ಹಾಸನ: ನಂದಿನಿ ( ಕೆಎಂಎಫ್) ಯನ್ನು ಗುಜರಾತ್‌ನ ಆಮೂಲ್‌ನೊಂದಿಗೆ ವಿಲೀನಗೊಳಿಸುವ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರ ಪ್ರಸ್ತಾಪಕ್ಕೆ ಕೆಎಂಎಫ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ, ಮಾಜಿ ಸಚಿವ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂದಿನಿ ಕನ್ನಡಿಗರ ಆಸ್ಮಿತೆ. ನಂದಿನಿ ಕನ್ನಡಮ್ಮನ ಮಗಳಿದ್ದಂತೆ. ಕನ್ನಡ ನಾಡಿನ ರೈತರ ಜೀವನದಲ್ಲಿ ಬೆರೆತು ಹೋಗಿರುವ ನಂದಿನಿ ಸಂಸ್ಥೆಯನ್ನು ಆಮೂಲ್‌ನೊಂದಿಗೆ ವಿಲೀನಗೊಳಿಸುವ ಅನಿವಾರ್ಯತೆಯೂ ಎದುರಾಗಿಲ್ಲ. ಗುಜರಾತ್‌ನ ಆಮೂಲ್ ಅನ್ನು ಮೀರಿ ಬೆಳೆಯುವ ಶಕ್ತಿ ಕೆಎಂಎಫ್ ಗೆ ಇದೆ.
ಅಂತಹ ಅಡಿಪಾಯವನ್ನು ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗಲೇ ಹಾಕಿದ್ದಾರೆ. ದೇಶದಲ್ಲಿ ಆಮೂಲ್ ನಂತರ 2ನೇ ಸ್ಥಾನದಲ್ಲಿರುವ ಸಹಕಾರಿ ಕ್ಷೇತ್ರದ ಹೈನು ಉದ್ಯಮ ನಂದಿನಿ ಎಂದೇ ಖ್ಯಾತವಾಗಿರುವ ಕೆಎಂಎಫ್ ಅನ್ನು ವಿಲೀನಗೊಳಿಸುವುದಕ್ಕೆ ಕನ್ನಡಿಗರು ಎಂದಿಗೂ ಅವಕಾಶ ಕೊಡಲಾರರು. ಕೆಎಂಎಫ್ಗೆ ಧಕ್ಕೆಯಾಗುವ ಸನ್ನಿವೇಶ ಎದುರಾದರೆ ಪಕ್ಷಾತೀತವಾದ ಹೋರಾಟಕ್ಕೆ ನಾನೇ ಮುಂಚೂಣಿಯಲ್ಲಿ ನಿಲ್ಲುತ್ತೇನೆ ಎಂದು ಭಾನುವಾರ ತಿರುಪತಿಯಲ್ಲಿದ್ದ ರೇವಣ್ಣ ಅವರು ಉದಯವಾಣಿಗೆ ಪ್ರತಿಕ್ರಿಯಿಸಿದರು.
ನಿತ್ಯ 80 ಲಕ್ಷ ಲೀಟರ್ ಹಾಲು ಸಂಗ್ರಹ: ಬೆಂಗಳೂರಿನಲ್ಲಿ ಮೇಗಾ ಡೇರಿ ಸ್ಥಾಪಿಸುವ ಮೂಲಕ ಎಚ್.ಡಿ.ದೇವೇಗೌಡರು ಆಂದು ಹಾಕಿದ ಭದ್ರ ಅಡಿಪಾಯದ ಆಧಾರದಲ್ಲಿ ಈಗ ರಾಜ್ಯದ ಕೆಲವು ಹಾಲು ಒಕ್ಕೂಟಗಳು ಮೆಗಾಡೇರಿಯನ್ನು ಸ್ಥಾಪಿಸಿವೆ.
ದೇಶದ ಸಹಕಾರಿ ಕ್ಷೇತ್ರದ ಕಣ್ಣು ಕುಕ್ಕುವಂತಹ ಅಭಿವೃದ್ಧಿ ಕರ್ನಾಟದ ಹೈನು ಉದ್ಯಮದಲ್ಲಾಗುತ್ತಿದೆ. ರಾಜ್ಯದಲ್ಲಿ ಈಗ ಪ್ರತಿನಿತ್ಯ 80 ಲಕ್ಷ ಲೀಟರ್ ಹಾಲಿನ ಸಂಗ್ರಹ, ಸಂಸ್ಕರಣೆಯನ್ನು 14 ಹಾಲು ಒಕ್ಕೂಟಗಳು ಕೆಎಂಎಫ್ ನೇತೃತ್ವದಲ್ಲಿ ಸಮರ್ಥವಾಗಿ ನಿರ್ವಹಿಸುತ್ತಿವೆ. ನಿರ್ವಹಣೆಯ ಲೋಪದಿಂದ ಕೆಲವು ಒಕ್ಕೂಟಗಳು ನಷ್ಟದಲ್ಲಿರಬಹುದು.
ಆದರೆ, ಹಾಸನ ಹಾಲು ಒಕ್ಕೂಟವು ಪ್ರತಿದಿನ 12 ಲಕ್ಷ ಲೀಟರ್ ಹಾಲು ಸಂಗ್ರಹಿಸಿ, ಸಂಸ್ಕರಿಸಿ ಪ್ರತಿ ವರ್ಷವೂ ಲಾಭದಲ್ಲಿಯೇ ಮುನ್ನಡೆಯುತ್ತಾ ರಾಜ್ಯದಲ್ಲಿ ಬೆಂಗಳೂರು ಒಕ್ಕೂಟದ ನಂತರ 2ನೇ ಸ್ಥಾನದಲ್ಲಿದೆ. ಇಂತಹ ಅಗ್ರಗಣ್ಯ ಸಹಕಾರಿ ಸಂಸ್ಥೆಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕಾದ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಆಮೂಲ್‌ನೊಂದಿಗೆ ವಿಲೀನಗೊಳಿಸುವ ಕನಸು ಕಾಣುವುದನ್ನು ಬಿಡಬೇಕು ಎಂದು ಕಿಡಿಕಾರಿದರು.