ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಜಾರಕಿಹೊಳಿ ಸಹೋದರರಿಂದ ತೊಂದರೆ ತಪ್ಪಿಸುವ ಕಸರತ್ತುಗಳ ನಡುವೆಯೇ ಸತೀಶ್ ಜಾರಕಿಹೊಳಿ ಜತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದಾರೆ.
ಬೆಳಗಾವಿ ಭೇಟಿ ಸಂದರ್ಭದಲ್ಲಿ ಮುಖಾಮುಖೀ ಚರ್ಚಿಸಿದ್ದ ಕುಮಾರಸ್ವಾಮಿಯವರು ನಂತರ ದೂರವಾಣಿ ಮೂಲಕವೂ ಸಮಾಲೋಚನೆ ನಡೆಸಿದರು ಎಂದು ಹೇಳಲಾಗಿದೆ.
ಈ ಸಂದರ್ಭದಲ್ಲಿ ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ. ನನಗೆ ಆ ಪಕ್ಷ ಒಗ್ಗುವುದೂ ಇಲ್ಲ. ರಮೇಶ್ ಜಾರಕಿಹೊಳಿ ಸಹ ಅಂತಹ ತೀರ್ಮಾನ ಕೈಗೊಳ್ಳುವುದಿಲ್ಲ. ಸಮ್ಮಿಶ್ರ ಸರ್ಕಾರಕ್ಕೆ ನಮ್ಮಿಂದಂತೂ ಯಾವುದೇ ತೊಂದರೆಯೂ ಇಲ್ಲ. ಆದರೆ, ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ ಯಾವುದೂ ಏಕಪಕ್ಷೀಯ ತೀರ್ಮಾನಗಳು ಆಗಬಾರದು ಸೋಮವಾರದ ನಂತರ ನಾನೇ ಖುದ್ದಾಗಿ ಆಗಮಿಸಿ ನಿಮ್ಮ ಬಳಿಯೂ ಚರ್ಚಿಸುವೆ ಎಂದು ಹೇಳಿದರು ಎನ್ನಲಾಗಿದೆ.
ಇದಕ್ಕೆ ಸ್ಪಂದಿಸಿದ ಕುಮಾರಸ್ವಾಮಿಯವರು ನನ್ನ ಕಡೆಯಿಂದ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಯಾಗದು. ಏನೇ ವಿಚಾರ ಇದ್ದರೂ ಖುದ್ದಾಗಿ ಮಾತನಾಡಿ ಬಗೆಹರಿಸಲಿದ್ದೇನೆ ಎಂದು ಭರವಸೆ ನೀಡಿದರು ಎಂದು ಹೇಳಲಾಗಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಬೆಂಗಳೂರಿಗೆ ಆಗಮಿಸಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿ ಹೋದ ಬೆನ್ನಲ್ಲೇ ಇಂತಹ ಬೆಳವಣಿಗೆ ನಡೆದಿರುವುದು ಕುತೂಹಲ ಮೂಡಿಸಿದೆ.