ಚಿಕ್ಕಮಗಳೂರು: ಸಿದ್ದರಾಮಯ್ಯ ಅವರೇ, ಪದೇ ಪದೇ ಜೆಡಿಎಸ್ ಬಗ್ಗೆ ಚರ್ಚೆ ಮಾಡಬೇಡಿ. ರಾಜ್ಯದ ಪರಿಸ್ಥಿತಿ ಈ ಮಟ್ಟಿಗೆ ಬರಲು ಬಿಜೆಪಿಯದ್ದು ಮಾತ್ರವಲ್ಲ, ನಿಮ್ಮದೂ ಪಾಲಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹರಿಹಾಯ್ದರು.
ನಗರದಲ್ಲಿ ಮಾತನಾಡಿದ ಅವರು, ಚುನಾವಣೆಗೆ ಹೋಗುವ ಮುನ್ನ ಯೋಜನೆ ಜಾರಿ ಮಾಡಿದಿರಿ, ಆದರೆ ದುಡ್ಡು ಇಟ್ಟಿರಲಿಲ್ಲ. ನಿಮ್ಮ ತಪ್ಪನ್ನು ಸರಿಪಡಿಸಲು ಆಗದಂತಹ ವಾತಾವರಣ ನಿರ್ಮಿಸಿದ್ದೀರ. ತಾಜ್ ವೆಸ್ಟ್ ಎಂಡ್ ಹೊಟೆಲ್ ನಲ್ಲಿ ಕಾಲ ಕಳೆಯುತ್ತಿದ್ದರು ಎಂದಿದ್ದೀರ. ಇಡೀ ದಿನ ಜನರ ಸಂಪರ್ಕದಲ್ಲಿ ಇರುತ್ತಿದ್ದೆ, ದಿನಕ್ಕೆ 10-15 ಸಭೆ ಮಾಡುತ್ತಿದ್ದೆ. ನೀವು ಸಿಎಂ ಆದಾಗ ಮಧ್ಯಾಹ್ನ 1 ಕ್ಕೆ ವಿಧಾನಸೌಧ ಖಾಲಿ ಮಾಡುತ್ತಿದ್ರಿ, ಎಲ್ಲಿ ಹೋಗುತ್ತಿದ್ರಿ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಮುಷ್ಕರ ವಾಪಾಸ್: ತಕ್ಷಣ ಕಚೇರಿಗೆ ಹಾಜರಾಗಲು ಸರ್ಕಾರಿ ನೌಕರರಿಗೆ ಸೂಚನೆ
ನನಗೆ ಒಂದು ಮನೆ ಕೊಡಲಿಲ್ಲ, ಜನ ತಿರಸ್ಕಾರ ಮಾಡಿದ್ರೂ ಮನೆ ಬಳಸಿಕೊಂಡ್ರಿ. ಕುಮಾರಕೃಪವನ್ನು ಹೇಗೆ ಬಳಸಿಕೊಂಡ್ರಿ ನನಗೆ ಗೊತ್ತಿದೆ, ನಾನು ಎಲ್ಲಿ ಇರಬೇಕಿತ್ತು. ಕಾಂಗ್ರೆಸ್ ಶಾಸಕರಿಗೆ 19 ಸಾವಿರ ಕೋಟಿ ಹಣ ನೀಡಿದ್ದೇನೆ. ಅದರ ದಾಖಲೆ ಬಿಡುಗಡೆಗೂ ನಾನು ಸಿದ್ಧ. ನಾನು ನಿಮ್ಮಿಂದ ಆಡಳಿತ ಕಲಿಯಬೇಕಾಗಿಲ್ಲ.ಜನ ಯಾರ ಆಡಳಿತ ಹೇಗೆ ಅಂತ ನೋಡಿದ್ದಾರೆ. ಅಧಿಕಾರ ಇರಲಿ, ಇಲ್ಲದಿರಲಿ ನನ್ನಷ್ಟು ಜನರನ್ನು ಯಾರೂ ನೋಡಿಲ್ಲ ಎಂದರು.
ಸರ್ಕಾರಿ ನೌಕರರಿಗೆ 17% ವೇತನ ಹೆಚ್ಚಳ ಕುರಿತು ಮಾತನಾಡಿದ ಅವರು, ನೌಕರರಿಗೆ ನಂಬಿಕೆ ಬಂದಿಲ್ಲ ದುಡ್ಡು ಎಲ್ಲಿದೆ, ನೋಡೋಣ ಏನು ಮಾಡುತ್ತಾರೆ. ಇದನ್ನು ಬಜೆಟ್ ದಿನ ಘೋಷಣೆ ಮಾಡಬೇಕಿತ್ತು. ಇಷ್ಟೆಲ್ಲಾ ಸಮಸ್ಯೆ ಎದುರಾಗುತ್ತಿರಲಿಲ್ಲ.