ಎಚ್.ಡಿ.ಕೋಟೆ: ಬಡಜನರಿಗೆ ಕೈಗೆಟುಕುವ ದರದಲ್ಲಿ ಔಷಧಿಗಳು ಲಭ್ಯವಾಗಬೇಕು, ಆ ಮೂಲಕ ಆರೋಗ್ಯ ಸುಧಾರಣೆಯಾಗಬೇಕು ಎನ್ನುವ ಉದ್ದೇಶ ದಿಂದ ಕೇಂದ್ರ ಸರ್ಕಾರ ಜನೌಷಧ ಕೇಂದ್ರಗಳನ್ನು ಆರಂಭಿಸಿ ಶೇ.80 ರಿಯಾಯ್ತಿ ದರದಲ್ಲಿ ಔಷಧಿಗಳನ್ನು ಪೂರೈಸುತ್ತಿದೆ. ಆದರೆ, ಎಚ್.ಡಿ.ಕೋಟೆ ತಾಲೂಕು ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಜನೌಷಧ ಕೇಂದ್ರ ಬಾಗಿಲು ತೆರೆಯದೆ ದ್ವಿಚಕ್ರವಾಹನಗಳ ನಿಲುಗಡೆಯ ಕೇಂದ್ರ ಸ್ಥಾನವಾಗಿದೆ.
ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯನ್ನು ಜಿಲ್ಲಾ ಹಾಗೂ ತಾಲೂಕು ಕೇಂದ್ರ ಸ್ಥಾನಗಳಲ್ಲಿ ಆರಂಭಿಸ ಲಾಗಿದೆ. ಜನೌಷಧ ಕೇಂದ್ರಗಳು ಪ್ರತಿದಿನ ಸೋಮ ವಾರದಿಂದ ಭಾನುವಾರದ ತನಕ ಬೆಳಗಿನ 10ಗಂಟೆಯಿಂದ ಸಂಜೆ 4ಗಂಟೆ ತನಕ ಕಾರ್ಯ ನಿರ್ವಹಿಸಬೇಕೆಂಬ ನಿಯಮ ಇದೆ. ಆದರೆ ಎಚ್ .ಡಿ.ಕೋಟೆ ಸರ್ಕಾರಿ ಆಸ್ಪತ್ರೆ ಆವರಣದಲ್ಲಿನ ಜನೌಷಧ ಕೇಂದ್ರ ಹೆಸರಿಗಷ್ಟೇ ತಲೆ ಎತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.
ಬಾಗಿಲೇ ತೆರೆಯದ ಕೇಂದ್ರ: ನೆಪಮಾತ್ರಕ್ಕೆ ಜನೌಷಧಕೇಂದ್ರ ಆರಂಭಗೊಂಡಿದೆಯಾದರೂ ಭಾನುವಾರ ಮನಬಂದಾಗೆಲ್ಲಾ ಜನೌಷಧ ಕೇಂದ್ರ ಬಾಗಿಲು ತೆರೆ ಯುವುದೇ ಇಲ್ಲ. ಹೊರಗೆ ಖಾಸಗಿ ಔಷಧ ಮಳಿಗೆಗಳಲ್ಲಿ 100ರೂ. ಮೌಲ್ಯದ ಔಷ ಧಿ ಜನೌಷಧ ಕೇಂದ್ರದಲ್ಲಿ ಕೇವಲ 20-25ರೂ.ಗೆ ಲಭ್ಯವಾಗುತ್ತದೆ. ಬಂದ್ ಆಗಿತ್ತು: ಸುಮಾರು 3-4ತಿಂಗಳ ಹಿಂದೆ ಯೂ ಜನೌಷಧ ಕೇಂದ್ರ ತಿಂಗಳು ಗಟ್ಟಲೆ ಬಾಗಿಲು ಮುಚ್ಚಲಾಗಿತ್ತು. ಪ್ರಜ್ಞಾವಂತರು ಪಟ್ಟು ಹಿಡಿದಾಗ, ಕಾರ್ಯನಿರ್ವಹಿಸಿಕೊಂಡು ಬರುತ್ತಿತ್ತು. ಆದರೆ, ಕಳೆದ 10ದಿನಗಳ ಹಿಂದಿನಿಂದ ಬಾಗಿಲು ತೆರೆಯುತ್ತಿಲ್ಲ. ಇನ್ನು ಜನೌಷಧ ಕೇಂದ್ರದಲ್ಲಿ ಸುಮಾರು 1868ಬಗೆಯ ಔಷಧಿಗಳನ್ನು ಮಾರಾಟ ಮಾಡಬೇಕು ಎನ್ನುವ ನಿಯಮ ಇದೆ. ಆದರೆ, ಎಚ್. ಡಿ.ಕೋಟೆಯಲ್ಲಿ ಕೇವಲ 150ರಿಂದ 200 ಬಗೆಯ ಔಷಧಿಗಳಿಗಷ್ಟೇ ಸೀಮಿತವಾಗಿದೆ.
