Advertisement

ಸಚಿವೆ ನಿರ್ಮಲಾ ಗರಂ ವಿವಾದಕ್ಕೆ ಸಿಎಂ ತೇಪೆ

06:00 AM Aug 27, 2018 | Team Udayavani |

ಬೆಂಗಳೂರು: ಪ್ರವಾಹ ಪೀಡಿತ ಕೊಡಗು ಜಿಲ್ಲೆಗೆ ರಕ್ಷಣಾ ಕಾರ್ಯ ಪರಿಶೀಲನೆಗೆಂದು ಆಗಮಿಸಿದ ಸಂದರ್ಭ ಶಿಷ್ಟಾಚಾರ ಪಾಲನೆಯ ವಿಚಾರದಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಆದ ಅನನುಕೂಲದ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.

Advertisement

ಈ ಬಗ್ಗೆ ಟ್ವೀಟ್‌ ಮಾಡಿರುವ ಸಿಎಂ ಕುಮಾರಸ್ವಾಮಿ, ಶಿಷ್ಟಾಚಾರ ಪಾಲನೆಗೆ ಅಗತ್ಯ ಕ್ರಮ ವಹಿಸಿದ್ದರೂ ಅವರಿಗೆ ಕೆಲವು ಅ ನನುಕೂಲ ಆಗಿರುವುದು ದುರದೃಷ್ಟಕರ. ಇದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ಈ ವಿಷಯದ ಕುರಿತಾಗಿ ನಾನು ದೂರವಾಣಿ ಮೂಲಕ ಅವರೊಂದಿಗೆ ಮಾತನಾಡಿದ್ದೇನೆ ಎಂದಿದ್ದಾರೆ.

ನಮ್ಮ ಸರ್ಕಾರವು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ವಿಪತ್ತು ನಿರ್ವಹಣಾ ಸಂಸ್ಥೆಗಳು ಹಾಗೂ ಸ್ವಯಂ ಸೇವಕರ ನೆರವಿನೊಂದಿಗೆ ದಿನದ 24 ಗಂಟೆಯೂ ಕೊಡಗಿನಲ್ಲಿ ಪ್ರವಾಹ, ಭೂಕುಸಿತದಲ್ಲಿ ಸಿಲುಕಿಕೊಂಡ ನಾಗರಿಕರ ರಕ್ಷಣೆಗೆ ಹೆಗಲುಕೊಟ್ಟಿವೆ. ಪರಿಹಾರ ಹಾಗೂ ಪುನರ್ವಸತಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ. ಕೇಂದ್ರ ಸರ್ಕಾರವೂ ನಮ್ಮ ಬೆಂಬಲಕ್ಕೆ ನಿಂತಿದೆ ಎಂದು ಹೇಳಿದರು.

ಪ್ರವಾಸೋದ್ಯಮ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ ಅವರು ಅನಾಹುತ ಸಂಭವಿಸಿದ ಮೊದಲ ದಿನದಿಂದಲೇ ಕೊಡಗು ಜಿಲ್ಲೆಯಲ್ಲಿಯೇ ಮೊಕ್ಕಾಂ ಹೂಡಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಉಸ್ತುವಾರಿ ವಹಿಸಿ ನಿರಂತರವಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಂತೆಯೇ ರಕ್ಷಣಾ ಸಚಿವರು ನಮ್ಮ ಮನವಿಗೆ ಸ್ಪಂದಿಸಿ ರಕ್ಷಣಾ ಕಾರ್ಯಾಚರಣೆಗೆ ಎಲ್ಲ ರೀತಿಯಲ್ಲೂ ಬೆಂಬಲ ನೀಡಿದ್ದಾರೆ. ಅಲ್ಲದೆ, ಕೊಡಗಿನ ಜನರ ಯಾತನೆಯ ವಸ್ತುಸ್ಥಿತಿ ಅರಿಯಲು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದರು.

ಪುನರ್ವಸತಿಗೆ ಆದ್ಯತೆ
ನಾವೆಲ್ಲರೂ ಈಗ ಭಿನ್ನಾಭಿಪ್ರಾಯ ಮರೆತು ಅತಿವೃಷ್ಟಿಯಿಂದ ತೊಂದರೆಗೊಳಗಾಗಿರುವ ಕೊಡಗಿನ ಜನರ ಪುನರ್ವಸತಿಗೆ ಆದ್ಯತೆ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ. ನಾವು ಈ ಘಟನೆಗೆ ಯಾವುದೇ ಬಣ್ಣ ಬಳಿದು ನಮ್ಮ ಗುರಿಯ ಹಾದಿಯಿಂದ ವಿಚಲಿತರಾಗುವುದು ಬೇಡ. ಕೇಂದ್ರ ಸರ್ಕಾರ ಅದರಲ್ಲೂ ವಿಶೇಷವಾಗಿ ರಕ್ಷಣಾ ಸಚಿವರ ಬೆಂಬಲ ಹೀಗೆಯೇ ಮುಂದುವರಿಯುವುದು ಎನ್ನುವುದು ನನ್ನ ನಂಬಿಕೆ ಎಂದು ಮುಖ್ಯಮಂತ್ರಿಗಳು ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next