ಮೈಸೂರು: ಮೈಸೂರಿನಲ್ಲಿ 2014 ರಿಂದಲೇ ಅನಧಿಕೃತವಾಗಿ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ. ಈ ಮೈತ್ರಿ ಹೊಸದೇನಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು 2014 ರಿಂದಲೇ ಅನಧಿಕೃತವಾಗಿ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ, ಎರಡೂ ಪಕ್ಷದ ಕಾರ್ಯಕರ್ತರು ಬಹಳ ಸಮನ್ವತೆಯಿಂದ ಮೊದಲನಿಂದಲೂ ಇದ್ದಾರೆ ಈಗಲೂ ಇರುತ್ತಾರೆ ಹೀಗಾಗಿ ಕಾರ್ಯಕರ್ತರಲ್ಲಿ ಯಾವ ಗೊಂದಲಗಳು ಇಲ್ಲ ಎಂದು ಹೇಳಿದರು.
ಮಂಡ್ಯದಲ್ಲಿ ಎಚ್.ಡಿ ಕೆ ಸೋಲುತ್ತಾರೆ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು ಕಳೆದ ಭಾರಿ ನಮ್ಮ ಮಗನ ಸೋಲಿಗೆ ಈ ಮಹಾನುಭಾವರು ಎಷ್ಟು ಕಾರಣ ಎಂಬುದು ಎಲ್ಲರಿಗೂ ಗೊತ್ತಿದೆ. ಅದರ ಆಧಾರದ ಮೇಲೆ ಇವರು ಈಗ ಮಾತನಾಡುತ್ತಿದ್ದಾರೆ. ಎಲ್ಲದಕ್ಕೂ ಜನ ಉತ್ತರ ಕೊಡುತ್ತಾರೆ. ನಾನು ಸೋಲುತ್ತೇನೆ ಎಂದು ಹೇಳುವ ಸಿದ್ದರಾಮಯ್ಯ ಯಾವಾಗ ಜೋತಿಷಿಯಾದರು ಎಂದು ನನಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಅಲ್ಲದೆ ಸಿದ್ದರಾಮಯ್ಯನವರು ನನ್ನನ್ನು ವಲಸಿಗ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿ ನೀವು ಯಾರು? ಅಲ್ಲಿ ನೀವು ವಲಸಿಗರಲ್ಲವಾ. ಮೂಲ ಕಾಂಗ್ರೆಸನವರನ್ನ ಕಸದ ಬುಟ್ಟಿಗೆ ಹಾಕಿ ನೀವು ಅಲ್ಲಿ ಅಧಿಕಾರ ಮಾಡುತ್ತಿಲ್ವಾ? ನಾನು ಕನ್ನಡಿಗ, ಎಲ್ಲಿ ಬೇಕಾದರು ನಾನು ಸ್ಪರ್ಧೆ ಮಾಡಬಹುದು. ಈ ಭಾರಿ ಮಂಡ್ಯದಲ್ಲಿ ನಮ್ಮ ಹಳೇಯ ಸ್ನೇಹಿತರುಗಳ ಜೊತೆ ಸ್ಪರ್ಧೆ ಎದುರಿಸಬೇಕು, ನನ್ನ ಹಣೆಬರಹ ಹಾಗಿದೆ ಏನು ಮಾಡೋದು ಹಳೇ ಸ್ನೇಹಿತರುಗಳೇ ನಮಗೆ ವಿರುದ್ಧ ಆಗುತ್ತಾರೆ, ಆಗಲಿ ಬಿಡಿ ಎಂದು ಹೇಳಿದರು.
ಇನ್ನು ಮೇಕೆದಾಟು ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು ದೇವೇಗೌಡರನ್ನ ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್ ನವರಿಗೆ ಇಲ್ಲ ಎಂದು ಹೇಳಿದ್ದಾರೆ.
ಜೆಡಿಎಸ್ ಗೆ ಸುಮಲತಾ ಬೆಂಬಲ ವಿಚಾರವಾಗಿ ಮಾತನಾಡಿದ ಅವರು. ಸುಮಲತಾ ಏನು ನನ್ನ ಶಾಶ್ವತ ಶತ್ರುನಾ? ರಾಮಾಂಜನೇಯ ಯುದ್ಧವೇ ಈ ಮಣ್ಣಿನಲ್ಲಿ ನಡೆದು ಹೋಗಿಲ್ವಾ. ನಾವೆಲ್ಲಾ ಹುಲುಮಾನವರು ಅದರ ಮುಂದೆ ಯಾವ ಲೆಕ್ಕ ಹೇಳಿ. ರಾಜಕೀಯದಲ್ಲಿ ಹೋರಾಟ ಜಗಳ ಎಲ್ಲವೂ ಇದ್ದೇ ಇರುತ್ತದೆ ಅವನ್ನೆಲ್ಲಾ ಒಮ್ಮೊಮ್ಮೆ ದಾಟಿ ಹೋಗಬೇಕು. ನಮಗೇನು ಸುಮಲತಾ ಬಹಳ ದೂರದವರೇನು ಅಲ್ಲ ಅಂಬರೀಷ್ ಇದ್ದ ಕಾಲದಲ್ಲಿ ಪರಸ್ಪರ ಜೊತೆಯಲ್ಲಿದ್ದವರು ರಾಜಕಾರಣಕ್ಕಾಗಿ ಕೆಲವು ವ್ಯತ್ಯಾಸಗಳಾಗಿತ್ತು ಅಗತ್ಯವಿದ್ದರೆ ಅವರನ್ನ ಭೇಟಿ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: Raids: ಕೊಪ್ಪಳ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪಾ ಮನೆ ಮೇಲೆ ಲೋಕಾಯುಕ್ತ ದಾಳಿ