Advertisement

ಮಂಡ್ಯ ಜಿಲ್ಲೆಯ ಜೆಡಿಎಸ್‌ ನೆಲೆ ಅಲುಗಾಡಿಸಲು ಶಾ ಕೈಯಲ್ಲಿ ಸಾಧ್ಯವಿಲ್ಲ: ಹೆಚ್ ಡಿಕೆ

09:36 PM Mar 05, 2023 | Team Udayavani |

ಬೆಂಗಳೂರು: ಮಂಡ್ಯ ಜಿಲ್ಲೆ ಜೆಡಿಎಸ್‌ ಪಕ್ಷದ ನೆಲೆಯನ್ನು ಅಲುಗಾಡಿಸುವುದು ಯಾರಿದಂಲೂ ಸಾಧ್ಯ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

Advertisement

ಬೆಂಗಳೂರಿನಲ್ಲಿ ಭಾನುವಾರ ನಾಗಮಂಗಲ ಕ್ಷೇತ್ರದ ಶಾಸಕ ಸುರೇಶಗೌಡರು ಹಮ್ಮಿಕೊಂಡಿದ್ದ ನಾಗಮಂಗಲ ಕ್ಷೇತ್ರದ ನಿವಾಸಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಮಂಡ್ಯಕೆ ಬಂದು ದೇವೆಗೌಡರ ಕೋಟೆಗೆ ಡೈನಾಮೆಟ್ ಇಟ್ಟು ಹೊಡಿತಾರಂತೆ. ಯಾರೇ ಬಂದರೂ ದೇವೆಗೌಡರ ಕೋಟೆ ಅಲುಗಾಡಿಸಲು ಆಗುವುದಿಲ್ಲ, ಈ ಅಮಿತ್ ಶಾ ಏನು ಗೊತ್ತು ಮಂಡ್ಯದ ಬಗ್ಗೆ. ಸಚಿವ ಅಶ್ವತ್ಥನಾರಾಯಣರಿಗೇನು ಗೊತ್ತು ಈ ಜಿಲ್ಲೆಯ ಬಗ್ಗೆ ಎಂದು ಅವರು ಪ್ರಶ್ನಿಸಿದರು.

ಕಾವೇರಿ ನೀರಿನ ವಿಚಾರವಾಗಿ ರಾಜ್ಯಕ್ಕೆ ಅನ್ಯಾಯ ಆಗುವ ಸಂದರ್ಭ ಬಂದಾಗ ಸಂಸತ್ತಿನಲ್ಲಿ ಹೋರಾಟ ಮಾಡಿದ ಏಕೈಕ ವ್ಯಕ್ತಿ ದೇವೆಗೌಡರು. ಆ ಜಿಲ್ಲೆಯಲ್ಲಿ ಬಿಜೆಪಿಯ ಪಾಪದ ಹಣ ತಂದು ಕೆ.ಆರ್ ಪೇಟೆ ಗೆದ್ದ ಹಾಗಲ್ಲ ಈ ಬಾರಿಯ ಚುನಾವಣೆ. ಉಪ ಚುನಾವಣೆಯೇ ಬೇರೆ, ಸಾರ್ವತ್ರಿಕ ಚುನಾವಣೆಯೇ ಬೇರೆ. ನೀವು ಬೆಳೆಸಿದ ಮನೆಮಗ ಎಂಬ ಅಭಿಮಾನ ನನ್ನ ಮೇಲೆ ಇಟ್ಟುಕೊಂಡಿದ್ದರೆ ನನ್ನನ್ನು ಕೈ ಬಿಡಬೇಡಿ. ನಿಮ್ಮ ಮನೆ ಮಕ್ಕಳಿಗೆ ವಿಷ ಹಾಕುವ ಹುನ್ನಾರಕ್ಕೆ ಬೆಂಬಲ ನೀಡಬೇಡಿ ಎಂದು ಮಂಡ್ಯ ಜನರನ್ನು ಮಾಜಿ ಮುಖ್ಯಮಂತ್ರಿಗಳು ಮನವಿ ಮಾಡಿಕೊಂಡರು

ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ನಿಲ್ಲಬೇಡ ಎಂದು ನಿಖಿಲ್ ಕುಮಾರಸ್ವಾಮಿಗೆ ಹೇಳಿದೆ. ಆದರೆ ಅಲ್ಲಿನ ಜನ ಸಾಕಷ್ಟು ಒತ್ತಡ ಹಾಕಿದ್ದರಿಂದ ಅವರು ಸ್ಪರ್ಧೆ ಮಾಡಬೇಕಾಯಿತು. ನಿಖಿಲ್ ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್‌, ಬಿಜೆಪಿ, ರೈತಸಂಘ ಎಲ್ಲರೂ ಸೇರಿ ಸ್ವಾಭಿಮಾನದ ಹೆಸರಿನಲ್ಲಿ ಕುತಂತ್ರದಿಂದ ಸೋಲಿಸಿದರು. ಈಗ ಆ ಸ್ವಾಭಿಮಾನ ನರೇಂದ್ರ ಮೋದಿ ಅವರ ಕಾಲಡಿ ಹೋಗಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು

Advertisement

ನನ್ನ ಹೃದಯಕ್ಕೆ ಎರಡು ಬಾರಿ ಶಸ್ತ್ರಚಿಕಿತ್ಸೆ ಆಗಿದೆ. ನಾನು ಪಲಾಯನವಾದಿಯಲ್ಲ, ನಾನು ಪಲಾಯನವಾದಿ ಕುಟುಂಬದಿಂದ ಬಂದವನಲ್ಲ. ಹೋರಾಟದ ಕುಟುಂಬದಿಂದ ಬಂದವನು. ಈ ಹೋರಾಟದ ಮೂಲಕ ಏಕಾಂಗಿಯಾಗಿ ಮಂಡ್ಯ ಜನತೆಗೆ ಸಂದೇಶ ಕೊಡಲು ಬಯಸುತ್ತೇನೆ. ಒಂದು ಕಡೆ ನಾನು ಒಬ್ಬ, ಆದರೆ ಕಾಂಗ್ರೆಸ್‌- ಬಿಜೆಪಿಯಲ್ಲಿ ಅಕ್ಷೋಣಿ ಸೈನ್ಯಗಳಿವೆ. ನಾನು ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ನೀವು ಬೆಳೆಸಿದ ಕುಟುಂಬದ ಮಕ್ಕಳ ಹೋರಾಟ 40, 50 ಸ್ಥಾನ ಗೆಲ್ಲಲು ಅಲ್ಲ. ಪೂರ್ಣ ಬಹುಮತಕ್ಕಾಗಿ. ಜೆಡಿಎಸ್‌ ಪಕ್ಷವನ್ನು ಮುಗಿಸುತ್ತೇವೆ ಎಂದು ಹೊರಟವರಿಗೆ ಉತ್ತರ ನೀಡಲು 123 ಸ್ಥಾನ ಗೆಲ್ಲಲು ಹೊರಟಿದ್ದೇನೆ. ಕಾಂಗ್ರೆಸ್‌ ಬಿಜೆಪಿ ಇವೆರಡೂ ಬೇಡ, ಪ್ರಾದೇಶಿಕ ಪಕ್ಷ ಜೆಡಿಎಸ್‌ ಬೇಕು ಎಂದು ಜನರು ತೀರ್ಮಾನ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಅವರು ವಿಶ್ವಾಸದಿಂದ ನುಡಿದರು.

