Advertisement

ರಾಜ್ಯದಿಂದ ಎಚ್‌ಡಿಕೆ, ಪ್ರಹ್ಲಾದ್‌ ಜೋಶಿ ಸಚಿವರು?

12:07 AM Jun 09, 2024 | Team Udayavani |

ಬೆಂಗಳೂರು: ಕರ್ನಾಟಕದಿಂದ ಗೆದ್ದಿರುವ ಬಿಜೆಪಿ-ಜೆಡಿಎಸ್‌ಗಳ 19 ಸಂಸದರಲ್ಲಿ ಯಾರಿಗೆಲ್ಲ ಕೇಂದ್ರ ಸಚಿವ ಸ್ಥಾನ ಸಿಗಲಿದೆ ಎಂಬ ಚರ್ಚೆ ಬಿರುಸಾಗಿದೆ. ಪ್ರಾದೇಶಿಕತೆ, ಸಮುದಾಯ ಬಲ, ಹಿರಿತನ ಎಲ್ಲವನ್ನೂ ಸಮೀಕರಿಸಿ ಸ್ಥಾನ ನೀಡುವ ಸಾಧ್ಯತೆಯಿದೆ.

Advertisement

ಮಂಡ್ಯದಿಂದ ಗೆದ್ದಿರುವ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಹಾಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿದೆ. ಒಂದು ವೇಳೆ ಪ್ರಹ್ಲಾದ್‌ ಜೋಶಿ ಲೋಕಸಭೆಯ ಸ್ಪೀಕರ್‌ ಆದರೆ ಜಗದೀಶ್‌ ಶೆಟ್ಟರ್‌ಗೆ ಸಚಿವ ಪಟ್ಟ ಸಿಗುವ ಸಾಧ್ಯತೆಯಿದೆ.

ಬಿಜೆಪಿಯು ಮಿತ್ರಪಕ್ಷಗಳನ್ನು ಆಶ್ರಯಿಸಲೇ ಬೇಕಿದ್ದು, ಷರತ್ತುಬದ್ಧ ಸಚಿವ ಸಂಪುಟ ರಚನೆಯ ಕಸರತ್ತು ನಡೆಯಬೇಕಿರುವುದರಿಂದ ಕರ್ನಾಟಕದ ಕೋಟಾ ಕಡಿಮೆ ಆಗುವುದು ನಿಚ್ಚಳವಾಗಿದೆ.

ಕಳೆದ ಬಾರಿ 25 ಸ್ಥಾನ ಗೆದ್ದಿದ್ದ ಬಿಜೆಪಿಯ ನಾಲ್ವರು ಸಚಿವರಾಗಿದ್ದರು. ಈ ಬಾರಿ ಬಿಜೆಪಿ- ಜೆಡಿಎಸ್‌ ಸೇರಿ 19 ಸ್ಥಾನಗಳನ್ನಷ್ಟೇ ಗೆದ್ದಿದ್ದು, ಸಚಿವ ಪದವಿಯ ಲೆಕ್ಕಾಚಾರಗಳೂ ತಲೆಕೆಳಗಾಗಲಿವೆ. ಬಿಜೆಪಿ ಗೆದ್ದಿರುವುದು 17 ಸ್ಥಾನವಾಗಿದ್ದರೂ 2ರಿಂದ 3 ಸಚಿವ ಸ್ಥಾನ ಸಿಕ್ಕಿದರೆ ಹೆಚ್ಚು ಎನ್ನಲಾಗಿದೆ. ಜೆಡಿಎಸ್‌ ಗೆದ್ದಿರುವುದು 2 ಸ್ಥಾನವಾದರೂ ಒಂದು ಸಚಿವ ಸ್ಥಾನ ಖಚಿತವಾಗಿದೆ.

