ಬೆಂಗಳೂರು:ಮೇಕೆದಾಟು ಯೋಜನೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ “ಮಿ.ಸುಳ್ಳಯ್ಯ ಈಗ ಮೇಕೆದಾಟು ವಿಚಾರದಲ್ಲಿ ಹೊಸ ಕತೆ, ಚಿತ್ರಕತೆ ಬರೆದಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, “ ಈಗ ಮಿ.ಸುಳ್ಳಯ್ಯ ಹೊಸ ಕತೆ, ಚಿತ್ರಕತೆ ಬರೆದಿದ್ದಾರೆ. ಮೇಕೆದಾಟು ಯೋಜನೆಗೆ 1968ರಲ್ಲೇ ಕಾಂಗ್ರೆಸ್ ಪ್ರಯತ್ನಿಸಿತ್ತು ಎಂದು ಹೇಳಿದ್ದಾರೆ. 2017ರಲ್ಲಿ ಕಾಂಗ್ರೆಸ್ ಸರಕಾರ ಇದಕ್ಕೆ ಡಿಪಿಆರ್ ಸಿದ್ದಪಡಿಸಿ 5912 ಕೋಟಿ ರೂ. ಯೋಜನಾ ವೆಚ್ಚ ನಿಗದಿ ಮಾಡಿತ್ತು.
ಸಮ್ಮಿಶ್ರ ಸರಕಾರದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ 9000 ಕೋಟಿ ರೂ. ಮೊತ್ತದ ವಿಸ್ತ್ರತ ಡಿಪಿಆರ್ ನ್ನು ಕೇಂದ್ರಕ್ಕೆ ಕಳುಹಿಸಿದ್ದರಂತೆ” ಅಬ್ಬ ಸಿದ್ದಸುಳ್ಳುಶೂರ. ಸುಳ್ಳುಸೃಷ್ಟಿಗೊಂದು ಆಸ್ಕರ್ ಇರಬೇಕಿತ್ತು. ಮೇಕೆದಾಟು ಸಮಗ್ರ ಯೋಜನೆ ಡಿಪಿಆರ್ ಸಿದ್ದವಾಗಿ ಕೇಂದ್ರಕ್ಕೆ ಸಲ್ಲಿಕೆಯಾಗಿದ್ದು 2018ರಲ್ಲಿ. ಅದು ನಾನು ಮುಖ್ಯಮಂತ್ರಿಯಾಗಿದ್ದಾಗ. ಇದರಲ್ಲಿ ಡಿಕೆಶಿ ಪಾತ್ರವೇನೂ ಇಲ್ಲ. ಈ ಸತ್ಯವನ್ನು ಸಿದ್ದಹಸ್ತರು ಮುಚ್ಚಿಟ್ಟ ಪರಮಾರ್ಥವೇನು ? ಎಂದು ಎಚ್ ಡಿಕೆ ಪ್ರಶ್ನಿಸಿದ್ದಾರೆ.
ನನ್ನ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದವರು ಮೇಕೆದಾಟು ವಿಚಾರವಾಗಿ ನಾನು ಮತ್ತು ಸಂಪುಟ ಸಹೋದ್ಯೋಗಿ ರೇವಣ್ಣ ಅಂದಿನ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ದಿಲ್ಲಿಯಲ್ಲಿ ಭೇಟಿ ಮಾಡಿದಾಗ ಎಲ್ಲಿದ್ದರು ? ಜನರಿಗೆ ತಿಳಿಯಬೇಕಲ್ಲವೇ ? ಎಂದು ವ್ಯಂಗ್ಯವಾಡಿದ್ದಾರೆ.
ನನ್ನ ಮನವಿ ಮೇರೆಗೆ ಅಂದು ಗಡ್ಕರಿಯವರು ತಕ್ಷಣ ಡಿಪಿಆರ್ ಸಿದ್ದಪಡಿಸಿ ಕಳುಹಿಸಿ ಎಂದಿದ್ದರು. ಆ ಸಭೆಗೆ ಡಿಕೆಶಿ ಬರಲೇ ಇಲ್ಲ. ಅಂದು ನಾನು ದಿಲ್ಲಿಯಲ್ಲಿ ಮಾಧ್ಯಮಗಳ ಜತೆಗೆ ಮೇಕೆದಾಟು ವಿಚಾರವಾಗಿ ಮಾತನಾಡಿ, ಗಡ್ಕರಿ ಭೇಟಿಯ ಉದ್ದೇಶ ವಿವರಿಸಿದ್ದೆ ಎಂದು ಹೇಳಿದ್ದಾರೆ.
ಚಾಮರಾಜನಗರದ ಶ್ರೀ ಚಾಮರಾಜೇಶ್ವರನ ಸನ್ನಿಧಿಯಲ್ಲಿ ಸಿದ್ದಹಸ್ತರು ಸತ್ಯ ನುಡಿಯಬೇಕಿತ್ತು. ಆದರೆ ಶಿವನ ಶಿರದಲ್ಲಿ ನೆಲೆನಿಂತ ಗಂಗೆಯ ಸಾಕ್ಷಿಯಾಗಿ ಸುಳ್ಳು ಹೇಳಿ ಅಪಚಾರ ಎಸಗಿದ್ದಾರೆ. ತಪ್ಪಿಗೆ ಪ್ರಾಯಶ್ಚಿತ ತಪ್ಪಿದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.