ಬೆಂಗಳೂರು: ಬಹುಕೋಟಿ ರೂಪಾಯಿಗಳ ಬಿಎಂಎಸ್ ಸಾರ್ವಜನಿಕ ಶಿಕ್ಷಣ ದತ್ತಿ ಟ್ರಸ್ಟ್ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದು ಖಚಿತ. ಹಗರಣದ ಕುರಿತ ಎಲ್ಲ ದಾಖಲೆಗಳನ್ನು ಪ್ರಧಾನಿ ಅವರ ಕಚೇರಿಗೆ ತಲುಪಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಅವರು ಮಾತನಾಡಿದರು.
ಪ್ರಧಾನಿ ಆವರು ಸಮಯ ಬಂದಾಗಲೆಲ್ಲ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಲೇ ಇದ್ದಾರೆ. 20% ಕಮೀಷನ್ ಬಗ್ಗೆ ಮೊದಲು ಮಾತನಾಡಿದ್ದೆ ಅವರು. ಈಗ ಅವರದೇ ಪಕ್ಷ ಅಧಿಕಾರದಲ್ಲಿ ಇರುವ ಕರ್ನಾಟಕದಲ್ಲಿ100% ತಾಂಡವವಾಡುತ್ತಿದೆ. ಈಗ ಅವರು ಏನು ಹೇಳುತ್ತಾರೆ ಎನ್ನುವುದನ್ನು ನಾನು ಕಾದು ನೋಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ನನ್ನ ಬಳಿ ಬಿಎಂಎಸ್ ಟ್ರಸ್ಟ್ ಅಕ್ರಮದ ಕುರಿತ ಎಲ್ಲ ದಾಖಲೆಗಳನ್ನು ಪ್ರಧಾನಿ ಅವರಿಗೆ ತಲುಪಿಸುತ್ತೇನೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ:ವಕ್ಫ್ ಬೋರ್ಡ್ ಅಕ್ರಮ: ಎಎಪಿ ಶಾಸಕ ಅಮಾನತುಲ್ಲಾ ಗೆ 14 ದಿನಗಳ ನ್ಯಾಯಾಂಗ ಬಂಧನ
ದಾಖಲೆಗಳ ಸಮೇತ ವಿಧಾನಸಭೆಯಲ್ಲಿ ದಾಖಲೆಗಳನ್ನು ಇಟ್ಟು ಮಾತನಾಡಿದರೂ ಬಿಜೆಪಿ ಸರಕಾರಕ್ಕೆ ತನಿಖೆ ಮಾಡಿಸುವ ದೈರ್ಯ ಇಲ್ಲ. ತಾಕತ್ತು, ದಮ್ಮು ಎಂದೆಲ್ಲ ಮಾತನಾಡುವ ಮುಖ್ಯಮಂತ್ರಿಗಳಿಗೆ ತನಿಖೆಗೆ ಆದೇಶ ನೀಡುವ ದೈರ್ಯ ಇಲ್ಲ ಎಂದು ಕುಮಾರಸ್ವಾಮಿ ಚಾಟಿ ಬೀಸಿದರು.
ಬಿಜೆಪಿ ಭಂಡತನ ಪ್ರದರ್ಶನ ಮಾಡುತ್ತಿದೆ. ದಾಖಲೆಗಳನ್ನು ಇಟ್ಟು ಹಗರಣದ ಬಗ್ಗೆ ಹೇಳಿದರೂ ಸರಕಾರ ವಿತಂಡ ವಾದ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.