Advertisement

ಅಧಿಕಾರಕ್ಕಾಗಿ ದೇವೇಗೌಡರೆದುರು ಕೈಕಟ್ಟಿ ನಿಂತ ಛದ್ಮವೇಷಧಾರಿ: ಸಿಎಂ ವಿರುದ್ಧ ಎಚ್ ಡಿಕೆ ಟೀಕೆ

10:54 AM Sep 30, 2023 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ವರಿಷ್ಠ ಎಚ್ ಡಿ ಕುಮಾರಸ್ವಾಮಿ ಟೀಕಾ ಪ್ರಹಾರ ಮುಂದುವರಿಸಿದ್ದು, “ಅವರ ಬೆನ್ನು ಅವರಿಗೆ ಕಾಣುವುದಿಲ್ಲ. ನಾಲಿಗೆಗೂ ಮೂಳೆ ಇರುವುದಿಲ್ಲ. ಸಿಎಂ ಸೀಟಿನಲ್ಲಿ ಕೂತರೂ ‘ಸಿದ್ದಸುಳ್ಳು’ಗಳಿಗೆ ಕೊರತೆಯೇನೂ ಇಲ್ಲ” ಎಂದು ಟೀಕಿಸಿದ್ದಾರೆ.

Advertisement

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ‘ಜಾತ್ಯತೀತ’ ಎನ್ನುವ ಟ್ಯಾಗ್ ಲೈನ್ ಇಟ್ಟುಕೊಂಡು ಜಾತಿ ಸಭೆಗಳನ್ನು ಮಾಡಿ ಕುಕ್ಕರ್, ಇಸ್ತ್ರೀ ಪೆಟ್ಟಿಗೆ ಹಂಚುವುದು ಜಾತ್ಯತೀತವೇ? ಅಹಿಂದ ಎಂದು ಹೇಳಿಕೊಂಡು ಧರ್ಮಕ್ಕೊಂದು ಸಮಾವೇಶ, ಜಾತಿಗೊಂದು ಸಭೆ ನಡೆಸುವುದು ಜಾತ್ಯತೀತವೇ? ಸ್ವಲ್ಪ ಹೇಳುವಿರಾ ಸಿದ್ದರಾಮಯ್ಯ ನವರೇ ಎಂದು ಪ್ರಶ್ನಿಸಿದ್ದಾರೆ.

ಕೋಮುವಾದಿ ಎಂದು ಬಿಜೆಪಿಯನ್ನು ಹೀಗಳೆಯುತ್ತಾ ಆ ಪದದಿಂದಲೇ ರಾಜಕೀಯ ಲಾಭ ಗಿಟ್ಟಿಸಿಕೊಳ್ಳುವ ಡೋಂಗಿ ಸಮಾಜವಾದಿ ನೀವು. ನಿಮ್ಮ ಅಡ್ಜಸ್ಟ್’ಮೆಂಟ್ ರಾಜಕಾರಣ ಜಗತ್ಪ್ರಸಿದ್ಧಿ. ಐ.ಎನ್.ಡಿ.ಎ.ಎ ಎಂಬ ಮೈತ್ರಿಕೂಟದಲ್ಲಿ ಅದೇ ಬಿಜೆಪಿಯ ಬಿ ಟೀಂಗಳನ್ನು ಇಟ್ಟುಕೊಂಡು, ಅವುಗಳ ಬಾಲಂಗೋಚಿ ಆಗಿರುವ ಪಕ್ಷವೂ ಪಕ್ಷ ಜಾತ್ಯತೀತವೇ? ಸ್ಟಾಲಿನ್, ಮಮತಾ ಬ್ಯಾನರ್ಜಿ, ಫಾರೂಕ್ ಅಬ್ದುಲ್ಲಾ, ನಿತೀಶ್ ಕುಮಾರ್, ಹೇಮಂತ್ ಸೊರೇನ್, ವೈಕೋ, ಮೆಹಬೂಬಾ ಮುಫ್ತಿ, ಅಖೈರಿಗೆ ಶಿವಸೇನೆಯ ಉದ್ಧವ್ ಠಾಕ್ರೆ.. ಇವರೆಲ್ಲರೂ ಬಿಜೆಪಿ ಪಡಸಾಲೆಯಲ್ಲಿ ಪೊಗದಸ್ತಾಗಿ ಅಧಿಕಾರದ ಭೋಜನ ಉಂಡವರಲ್ಲವೇ? ಅವರ ಪಕ್ಕ ಕುರ್ಚಿ ಹಾಕಿಕೊಂಡು ಕೂರಲು ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

