Advertisement

ಮೈತ್ರಿ ಅಭ್ಯರ್ಥಿಗಳ ಪರ ಎಚ್‌ಡಿಕೆ 2 ದಿನ ಪ್ರಚಾರ

07:24 AM May 11, 2019 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಪರ ಎರಡು ದಿನ ಪ್ರಚಾರ ನಡೆಸಲಿದ್ದಾರೆ. ಸೋಮವಾರ ಹಾಗೂ ಮಂಗಳವಾರ ಎರಡೂ ಕ್ಷೇತ್ರಗಳಲ್ಲಿ ಆಯೋಜಿಸಿರುವ ಪ್ರಚಾರ ಸಭೆಗಳಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳಲಿದ್ದಾರೆ.

Advertisement

ಶುಕ್ರವಾರ ಸಂಜೆ ವಿಶ್ರಾಂತಿಗಾಗಿ ರೆಸಾರ್ಟ್‌ಗೆ ತೆರಳಿರುವ ಮುಖ್ಯಮಂತ್ರಿ, ಎರಡು ದಿನ ವಿಶ್ರಾಂತಿ ಪಡೆದು, ನಂತರ ಸೋಮವಾರ ಹುಬ್ಬಳ್ಳಿಗೆ ತೆರಳಿ, ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರ ಪ್ರಚಾರ ನಡೆಸಲಿದ್ದಾರೆ. ಮಂಗಳವಾರ ಕಲಬುರಗಿಗೆ ತೆರಳಿ ಚಿಂಚೋಳಿ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸುಭಾಷ್‌ ರಾಥೋಡ್‌ ಪರ ಪ್ರಚಾರ ನಡೆಸಲಿದ್ದಾರೆ.

ಪ್ರಚಾರದ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಗಾಣಗಾಪುರದ ದತ್ತಾತ್ರೇಯ ದೇವಾಲಯಕ್ಕೂ ಭೇಟಿ ನೀಡುವ ಕಾರ್ಯಕ್ರಮವಿದೆ. ಮುಖ್ಯಮಂತ್ರಿಯವರು ಶುಕ್ರವಾರ ಮಡಿಕೇರಿಯ ರೆಸಾರ್ಟ್‌ಗೆ ತೆರಳುವುದಕ್ಕೂ ಮುನ್ನ ಜ್ಯೋತಿಷಿ ದ್ವಾರಕಾನಾಥ್‌ ಗುರೂಜಿ ಅವರನ್ನು ಭೇಟಿ ಮಾಡಿದ್ದರು.

ಇತ್ತೀಚೆಗಷ್ಟೇ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಆಗಮಿಸುವಂತೆ ಅವರಿಗೆ ಮನವಿ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next