ನಾಳೆ (ಸೋಮವಾರ) ಬಾದಾಮಿ ಕ್ಷೇತ್ರಕ್ಕೆ ಹೋಗುತ್ತಿದ್ದೇನೆ. 50 ಸಾವಿರ ಜನರ ಸಮಾವೇಶ ನಾಳೆ ನಡೆಯಲಿದೆ. ಬಳ್ಳಾರಿಗೆ ಇನ್ನೂ ಹೋಗಿಲ್ಲ, ಆದರೆ, ಆ ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆ ಮಾಡಿದ ವೇಳೆ ನಿಮ್ಮ ಅಭ್ಯರ್ಥಿಯನ್ನು ನಿಲ್ಲಿಸಿ, ನಿಮ್ಮ ಋಣ ನಮ್ಮ ಮೇಲಿದೆ, ನಿಮ್ಮ ಪಕ್ಷಕ್ಕೆ ಮತ ಹಾಕುತ್ತೇವೆ ಎಂದು ಜನರು ಹೇಳುತ್ತಾರೆ. ಕಂಪ್ಲಿ ಕ್ಷೇತ್ರದಲ್ಲಿ ಪ್ರಯಾಣ ಮಾಡುವ ಜನರು ಹೇಳಿದ ಈ ಮಾತು ನನ್ನ ಮನಸ್ಸಲ್ಲಿ ಉಳಿದಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ನಾಗಮಂಗಲದ ನಿವಾಸಿಗಳು ಯಶವಂತಪುರ, ಬಸವನಗುಡಿ, ದಾಸರಹಳ್ಳಿ ಇನ್ನಿತರೆ ಭಾಗಗಳಲ್ಲಿ ಇದ್ದೀರಿ. ನಾವು ಅಧಿಕಾರದಲ್ಲಿದ್ದಾಗ ನಿಮ್ಮ ಹಣ ಕೊಳ್ಳೆ ಹೊಡೆದಿಲ್ಲ. ಈ ರಾಜ್ಯದ ಬಡಜನತೆ ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣ ಮಾಡುವ ಗುರಿಯೊಂದಿಗೆ ನಾವು ಹೊರಟಿದ್ದೇವೆ. ದೇವೆಗೌಡರು ಬಹಳ ದಿನ ಅಧಿಕಾರ ನಡೆಸಲಿಲ್ಲ. ಅವರಿಗೆ ನಿನ್ನೆ ಒಂದು ಮಾತು ಕೊಟ್ಟಿದ್ದೇನೆ. ನಾಡಿನ ಉದ್ಧಾರಕ್ಕಾಗಿ ನೀವೆನು ಕನಸು ಕಂಡಿದ್ದಿರೋ ಅದನ್ನು ನನಸು ಮಾಡಲು ನಾನು ಹೊರಟಿದ್ದೇನೆ. ಆ ಶಿವ ಅಷ್ಟು ಬೇಗ ನಿಮ್ಮನ್ನು ಕರೆಸಿಕೊಳ್ಳಬಾರದು, ನೀವು ಇನ್ನೂ ದೀರ್ಘಕಾಲ ಬದುಕಿರಬೇಕು ಎಂದು ಹೇಲಿದ್ದೇನೆ ಎಂದು ಕುಮಾರಸ್ವಾಮಿ ಅವರು ಭಾವುಕರಾಗಿ ಹೇಳಿದರು.

ಸಚಿವ ಅಶೋಕ್‌ʼಗೆ ನೇರ ಟಾಂಗ್‌:

ಬಿಜೆಪಿಯ ಸಾಬೂನು ಕಾರ್ಖಾನೆ ಅಧ್ಯಕ್ಷರ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ಆದರೆ ಸಚಿವ ಅಶೋಕ್ ಅವರು ಗಾಜಿನ ಮನೆಯಲ್ಲಿ ಕೂತು ನಿನ್ನೆ ರಾಮನಗರಕ್ಕೆ ಬಂದು ನನ್ನನ್ನು ಕೆಣಕಿದ್ದೀರಿ. ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಮೂರನ್ನೂ ಗೆಲ್ಲಿಸುತ್ತೇವೆ ಎಂದು ಹೇಳಿದ್ದೀರಿ. ನಿಮ್ಮ ದುಡ್ಡಿಗೆ ಮರುಳಾವಗುವ ಜನ ರಾಮನಗರದವರಲ್ಲ. ಸ್ವಲ್ಪ ತಗ್ಗಿಬಗ್ಗಿ ನಡೆಯಿರಿ, ಬಿಜೆಪಿಯನ್ನು ಈ ಬಾರಿ ಜನ ಮನೆಗೆ ಕಳುಹಿಸುತ್ತಾರೆ. ನೀವು ಕೂಡ ಮನೆಗೆ ಹೋಗುತ್ತೀರಿ. ಅಶೋಕ್ ಅವರೇ ನೀವು ನನ್ನಿಂದ ನೀವು ಉಳಿದಿರಿ, ಅದು ನೆನಪಿರಲಿ ಎಂದು ಟಾಂಗ್‌ ಕೊಟ್ಟ ಮಾಜಿ ಮುಖ್ಯಮಂತ್ರಿಗಳು.

