ವಿಧಾನಸಭೆ: ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿಎಚ್.ಡಿ.ಕುಮಾರಸ್ವಾಮಿಯವರು ಮಾತನಾಡುತ್ತಾ ಪದೇ ಪದೇ ಸಿದ್ದರಾಮಯ್ಯ ಅವರ ಭಾಷಣ ಪ್ರಸ್ತಾಪಿಸಿದ್ದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕೆಲಕಾಲ ಕೋಲಾಹಲದ ವಾತಾವರಣ ನಿರ್ಮಾಣವಾಗಿತ್ತು.
ಎಚ್.ಡಿ.ಕುಮಾರಸ್ವಾಮಿಯವರು ಪ್ರತಿಪಕ್ಷ ನಾಯಕರು ಎರಡು ದಿನ ಜೋರಾದ ಭಾಷಣ ಮಾಡಿದ್ದಾರೆ. ಎಲ್ಲವನ್ನೂ ನೋಡಿದ್ದೇನೆ. ಅವರ ಕಾಲದಲ್ಲಿ ಮಾಡಿದ್ದು ಹೇಳಿದ್ದಾರೆ ಎಂದಾಗ, ಕಾಂಗ್ರೆಸ್‌ನ ಯು.ಟಿ.ಖಾದರ್ ಎದ್ದು ನಿಂತು ನೀವು ಬಿಜೆಪಿ ಸರ್ಕಾರದ ಬಗ್ಗೆ ಮಾತನಾಡುತ್ತಿದ್ದೀರೋ ಅಥವಾ ಸಿದ್ದರಾಮಯ್ಯ ಅವರ ಬಗ್ಗೆ ಪ್ರಸ್ತಾಪಿಸುತ್ತಿದ್ದೀರೋ ಎಂದರು. ಕಾಂಗ್ರೆಸ್ ಶಾಸಕರು ಒಮ್ಮೆಲೆ ಎದ್ದು ನಮ್ಮ ನಾಯಕರ ವಿಚಾರ ಯಾಕೆ, ಬಜೆಟ್ ಮೇಲೆ ಮಾತನಾಡಿ ಎಂದು ಮುಗಿಬಿದ್ದರು.
ಜೆಡಿಎಸ್ ಸದಸ್ಯರು ಕಾಂಗ್ರೆಸ್ ಶಾಸಕರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿ ನಮ್ಮ ನಾಯಕರು ಮಾತನಾಡಲು ಬಿಡಿ ಎಂದರು. ಸಚಿವ ಮಾಧುಸ್ವಾಮಿ ಸಹ ಜೆಡಿಎಸ್ ಬೆಂಬಲಕ್ಕೆ ನಿಂತು ಸಿದ್ದರಾಮಯ್ಯ ಅವರು ನಮ್ಮ ಬಜೆಟ್ ಮೇಲೆ ಮಾತನಾಡಿದಕ್ಕಿಂತ ಅವರ ಬಜೆಟ್ ಮೇಲಿ ಮಾತನಾಡಿದ್ದೇ ಹೆಚ್ಚು. ನಾವು ಕೇಳಿದ್ದೇವೆ. ಕುಮಾರಸ್ವಾಮಿ ಮಾತನಾಡಲಿ ಬಿಡಿ ಎಂದರು.
ಅದಕ್ಕೆ ಕಾಂಗ್ರೆಸ್ ಪ್ರತಿಪಕ್ಷ ಉಪ ನಾಯಕ ಯು.ಟಿ.ಖಾದರ್, ನೀವು ಅವರನ್ನು, ಅವರು ನಿಮ್ಮನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಿರಿ. ಅದಕ್ಕೆ ಬಿ ಟೀಂ ಎಂದು ಹೇಳುತ್ತಾರೆ ಎಂದು ಟಾಂಗ್ ನೀಡಿದರು. ಇದರಿಂದ ಗರಂ ಆದ ಕುಮಾರಸ್ವಾಮಿ, ನಾನು ಏನು ಮಾತನಾಡಬೇಕು ಎಂದು ಕಾಂಗ್ರೆಸ್ ಅವರಿಂದ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು.
ಮತ್ತೊಂದು ಹಂತದಲ್ಲಿ ಹಾಲಿಗೆ ಪ್ರೋತ್ಸಾಹ ಧನ ವಿಷಯ ಮಾತನಾಡುವಾಗ ಸಿದ್ದರಾಮಯ್ಯ ನಾಲ್ಕು ರೂ. ಮಾಡಿದರು ಎಂದು ಕಾಂಗ್ರೆಸ್ ಶಾಸಕರು ಹೇಳಿದರು, ಅದಕ್ಕೆ ಕುಮಾರಸ್ವಾಮಿ ಎರಡು ರೂ. ಮೊದಲು ಘೋಷಿಸಿದ್ದು ಯಡಿಯೂರಪ್ಪ ಅಲ್ಲವೇ ಎಂದು ಹೇಳಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಮೇಕೆದಾಟು ಯೋಜನೆಗೆ ಗಡ್ಕರಿ ಬಳಿ ನಾನು ಎರಡು ಬಾರಿ ಹೊಗಿದ್ದೆ ಎಂದಾಗ, ಯು.ಟಿ.ಖಾದರ್, ಆಗ ಜಲಸಂಪನ್ಮೂಲ ಸಚಿವರಾಗಿದ್ದವರು ಡಿ.ಕೆ.ಶಿವಕುಮಾರ್ ಎಂದು ಹೇಳಿದರು. ಅದಕ್ಕೆ ಕುಮಾರಸ್ವಾಮಿ, ಯಾರು ಸಚಿವರಾಗಿದ್ದರು ಎಂಬುದು ನನಗೆ ಗೊತ್ತಿಲ್ಲವೇ, ನಾನು ಅವರನ್ನು ಕರೆದುಕೊಂಡು ಹೋಗಿರಲಿಲ್ಲ ಎಂದು ಹೇಳಿದರು.