ಹಾಸನ: ಕೊರೊನಾದಿಂದ ಉಂಟಾದ ವಿಷಮ ಪರಿಸ್ಥಿತಿಯಿಂದ ಚೇತರಿಸಿಕೊಂಡಿರುವ ಹಾಸನ ಹಾಲು ಒಕ್ಕೂಟ (ಹಾಮೂಲ್) ಮಾರ್ಚ್ ಅಂತ್ಯಕ್ಕೆ 28 ಕೋಟಿ ರೂ.ಲಾಭ ಗಳಿಕೆಯ ನಿರೀಕ್ಷೆಯಲ್ಲಿದ್ದು, ಲಾಭಾಂಶವನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸುವ ನಿಟ್ಟಿನಲ್ಲಿ ಪ್ರತಿ ಲೀಟರ್ ಹಾಲಿಗೆ 3 ರೂ. ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಎಚ್.ಡಿ.ರೇವಣ್ಣ ಪ್ರಕಟಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.1ರಿಂದ ಹಾಲು ಖರೀದಿ ದರ 3 ರೂ. ಹೆಚ್ಚಳವಾಗಲಿದ್ದು, ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 28 ರೂ. ಸಿಗಲಿದೆ. ಖರೀದಿ ದರ ಹೆಚ್ಚಳದಿಂದ ಹಾಲು ಉತ್ಪಾದಕರಿಗೆ 10 ಕೋಟಿ ರೂ. ಅನ್ನು ಲಾಭಾಂಶದಲ್ಲಿ ವರ್ಗಾವಣೆ ಮಾಡಿದಂತಾಗುತ್ತದೆ. ಈ ಹಿಂದೆ ಲೀಟರ್‌ಗೆ 2 ರೂ. ಹೆಚ್ಚಳ ಮಾಡಿದ್ದು, 18 ಕೋಟಿ ರೂ. ಲಾಭಾಂಶವನ್ನು ಹಾಲು ಉತ್ಪಾದಕರಿಗೆ ಹಂಚಿಕೆ ಮಾಡಲಾಗಿತ್ತು. ಈಗ 10 ಕೋಟಿ ರೂ. ಸೇರಿ ಕಳೆದ ಮೂರು ತಿಂಗಳೊಳಗೆ 28 ಕೋಟಿ ರೂ. ಹಾಲು ಉತ್ಪಾದಕರಿಗೆ ಹೆಚ್ಚುವರಿ ದರ ನೀಡಿದಂತಾಗುತ್ತಿದೆ ಎಂದು ವಿವರಿಸಿದರು.
ಕೊರೊನಾ ಮತ್ತು ಲಾಕ್‌ಡೌನ್‌ನಿಂದಾಗಿ ಹಾಸನ ಹಾಲು ಒಕ್ಕೂಟವು 50 ಕೋಟಿ ರೂ. ನಷ್ಟ ಅನುಭವಿಸಿತ್ತು. ಆ ನಂತರ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೇಡಿಕೆ ಹೆಚ್ಚಳದಿಂದಾಗಿ ಒಕ್ಕೂಟದ ವಹಿವಾಟಿನಲ್ಲಿ ಚೇತರಿಕೆಯಾಯಿತು. 50 ಕೋಟಿ ರೂ. ನಷ್ಟ ಭರಿಸಿಕೊಂಡು ಮುಂದಿನ ಮಾರ್ಚ್ ಅಂತ್ಯಕ್ಕೆ 28 ಕೋಟಿ ರೂ. ಲಾಭ ಗಳಿಕೆಯ ನಿರೀಕ್ಷೆಯಿದೆ ಎಂದು ತಿಳಿಸಿದರು.
ಒಕ್ಕೂಟದ ಸದಸ್ಯರಿಗೆ ಜೀವವಿಮೆ: ಒಕ್ಕೂಟ ವ್ಯಾಪ್ತಿಯ ಹಾಲು ಉತ್ಪಾದಕರ 30 ಸಾವಿರ ರಾಸುಗಳಿಗೆ ವಿಮೆ ಮಾಡಿಸಲು ಉದ್ದೇಶಿಸಿದ್ದು, ವಿಮಾ ಕಂತಿನ 900 ರೂ. ಪೈಕಿ 600 ರೂ. ಅನ್ನು ಹಾಸನ ಹಾಲು ಒಕ್ಕೂಟವು ಭರಿಸಲಿದೆ. ಇನ್ನುಳಿದ 300 ರೂ. ಅನ್ನು ಹಾಲು ಉತ್ಪಾದಕರು ಪಾವತಿಸಬೇಕಾಗುತ್ತದೆ. ಇದಕ್ಕಾಗಿ ಒಕ್ಕೂಟವು ವಾರ್ಷಿಕ 1.80 ಕೋಟಿ ರೂ. ಭರಿಸಲಿದೆ. ಹಾಗೆಯೇ 50 ಸಾವಿರ ಹಾಲು ಉತ್ಪಾದಕರಿಗೆ 2 ಲಕ್ಷ ರೂ. ಜೀವವಿಮೆ ಮಾಡಿಸುತ್ತಿದ್ದು. ಎಲ್ ಐಸಿ ವಿಮಾ ಪಾಲಿಸಿ ನೀಡುತ್ತಿದ್ದು, ಹಾಲು ಉತ್ಪಾದಕರು ಪಾವತಿಸಬೇಕಾದ 850 ರೂ. ಕಂತಿನಲ್ಲಿ ಶೇ.60 ಮೊತ್ತವನ್ನು ಒಕ್ಕೂಟ ಭರಿಸ ಲಿದೆ. ಶೇ.40 ಫಲಾನುಭವಿ ಪಾವತಿಸಬೇಕಾಗು ತ್ತದೆ. ಈ ಉದ್ದೇಶಕ್ಕಾಗಿ ಒಕ್ಕೂಟವು 2.5 ಕೋಟಿ ರೂ. ಅನ್ನು ವಾರ್ಷಿಕವಾಗಿ ಭರಿಸಲಿದೆ ಎಂದು ರೇವಣ್ಣ ಹೇಳಿದರು.
ಬೇಲೂರು ತಾಲೂಕಿನ ಹಾಲು ಉತ್ಪಾದಕರ ಸಂಘಗಳ ಮತ್ತು ಮಾರುಕಟ್ಟೆಯ ಸಮರ್ಪಕ ಮೇಲ್ವಿಚಾರಣೆಗೆ ಬೇಲೂರು ಪಟ್ಟಣದಲ್ಲಿ ಹಾಸನ ಒಕ್ಕೂಟದ ಶಿಬಿರ ಕಚೇರಿ ಪ್ರಾರಂಭಿಸಿದ್ದು, ಹಾಲು ಉತ್ಪಾದಕರ ಸಂಘಗಳ ಹಾಗೂ ಮಾರಾಟ ಏಜೆಂಟರು ಶಿಬಿರದಲ್ಲಿರುವ ಒಕ್ಕೂಟದ ಅಧಿಕಾರಿಯೊಂದಿಗೆ ಸಮಾಲೋಚನೆ ನಡೆಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ, ನಿರ್ದೇಶಕ ಹೊನ್ನವಳ್ಳಿ ಸತೀಶ್ ಹಾಜರಿದ್ದರು.