ಸಚಿವರೊಬ್ಬರಿಗೆ ಹಣ ಹೋಗುವುದಿತ್ತು:

ನರೇಂದ್ರ ಮೋದಿ ಅವರಿಗೆ ಇನ್ನು 25 ವರ್ಷ ಅಧಿಕಾರ ಬೇಕಂತೆ. ಅಮಿತ್ ಶಾ ಬಂದು ದೇವೆಗೌಡರ ಕುಟುಂಬವನ್ನು ಎಟಿಎಂ ಅಂದರು. ಅವರಿಗೆ ಸರಿಯಾಗಿ ಕೊಟ್ಟಿದ್ದೇನೆ. ಒಂದೇ ಒಂದು ಪ್ರಕರಣ ತೋರಿಸಿ. ಈಗ ಮಾಡಾಳು ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ಅದರಲ್ಲಿ ಸ್ವಲ್ಪ ಹಣ ಸಚಿವರೊಬ್ಬರಿಗೆ ಹೋಗಬೇಕಿತ್ತು. ಆ ಹಣ ಸೀಜ್‌ ಆಗಿದೆ ಎಂದು ಕುಮಾರಸ್ವಾಮಿ ಅವರು ಬಿಜೆಪಿಗೆ ಚುರುಕು ಮುಟ್ಟಿಸಿದರು.

ಬೆಂಗಳೂರಿನಲ್ಲಿ ಯಶವಂತಪುರ, ರಾಜರಾಜೇಶ್ವರಿ ನಗರ, ಮಹಾಲಕ್ಷ್ಮಿ ನಗರ, ದಾಸರಹಳ್ಳಿ, ರಾಜಾಜಿನಗರ, ಪದ್ಮನಾಭ ನಗರವನ್ನು ನಾವು ಗೆಲ್ಲಬಹುದು. ಇನ್ನೆರಡು ತಿಂಗಳು ನೀವು ಶ್ರಮವಹಿಸಿದ್ರೆ ಈ ಎಲ್ಲ ಕ್ಷೇತ್ರ ಗೆಲ್ಲಬಹುದು.

ನನಗೆ ಪೂರ್ಣ ಬಹುಮತದ ಸರಕಾರ ಕೊಡಿ. ಇಡೀ ರಾಜ್ಯವನ್ನು ಉತ್ತಮಗೊಳಿಸುತ್ತೇನೆ. ಈ ಜೀವ ಭೂಮಿಗೆ ಹೋಗುವ ಮೊದಲು ನಿಮ್ಮ ಭವಿಷ್ಯ ಸರಿಪಡಿಸುತ್ತೇನೆ. ಇದೇ ಮಾರ್ಚ್ 26ನೇ ತಾರಿಖು ದೇವೆಗೌಡರು ಪಂಚರತ್ನ ಸಮಾರೋಪ ಸಮಾವೇಶಕ್ಕೆ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡ್ತಿದ್ದೇನೆ. ಕುಂಬಗೋಡು, ರಾಮನಗರದಿಂದ ದೇವೆಗೌಡರನ್ನು ಮೆರವಣಿಗೆ ಮೂಲಕ ಕಳೆದುಕೊಂಡು ಹೋಗುತ್ತೇನೆ. ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ 10 ಲಕ್ಷ ಜನರನ್ನು ಸೇರಿಸಿ ಸಮಾವೇಶ ಮಾಡಲಾಗುವುದು ಎಂದರು ಮಾಜಿ ಮುಖ್ಯಮಂತ್ರಿಗಳು.