2006ರಲ್ಲಿ ಬಿಜೆಪಿ ಜತೆ ಸರಕಾರ ರಚಿಸಿದ ಏಕೈಕ ಕಾರಣಕ್ಕೆ ಬಿಜೆಪಿ ಬಿ ಟೀಂ ಎಂದು ಜೆಡಿಎಸ್ ಗೆ ಮುದ್ರೆ ಹಾಕಿದಿರಿ. 2018ರಲ್ಲಿ ಅದೇ ಬಿ ಟೀಂ ಜತೆ ಸರಕಾರ ರಚಿಸಲು ದೇವೇಗೌಡರ ಮನೆಗೆ ಬಂದು ಸಾಲಾಗಿ ಕೈಕಟ್ಟಿ ನಿಂತುಕೊಂಡಿರಿ! ಮರೆತಿರಾ ಛದ್ಮವೇಷಧಾರಿ ಎಂದಿದ್ದಾರೆ.

ಇದನ್ನೂ ಓದಿ:Smile Pinki: ಆಸ್ಕರ್ ಪ್ರಶಸ್ತಿ ವಿಜೇತ ‘ಸ್ಮೈಲ್ ಪಿಂಕಿ’ ಕಲಾವಿದೆ ಮನೆ ಕೆಡವಲು ನೋಟಿಸ್

Advertisement

ಪಾಪ.. ನಿಮಗೆ ಕೋಮುವಾದ, ಜಾತ್ಯತೀತ ಸಿದ್ಧಾಂತದ ಕನಸು ಈಗ ಬಿದ್ದಿದೆ. ನಿಮ್ಮ ರಾಜಕೀಯ ಬದುಕಿಗಾಗಿ ಜಾತಿಜಾತಿಗಳನ್ನು ಒಡೆದು ಬೆಂಕಿ ಇಟ್ಟು ಆ ಕೆನ್ನಾಲಗೆಯಲ್ಲೇ ಚಳಿ ಕಾಯಿಸಿಕೊಳ್ಳುವುದಷ್ಟೇ ನಿಮಗೆ ಗೊತ್ತು. ಜಾತ್ಯತೀತ ಎನ್ನುವುದು ನಾಲಿಗೆ ಮೇಲಿನ ಮಾತಲ್ಲ, ಹೃದಯದ ಆಳದಲ್ಲಿರುವ ನಿಷ್ಠೆ. ಸ್ವಾರ್ಥ ರಾಜಕಾರಣವನ್ನೇ ಹಾಸಿಹೊದ್ದು, ಅಧಿಕಾರ ದಾಹವೇ ಹಾಸುಹೊಕ್ಕಾಗಿರುವ ನಿಮಗೆ ಜಾತ್ಯತೀತತೆ ಕೇವಲ ಭಾಷಣದ ಸರಕಷ್ಟೇ. ಜಾತ್ಯತೀತತೆ ಕುರಿತು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ಅವರು ಹಾಗೂ ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇವೆ, ಅದೂ ಜನರಿಗೆ? ನಮ್ಮ ಬದ್ಧತೆ, ಅಚಲತೆ, ಜಾತ್ಯತೀತತೆಯನ್ನು ಪ್ರಶ್ನಿಸುವ ಯೋಗ್ಯತೆ ನಿಮಗೆ ಖಂಡಿತಾ ಇಲ್ಲ. ಈ ಗುಣಗಳು ನಿಮಗೆ ಅನ್ವಯ ಆಗುವುದೂ ಇಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next