪಟಾಕಿ ಸಿಡಿಸಿ, ಜೈಕಾರ ಕೂಗುತ್ತಾ ತಮಟೆ ವಾದ್ಯದೊಂದಿಗೆ ಪುಷ್ಪವೃಷ್ಟಿ ಸುರಿಸಿ ಜೆಡಿಎಸ್ ನಾಯಕರನ್ನು ಸ್ವಾಗತಿಸಿದರು.
ಉದ್ಬೂರು ಗ್ರಾಮ ದತ್ತು: ಗ್ರಾಮದ ವಿಳ್ಯದೆಲೆ ಸಂತೆ ಮೈದಾನದಲ್ಲಿ ತೆರೆದ ವಾಹನದಲ್ಲಿ ನಿಂತು ಭಾಷಣ ಮಾಡಿದ ಕುಮಾರಸ್ವಾಮಿ, ಈ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಿದರು. ಅಲ್ಲದೆ ಉದ್ಬೂರು ಗ್ರಾಮವನ್ನು ದತ್ತು ತೆಗೆದುಕೊಂಡು ಗ್ರಾಮದ ಜನರ ಬಡತನ ಹೋಗಲಾಡಿಸುವುದಾಗಿ ಭರವಸೆ ನೀಡಿದರು. ಅಲ್ಲಿಂದ ಮುಂದೆ ಉದ್ಬೂರು ಎಸ್.ಸಿ.ಕಾಲೋನಿ, ಕೆಲ್ಲಹಳ್ಳಿ, ಟಿ.ಕಾಟೂರು, ಮಾರ್ಬಳ್ಳಿ ಗ್ರಾಮಗಳಲ್ಲಿ ರೋಡ್ ಶೋ ನಡೆಸಿದರು.
ತೆನೆ ಹೊತ್ತ ಪುರುಷ: ಮಾರ್ಬಳ್ಳಿ ಗ್ರಾಮದಲ್ಲಿ ಜೆಡಿಎಸ್ ಜೆಡಿಎಸ್‌ನ ತೆನೆ ಹೊತ್ತ ಮಹಿಳೆಯ ಚಿಹ್ನೆಯನ್ನು ಬಿಂಬಿಸಲು ರವಿ ಎಂಬ ಯುವಕ ಹಸಿರು ಸೀರೆಯುಟ್ಟು, ಬಳೆ ತೊಟ್ಟು, ತಲೆಯ ಮೇಲೆ ಹಸಿ ಹುಲ್ಲಿನ ಕಂತೆ ಹೊತ್ತು ವಿಕಾಸವಾಹಿನಿ ಮುಂದೆ ಸಾಗಿ, ಜನರ ಗಮನ ಸೆಳೆದರು.
ಕಾಂಗ್ರೆಸ್ ಬಾವುಟ ತೋರಿದ ಯುವಕರು: ಅಲ್ಲಿಂದ ಮಾರ್ಬಳ್ಳಿ ಹುಂಡಿಗೆ ತೆರಳಿದ ಎಚ್.ಡಿ.ಕುಮಾರಸ್ವಾಮಿ ಮತ್ತು ಜಿ.ಟಿ.ದೇವೇಗೌಡರು ಪ್ರತಿರೋಧ ಎದುರಿಸಬೇಕಾಯಿತು. ತೆರೆದ ವಾಹನದಲ್ಲಿ ಜೆಡಿಎಸ್ ನಾಯಕರು ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆ ನೂರಾರು ಯುವಕರು ಕೈಯಲ್ಲಿ ಕಾಂಗ್ರೆಸ್ ಬಾವುಟ ಹಿಡಿದು ಬೀಸುತ್ತಾ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜೈಕಾರ ಕೂಗಿದರು.
ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತ ಪೊಲೀಸರು, ಕಾಂಗ್ರೆಸ್ ಬಾವುಟ ಹಿಡಿದಿದ್ದ ಯುವಕರನ್ನು ಕಳುಹಿಸಲು ಮುಂದಾದರು. ಈ ವೇಳೆ ಕುಮಾರಸ್ವಾಮಿಯವರೇ ಪೊಲೀಸರನ್ನು ತಡೆದು, ಅವರು ಜೈಕಾರ ಕೂಗಿಕೊಳ್ಳಲಿ ಬಿಡಿ, ನಮ್ಮ ಕೆಲಸ ನಾವು ಮಾಡೋಣ, ಅವರಿಗೆ ತೊಂದರೆ ಕೊಡಬೇಡಿ ಎಂದು, ತೆರೆದ ವಾಹನದಲ್ಲಿ ನಿಂತು ಭಾಷಣ ಮಾಡಿದರು.