ಮೊದಲ ಹಂತದಲ್ಲಿ ಜೋಶಿ, ಎಚ್‌ಡಿಕೆ?
ರವಿವಾರ ಸಂಜೆ ಮೋದಿ ಜತೆಗೆ 30ರಿಂದ 40 ಮಂದಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಂಭವವಿದ್ದು, ಈ ಪೈಕಿ ಕರ್ನಾಟಕ ಬಿಜೆಪಿಯಿಂದ ಒಬ್ಬರು ಹಾಗೂ ಜೆಡಿಎಸ್‌ನಿಂದ ಒಬ್ಬರಿಗೆ ಅವಕಾಶ ಸಿಗಲಿದೆ. ಪ್ರಹ್ಲಾದ್‌ ಜೋಶಿ ಮತ್ತೊಮ್ಮೆ ಸಚಿವ ಪಟ್ಟವನ್ನೇರುವ ಸಾಧ್ಯತೆಗಳು ದಟ್ಟವಾಗಿವೆ. ಮಂಡ್ಯದಲ್ಲಿ ಜೆಡಿಎಸ್‌ನಿಂದ ಗೆದ್ದಿರುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಹಳೆ ಮೈಸೂರು ಹಾಗೂ ಒಕ್ಕಲಿಗ ಕೋಟಾದಡಿ ಅವಕಾಶ ಸಿಗಬಹುದು. ಈ ನಡುವೆ ಸ್ಪೀಕರ್‌ ಹುದ್ದೆಗೂ ಪ್ರಹ್ಲಾದ್‌ ಜೋಶಿ ಹೆಸರು ಕೇಳಿಬರುತ್ತಿದೆ.

Advertisement

ಎರಡನೇ ಹಂತದಲ್ಲಿ ಒಂದಿಬ್ಬರಿಗೆ?
ಪ್ರಹ್ಲಾದ್‌ ಜೋಶಿ ಸ್ಪೀಕರ್‌ ಆದರೆ ಜಗದೀಶ್‌ ಶೆಟ್ಟರ್‌ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದ್ದು, ಹಾವೇರಿಯಿಂದ ಗೆದ್ದಿರುವ ಮತ್ತೋರ್ವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೆಸರೂ ಸಚಿವ ಸ್ಥಾನಕ್ಕೆ ಕೇಳಿಬಂದಿದೆ. ದಲಿತ ಕೋಟದಲ್ಲಿ ವಿಜಯಪುರದಿಂದ ಗೆದ್ದಿರುವ ರಮೇಶ್‌ ಜಿಗಜಿಣಗಿ ಅವರ ಹೆಸರು ಕೇಳಿಬರುತ್ತಿದ್ದು, ಮಧ್ಯ ಕರ್ನಾಟಕದಿಂದ ಗೆದ್ದಿರುವ ಗೋವಿಂದ ಕಾರಜೋಳರಿಗೆ ಮಣೆ ಹಾಕಬಹುದಾಗಿದೆ.

ಡಾ| ಮಂಜುನಾಥ್‌ಗೆ
ಉನ್ನತ ಸಮಿತಿಯಲ್ಲಿ ಸ್ಥಾನ?
ಜಿದ್ದಾಜಿದ್ದಿನ ಕ್ಷೇತ್ರಗಳಾಗಿದ್ದ ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಕ್ಷೇತ್ರಗಳಿಂದ ಗೆದ್ದಿರುವ ಡಾ| ಸಿ.ಎನ್‌. ಮಂಜುನಾಥ್‌ ಹಾಗೂ ಯದುವೀರ್‌ ಒಡೆಯರ್‌ ಅವರ ಮೇಲೂ ನಿರೀಕ್ಷೆಗಳು ಹೆಚ್ಚಿವೆ. ಡಾ| ಮಂಜುನಾಥ್‌ ಅವರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಉನ್ನತ ಮಟ್ಟದ ಸಮಿತಿ, ಕಾರ್ಯಪಡೆ ಅಧ್ಯಕ್ಷರನ್ನಾಗಿಸುವ ಮೂಲಕ ಅವರ ಸೇವೆಯನ್ನು ಬಳಸಿಕೊಳ್ಳುವ ಚಿಂತನೆಗಳು ನಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next