ಬೆಂಗಳೂರು: ಬಿಜೆಪಿ – ಜೆಡಿಎಸ್ ನಡುವೆ ಯಾವುದೇ ರೀತಿಯಲ್ಲಿಯೂ ಮೈತ್ರಿಯಿಲ್ಲ.2023 ರ ಚುನಾವಣೆಯಲ್ಲಿಯೂ ಮೈತ್ರಿಯಿಲ್ಲ, ಈಗಲೂ ಇಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ನಗರದಲ್ಲಿ ಮಾತಾನಾಡಿದ ಅವರು, 2023 ರ ಚುನಾವಣೆಯಲ್ಲಿ ಎಲ್ಲ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇವೆ. ಅದಕ್ಕಾಗಿ ಈಗಾಗಲೇ ಪಕ್ಷದ ಮುಖಂಡರಿಗೆ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಿದ್ದೇನೆ. ಎಲ್ಲಾ ಬಗೆಯ ತಯಾರಿ ಮಾಡಿಕೊಳ್ಳಲು ಮುಖಂಡರಿಗೆ ಸ್ವತಂತ್ರ ನೀಡಿದ್ದೇನೆ. ನಾವು ಕಾಂಗ್ರೆಸ್ – ಬಿಜೆಪಿ ವಿರುದ್ಧ ಹೋರಾಟ ಮಾಡಬೇಕು. ಈಗ ಮೈತ್ರಿ ಮಾಡಿಕೊಂಡರೆ ಮುಂದೆ ತೊಂದರೆಯಾಗಬಹುದು ಎಂದರು.
ಮೈತ್ರಿ ವಿಚಾರ ಸ್ಥಳೀಯ ನಾಯಕರಿಗೆ ಬಿಟ್ಟದ್ದು. ಆ ಬಗ್ಗೆ ಸ್ಥಳೀಯ ನಾಯಕರೇ ತೀರ್ಮಾನ ಮಾಡುತ್ತಾರೆ ಎಂದರು.ಕಾಂಗ್ರೆಸ್ ನವರು ನಮ್ಮನ್ನು ಬಿಜೆಪಿಯ ಟೀಮ್ ಬಿ ಹೇಳುತ್ತಿದ್ದಾರೆ. ನಾವು ಟೀಮ್ ಬಿ ಆಗಿದ್ದಾರೆ, ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಹಾಕುತ್ತಿರಲಿಲ್ಲ. ಮೊದಲು ನಮ್ಮ ಬಗ್ಗೆ ಹಗುರವಾಗಿ ಮಾತಾನಾಡುವುದನ್ನು ನಿಲ್ಲಿಸಲಿ ಎಂದರು.ನಮ್ಮ ಅಭ್ಯರ್ಥಿಯಿರುವ ಕ್ಷೇತ್ರದಲ್ಲಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ನಾವು ಹೋರಾಟ ಮಾಡುತ್ತೇವೆ. ಸ್ಥಳೀಯ ಮುಖಂಡರ ಜತೆ ಸಮಾಲೋಚನೆ ಮಾಡಿದ್ದೇನೆ. ಮುಖಂಡರ ಅಭಿಪ್ರಾಯಗಳನ್ನೂ ನಾವು ಸಂಗ್ರಹಿಸಿದ್ದೇವೆ. ನಮ್ಮ ಗುರಿ 2023ರ ಸಾರ್ವತ್ರಿಕ ಚುನಾವಣೆಯಲ್ಲಿ 123 ಸೀಟುಗಳನ್ನು ಗೆಲ್ಲುವುದು ಎಂದರು.
ಇದನ್ನೂ ಓದಿ: ಒಂದು ಮತಕ್ಕೆ 50 ಸಾವಿರ ಆಮಿಷ: ಪರಿಷತ್ ಕಣದಲ್ಲಿ ಕಾಂಚಾಣದ ಕಾರುಬಾರು ಜೋರು; ವಿಡಿಯೋ ವೈರಲ್
ನಮ್ಮ ಪಕ್ಷ ಸ್ಪರ್ಧಿಸುವ 6 ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇದೆ. ಮೂರೂ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಇರುತ್ತದೆ. ಈ ಆರೂ ಕ್ಷೇತ್ರಗಳಲ್ಲಿ ಯಾರ ಬೆಂಬಲ ಪಡೆದು ಹೋರಾಟ ಮಾಡುತ್ತಿಲ್ಲ. ನಾವು ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇವೆ. ಕೆಲ ಕ್ಷೇತ್ರಗಳಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರವಹಿಸುತ್ತದೆ. ಚಿಕ್ಕಮಗಳೂರು, ಕಲಬುರಗಿ , ಬೀದರ್, ರಾಯಚೂರು, ಶಿವಮೊಗ್ಗ, ಚಿತ್ರದುರ್ಗ , ಬೆಂಗಳೂರು ನಗರ ಕ್ಷೇತ್ರಗಳಲ್ಲಿ ನಮ್ಮ ಬಲವೂ ಇದೆ. ಗೆಲ್ಲಿಸುವ ಅಥವಾ ಸೋಲಿಸುವ ಶಕ್ತಿಯೂ ನಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.