Advertisement

ಸಿದ್ದು ಹೊಣೆ ಹೊತ್ತರಷ್ಟೇ ಗೌಡರು ಕಣಕ್ಕೆ?

01:58 AM Jun 03, 2020 | Sriram |

ಬೆಂಗಳೂರು: ಸಿದ್ದರಾಮಯ್ಯ ಗೆಲ್ಲಿಸುವ ಹೊಣೆಗಾರಿಕೆ ಹೊತ್ತರೆ ಮಾತ್ರ ರಾಜ್ಯಸಭೆ ಚುನಾವಣೆಯ ಕಣಕ್ಕಿಳಿಯಲು ಸಿದ್ಧ ಎಂಬ ಸಂದೇಶವನ್ನು ಕಾಂಗ್ರೆಸ್‌ ಹೈಕಮಾಂಡ್‌ಗೆ ರವಾನಿಸಲು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಮುಂದಾಗಿದ್ದಾರೆ.

Advertisement

ಲೋಕಸಭೆ ಚುನಾವಣೆಯಲ್ಲಿ ತುಮಕೂರು ಮತ್ತು ಮಂಡ್ಯದಲ್ಲಿ ರಾಜಕೀಯ ಒಳ ಏಟಿನ ಕಹಿ ಅನುಭವದ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆಯನ್ನು ಕಾಂಗ್ರೆಸ್‌ ಹೈಕಮಾಂಡ್‌ ಮುಂದಿಡಲು ಜೆಡಿಎಸ್‌ ತೀರ್ಮಾನಿಸಿದೆ.

“ಬಿಜೆಪಿ ಹೈಕಮಾಂಡ್‌ ಒಪ್ಪಿದರೆ ಹತ್ತರಿಂದ ಹನ್ನೆರಡು ಶಾಸಕರನ್ನು ಕರೆತರುತ್ತೇನೆ’ ಎಂದು ಸಚಿವ ರಮೇಶ್‌ ಜಾರಕಿಹೊಳಿ ಪದೇ ಪದೆ ಹೇಳುತ್ತಿರುವುದು ಕೂಡ ಜಿಜ್ಞಾಸೆಗೆ ಕಾರಣವಾಗಿದೆ. ಹೀಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರು ಜವಾಬ್ದಾರಿ ವಹಿಸಿಕೊಂಡರೆ ಮಾತ್ರ ದೇವೇಗೌಡರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಬಹುದು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಹೈಕಮಾಂಡ್‌ ನಾಯಕರ ಜತೆಗೆ ರಾಜ್ಯ ನಾಯಕರ ಸಮ್ಮತಿ ಮತ್ತು ಸಹಕಾರ ಮುಖ್ಯ. ಲೋಕಸಭೆ ಚುನಾವಣೆಯ ಪರಿಸ್ಥಿತಿ ಪುನರಾವರ್ತನೆಯಾದರೆ ಕಷ್ಟ.

ಹೀಗಾಗಿ ಹೈಕಮಾಂಡ್‌ ಈ ವಿಚಾರದಲ್ಲಿ ರಾಜ್ಯ ನಾಯಕರ ಜತೆ ಚರ್ಚಿಸಿ ಅನಂತರತೀರ್ಮಾನಿಸಲಿ ಎಂದು ಗೌಡರು ಹೇಳಿ ದ್ದಾರೆ ಎಂದು ತಿಳಿದು ಬಂದಿದೆ.

Advertisement

ಕಾಂಗ್ರೆಸ್‌ನ ರಾಜ್ಯ ನಾಯಕರಲ್ಲೇ ಭಿನ್ನಾಭಿಪ್ರಾಯ ವ್ಯಕ್ತವಾದರೆ ಜೆಡಿಎಸ್‌ ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿಗೆ ಬೆಂಬಲ ನೀಡಲಿದೆ. ಅದರ ಬದಲಿಗೆ ವಿಧಾನಪರಿಷತ್‌ನ ಒಂದು ಸ್ಥಾನ ಬಿಟ್ಟುಕೊಡಲು ಕಾಂಗ್ರೆಸ್‌ ಮುಂದೆ ಬೇಡಿಕೆ ಇರಿಸುವ ಬಗ್ಗೆಯೂ ಚಿಂತನೆ ನಡೆದಿದೆ.

ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಗೆ 48ರ ಬದಲಿಗೆ 50 ಮತ ಹಂಚಿಕೆ ಮಾಡಿದರೂ 16 ಹೆಚ್ಚುವರಿ ಮತಗಳು ಇದ್ದು, ಜೆಡಿಎಸ್‌ ಅಭ್ಯರ್ಥಿಗೆ ವರ್ಗಾ ವಣೆ ಮಾಡಬಹುದಾಗಿದೆ. ಇದೆಲ್ಲವೂ ಕಾಂಗ್ರೆಸ್‌ ಹೈಕಮಾಂಡ್‌ ಮತ್ತು ರಾಜ್ಯ ನಾಯಕರ ತೀರ್ಮಾನವನ್ನು ಅವಲಂಬಿಸಿಲಿದೆ.

ಮೌನ ವಹಿಸುವುದೇ ಬಿಜೆಪಿ?
ದೇವೇಗೌಡರು ಕಾಂಗ್ರೆಸ್‌ ಬೆಂಬಲ ದಿಂದ ಆಯ್ಕೆಯಾಗಲು ಹೊರಟರೆ ಬಿಜೆಪಿ ಮೌನ ವಹಿಸಲೂಬಹುದು. ಗೌಡರ ಸ್ಪರ್ಧೆ ಅಥವಾ ಗೆಲುವಿಗೆ ಅಡ್ಡಿಯಾದರೆ ಸಮುದಾಯದ ವಿರೋಧ ಎದುರಿಸಬಹುದು ಎಂಬುದು ಕೆಲವು ಬಿಜೆಪಿ ನಾಯಕರ ಅಭಿಪ್ರಾಯ.

ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ದಂಡು
ರಾಜ್ಯಸಭೆಗೆ ಮುಂದಿನ ತಿಂಗಳು ನಡೆಯುವ ಚುನಾವಣೆಯಲ್ಲಿ ಒಂದು ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಏಳು ಮಂದಿ ಆಕಾಂಕ್ಷಿಗಳಿದ್ದಾರೆ.

ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುತ್ತಾರೆ ಎನ್ನುವ ವರದಿಯ ಬೆನ್ನಲ್ಲೇ, ಕೇಂದ್ರದ ಮಾಜಿ ಸಚಿವರಾದ ಕೆ.ಎಚ್‌.ಮುನಿಯಪ್ಪ, ವೀರಪ್ಪ ಮೊಯ್ಲಿ, ಮಾಜಿ ಸಂಸದರಾದ ಎಚ್‌.ಟಿ. ಸಾಂಗ್ಲಿಯಾನ, ವಿ.ಎಸ್‌. ಉಗ್ರಪ್ಪ, ಈಗ ನಿವೃತ್ತರಾಗುತ್ತಿರುವ ಬಿ.ಕೆ. ಹರಿಪ್ರಸಾದ್‌ ಮತ್ತು ಪ್ರೊ| ರಾಜೀವ್‌ ಗೌಡ ಕೂಡ ಹೈಕಮಾಂಡ್‌ ನಾಯಕರ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next