ಮೂರು ತಿಂಗಳು ಕಾಯಿರಿ. ಮಂಡ್ಯ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುತ್ತೇನೆ. ಕಬ್ಬಿಗೆ ಟನ್ʼಗೆ 6,000 ಬೆಲೆ ದೊರಕುವಂತ ಯೋಜನೆ ಸಿದ್ದ ಮಾಡಿದ್ದೇವೆ. ಸದ್ಯದಲ್ಲೆ ಅದನ್ನು ತಿಳಿಸುತ್ತೇವೆ. ಕೊಬರಿಗೂ ಉತ್ತಮ ಬೆಲೆ ಸಿಗಲಿದೆ ಎಂದ ಅವರು; ನಾನು ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದೆ. ಅಧಿಕಾರ ಅನುಭವಿಸಬೇಕೆಂದು ರಾಜಕಾರಣ ಮಾಡುತ್ತಿಲ್ಲ, ಜನರ ಸಮಸ್ಯೆಗೆ ಪರಿಹಾರ ನೀಡಲು ನಾನು ಹೋರಾಟ ಮಾಡುತ್ತಿದ್ದೇನೆ. 2006 ಮತ್ತು 2018ರಲ್ಲಿ ಎರಡು ಬಾರಿ ಸಿಎಂ ಆಗುವ ಸನ್ನಿವೇಶ ಬಂತು. ಎರಡು ಬಾರಿಯೂ ಉತ್ತಮವಾಗಿ ಕೆಲಸ ಮಾಡಿದ್ದೇನೆ ಎಂದರು.

ಆದರೆ ಕೆಲವರು ನನ್ನ ಉತ್ತಮ ಕೆಲಸವನ್ನು ಮರೆಮಾಚಿ ನನಗೆ ಕೆಟ್ಟ ಹೆಸರು ತರುವ ಸಂಚು ರೂಪಿಸಿದರು. ನಾನು ತಾಜ್ ವೆಸ್ಟ್ ಎಂಡ್ ಹೋಟೆಲ್ʼನಲ್ಲಿ ಇದ್ದೆ ಎಂದು ಅಪಪ್ರಚಾರ ನಡೆಸಿದರು. ಕಾವೇರಿ ನಿವಾಸವನ್ನು ಮಾಜಿ ಸಚಿವಾ ಜಾರ್ಜ್ ಹೆಸರಿನಲ್ಲಿ ಸಿದ್ದರಾಮಯ್ಯ ಇಟ್ಟುಕೊಂಡಿದ್ದರು. ಆಗ ನಾನು ಸ್ವಲ್ಪ ವಿಶ್ರಾಂತಿಗಾಗಿ, ಊಟಕ್ಕೆ ತಾಜ್ ವೆಸ್ಟ್ ಎಂಡ್ʼಗೆ ಹೊದರೆ ಅದನ್ನೇ ದೊಡ್ಡ ವಿಷಯ ಮಾಡಿದರು. ನನಗೆ ಕಾಂಗ್ರೆಸ್ಸಿನ ಯಾವ ಮಂತ್ರಿಯೂ ಸಹಕಾರ ನೀಡಲಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಶಾಸಕ ಸುರೇಶ್‌ ಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಅಪ್ಪಾಜಿ ಗೌಡ ಮುಂತಾದವರು ಹಾಜರಿದ್ದರು.

ಇದನ್ನೂ ಓದಿ: ಕಾರ್ಯಕ್ರಮದಲ್ಲಿ ಹಾಡುವಾಗ ಬಾಲಿವುಡ್‌ ನ ಖ್ಯಾತ ಗಾಯಕನ ತಲೆಗೆ ಬಡಿದ ಡ್ರೋಣ್:‌ ವಿಡಿಯೋ ವೈರಲ್

Advertisement

Udayavani is now on Telegram. Click here to join our channel and stay updated with the latest news.

Next