ಬೆಂಗಳೂರು: ಮೈಸೂರಿನಲ್ಲಿ ನಡೆದ ಜನಾಂದೋಲನ ಸಮಾವೇಶದ ಬಳಿಕವೂ ಕಾಂಗ್ರೆಸ್ ಪಾಳಯದಲ್ಲಿ ಸೃಷ್ಟಿಯಾಗಿದ್ದ ಆತಂಕ ಇನ್ನೂ ಜೀವಂತವಾಗಿದ್ದು 2 ದಿನಗಳ ಹಿಂದೆ ದಿಲ್ಲಿಯಲ್ಲಿ ನಡೆದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯ ಬಗ್ಗೆ ಹಲವು ಗುಮಾನಿ ಸೃಷ್ಟಿಯಾಗಿವೆ.
ಈ ಭೇಟಿಯ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕಾನೂನು ತಜ್ಞರ ಜತೆಗೆ ಸಮಾಲೋಚನೆ ನಡೆಸಿ ದ್ದಾರೆ. ಅದರ ಹೊರತಾಗಿಯೂ ದಿಲ್ಲಿ ಮೂಲದ ಇಬ್ಬರು ಪ್ರತಿಷ್ಠಿತ ವಕೀಲರ ಜತೆಗೂ ಮಾತುಕತೆ ನಡೆಸಿದ್ದು ರಾಜ್ಯಪಾಲರ ನಡೆಯನ್ನು ಕಾನೂನು ಪರಿಧಿಯಲ್ಲಿ ಹೇಗೆ ಎದುರಿಸಬೇಕೆಂಬ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ.
ಸದ್ಯಕ್ಕೆ ರಾಜ್ಯಪಾಲರು ಮೌನಕ್ಕೆ ಶರಣಾ ಗಿದ್ದರೂ ಆ.15ರ ಬಳಿಕ ಏನಾದರೂ ಹೆಜ್ಜೆ ಇಡಬಹುದೆಂಬುದು ಸರಕಾರದ ನಂಬಿಕೆ. ಹೀಗಾಗಿ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದೆ.ಇದೆಲ್ಲದರ ಮಧ್ಯೆ ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸ್ನೇಹಮಯಿ ಕೃಷ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದಾರೆ. ಇದರ ವಿಚಾರಣೆಯೂ ಆ. 13ರಂದು ನಡೆಯಲಿದೆ.
ಇದೆಲ್ಲದರ ಆಧಾರದ ಮೇಲೆ ರಾಜ್ಯಪಾಲರು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದ್ದು ಒಟ್ಟಿನಲ್ಲಿ ರಾಷ್ಟ್ರ ರಾಜಕಾರಣಕ್ಕೆ ದಿಕ್ಸೂಚಿಯಾಗುವ ಕಾನೂನು ಸಂಗ್ರಾಮ ಸೃಷ್ಟಿಯಾಗುವ ವಾತಾವರಣ ನಿರ್ಮಾಣವಾಗಿದೆ.
ದೇವೇಗೌಡ ಹಾಗೂ ಅಮಿತ್ ಶಾ ಭೇಟಿಯ ಮರ್ಮ ಮಾತ್ರ ಕಾಂಗ್ರೆಸ್ ನಾಯಕರಿಗೆ ಅರ್ಥವಾಗಿಲ್ಲ. ಇದು ಸಹಜ ಭೇಟಿ ಎಂಬುದನ್ನು ಒಪ್ಪಿಕೊಳ್ಳುವುದಕ್ಕೆ ಕಾಂಗ್ರೆಸ್ ಪಾಳಯ ಸಿದ್ಧವಿಲ್ಲ. ರಾಜ್ಯ ರಾಜಕಾರಣಕ್ಕೆ ಸಂಬಂಧಪಟ್ಟಂತೆಯೇ ಇಬ್ಬರ ಮಧ್ಯೆ ಚರ್ಚೆ ನಡೆದಿದೆ. ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಇದು ಕಾರಣವಾಗಬಹುದೆಂಬ ಅನುಮಾನ ಕಾಂಗ್ರೆಸ್ ನಾಯಕರಲ್ಲಿ ಸೃಷ್ಟಿಯಾಗಿದೆ.