ಬೆಂಗಳೂರು: ಸಮ್ಮಿಶ್ರ ಸರ್ಕಾರದ ಭಾಗವಾಗಿ ಬಿಎಸ್‌ಪಿ ಮುಂದುವರಿಯುವ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರ ಜತೆ ಚರ್ಚೆಗೆ ಮುಂದಾಗಿದ್ದಾರೆ.
ದೇಶದ ಬೇರೆ, ಬೇರೆ ರಾಜ್ಯಗಳಲ್ಲಿ ಏನೇ ತೀರ್ಮಾನ ಕೈಗೊಂಡರೂ ಕರ್ನಾಟಕದ ಮಟ್ಟಿಗೆ ಕಾಂಗ್ರೆಸ್-ಜೆಡಿಎಸ್-ಬಿಎಸ್‌ಪಿ ಮೈತ್ರಿಕೂಟ ಇರಲಿ.ಬಿಎಸ್‌ಪಿ, ಜೆಡಿಎಸ್‌ನ ಭಾಗವಾಗಿ ಮುಂದುವರಿಯಲಿ ಎಂದು ಮನವೊಲಿಸಲು ತೀರ್ಮಾನಿಸಿದ್ದಾರೆ.
ದೆಹಲಿಯಲ್ಲಿ ಮಾಯಾವತಿ ಅವರ ಭೇಟಿಗೆ ಸಮಯ ನಿಗದಿಪಡಿಸುವಂತೆ ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಅವರಿಗೆ ಸೂಚನೆ ನೀಡಿದ್ದಾರೆ. ಈಗಾಗಲೇ ಡ್ಯಾನಿಶ್ ಅಲಿ ಅವರು ಮಾಯಾವತಿ ಅವರ ಜತೆ ಮಾತನಾಡಿದ್ದಾರೆ. ಒಂದೊಮ್ಮೆ ಮಾಯಾವತಿ ಒಪ್ಪಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎನ್.ಮಹೇಶ್ ಮತ್ತೆ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ. ಇದೇ ಕಾರಣಕ್ಕೆ ಕುಮಾರಸ್ವಾಮಿಯವರು ಎನ್.ಮಹೇಶ್ ಅವರ ರಾಜೀನಾಮೆಯನ್ನು ಅಂಗೀಕಾರಕ್ಕಾಗಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿಲ್ಲ ಎಂದು ತಿಳಿದು ಬಂದಿದೆ.
ಪ್ರಧಾನಿ ಮೋದಿ ಅವರು ಕರ್ನಾಟಕದಿಂದ ಲೋಕಸಭೆಗೆ ಸ್ಪರ್ಧಿಸುವ ಮೂಲಕವಾದರೂ ರಾಜ್ಯದ ಅಭಿವೃದ್ಧಿಯಾದರೆ ಸಂತೋಷ. 5 ವರ್ಷದಲ್ಲಿ ಕರ್ನಾಟಕದ ಅಭಿವೃದ್ಧಿಗೆ ಮೋದಿ ಸ್ಪಂದಿಸಲಿಲ್ಲ. ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗಿ ರಾಜ್ಯದ ಅಭಿವೃದ್ಧಿ ಮಾಡಲಿ.
– ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