Advertisement
ಇತ್ತೀಚಿನ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗುವ ಕುರಿತು ನೀಡುತ್ತಿರುವ ಹೇಳಿಕೆಗಳಿಂದ ಉದ್ಭವಿಸುತ್ತಿರುವ ಗೊಂದಲ, ಕೆಲವು ಶಾಸಕರು ಸಿದ್ದರಾಮಯ್ಯ ಅವರೊಂದಿಗೆ ಗೌಪ್ಯ ಮಾತುಕತೆಗಳನ್ನು ನಡೆಸುತ್ತಿರುವುದು, ಕಾಂಗ್ರೆಸ್‌ನ ಕೆಲವು ಸ್ಥಳೀಯ ನಾಯಕರು ಮೈತ್ರಿಗೆ ಮುಜುಗರವಾಗುವಂತಹ ಹೇಳಿಕೆಗಳನ್ನು ನೀಡುತ್ತಿರುವುದು ಮುಂತಾದ ಅಂಶಗಳನ್ನು ಮುಖ್ಯಮಂತ್ರಿಗಳು ರಾಹುಲ್ ಗಾಂಧಿ ಅವರ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ಹೇಳಿವೆ.
Related Articles
Advertisement
ಈ ಮಧ್ಯೆ, ಸರ್ಕಾರಕ್ಕೆ ಸಹಕಾರ ಕೊಟ್ಟಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಲು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದೆ. ಈ ವೇಳೆ ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ-ಮಂಡಳಿಗಳ ನೇಮಕ ಕುರಿತು ಶೀಘ್ರ ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಿದ್ದು ಬಿಟ್ಟರೆ ಬೇರೆ ಯಾವುದೇ ವಿಚಾರ ಚರ್ಚಿಸಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ನಾಯಕರು ಮೂಡಿಸುತ್ತಿರುವ ಗೊಂದಲಗಳ ಬಗ್ಗೆ ಅವರು ರಾಹುಲ್ ಗಾಂಧಿ ಗಮನಕ್ಕೆ ತಂದಿದ್ದು ನಿಜ ಎಂದು ಮೂಲಗಳು ತಿಳಿಸಿವೆ.
ಸಮ್ಮಿಶ್ರ ಸರ್ಕಾರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರ ಬಳಿ ಚರ್ಚೆ ಮಾಡುವಂತಹ ಗಂಭೀರ ವಿಚಾರಗಳೇನೂ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದರೂ, ಕಾಂಗ್ರೆಸ್ ನಾಯಕರನ್ನು ದೂರವಿಟ್ಟು ಪ್ರತ್ಯೇಕವಾಗಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿರುವುದರಿಂದ ಈ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.
ಸರ್ಕಾರ 100 ದಿನ ಪೂರೈಸಿದೆ. ಅಧಿಕಾರ ನಡೆಸುವಲ್ಲಿ ಕಾಂಗ್ರೆಸ್ ಅಧ್ಯಕ್ಷರು ಕೊಟ್ಟಿರುವ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಲು ಭೇಟಿಯಾಗಿದ್ದೇನೆ. ಇದೊಂದು ಸೌಹಾರ್ದಯುತ ಭೇಟಿ. ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ-ಮಂಡಳಿಗಳ ನೇಮಕ ಕುರಿತು ಆದಷ್ಟು ಬೇಗ ತೀರ್ಮಾನ ಕೈಗೊಳ್ಳಿ ಎಂದು ಮನವಿ ಮಾಡಿದ್ದೇನೆ. ಉಳಿದಂತೆ ಬೇರೆ ಯಾವುದೇ ವಿಚಾರ ಚರ್ಚಿಸಿಲ್ಲ ಮತ್ತು ಚರ್ಚಿಸುವ ವಿಚಾರವೂ ಸಮ್ಮಿಶ್ರ ಸರ್ಕಾರದಲ್ಲಿ ಇಲ್ಲ.– ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