ಮಹಿಳಾ ಸಿಬ್ಬಂದಿ: ನಿಯಮಾನುಸಾರ ಇಬ್ಬರಿಗೂ ಅಧಿ ಕ ಸಿಬ್ಬಂದಿ ಜನೌಷಧ ಕೇಂದ್ರವನ್ನು ನಡೆಸಬೇಕೆಂಬ ನಿಯಮ ಇದೆಯಾದರೂ ಎಚ್. ಡಿ.ಕೋಟೆಯಲ್ಲಿ ಒಬ್ಬರೇ ಮಹಿಳೆ ಕಾರ್ಯ ನಿರ್ವಹಿಸುತ್ತಿದ್ದು ಆಗಾಗ ಕಾರಣಗಳನ್ನು ಹೇಳಿಕೊಂಡು ಅಂಗಡಿ ಬಂದ್ ಮಾಡಲಾಗುತ್ತಿದೆ.
ಪರದಾಟ: ಪ್ರತಿದಿನ ಬಿಪಿ, ಶುಗರ್, ಅಸ್ತಮಾ ಸೇರಿ ಇನ್ನಿತರ ಕಾಯಿಲೆಗಳಿಗಾಗಿ ಕಡಿಮೆ ದರದಲ್ಲಿ ಔಷ ಧಿಗಳನ್ನು ಪಡೆದುಕೊಳ್ಳಲು ತಾಲೂಕಿನ ಮೂಲೆ ಮೂಲೆಗಳಿಂದ ರೋಗಿಗಳು ತಾಲೂಕಿನಲ್ಲಿರುವ ಏಕೈಕ ಜನೌಷಧ ಕೇಂದ್ರಕ್ಕೆ ಆಗಮಿಸುತ್ತಾರೆ. ಏಕಾಏಕಿ ಬಾಗಿಲು ಮುಚ್ಚಿರುವ ಜನೌಷಧ ಕೇಂದ್ರ ನೋಡಿಕೊಂಡು ಬಂದ ದಾರಿಗೆ ಸುಂಕ ಇಲ್ಲದಂತೆ ತೆರಳುತ್ತಿದ್ದಾರೆ.
ಇನ್ನು ಬೇಸತ್ತ ಅದೆಷ್ಟೋ ಮಂದಿ 60ಕಿ.ಮೀ. ಅಂತರದ ಹುಣಸೂರು ತಾಲೂಕಿನ ಜನೌಷಧ ಕೇಂದ್ರದಲ್ಲಿ ಔಷಧಿ ಖರೀದಿಸುತ್ತಾರೆ.
ಎಚ್.ಡಿ.ಕೋಟೆ ತಾಲೂಕಿನಲ್ಲಿ ನೆಪಮಾತ್ರಕ್ಕಷ್ಟೇ ಜನೌಷಧ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಮುಂದೆ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇದ್ದರೆ ಔಷಧ ಕೇಂದ್ರದ ಟೆಂಡರ್‌ದಾರರ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ.
– ಸದಾಶಿವ, ತಾಲೂಕು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಅಧ್ಯಕ್ಷರು
ಜನೌಷಧ ಕೇಂದ್ರ ನಮ್ಮ ನಿಯಂತ್ರಣಕ್ಕೆ ಒಳಪಡುವುದಿಲ್ಲ. ಆದರೆ, ರೋಗಿಗಳಿಗೆ ತೊಂದರೆ ಕೊಡುವುದು ಸರಿಯಲ್ಲ. ಕೇಂದ್ರದ ಮಹಿಳಾ ಸಿಬ್ಬಂದಿ ಅನಾರೋಗದಿಂದ ಬಳಲುತ್ತಿದ್ದು ಬಾಗಿಲು ಮುಚ್ಚಲಾಗಿದೆ. ಅದೇನೆ ಆಗಲಿ ರೋಗಿಗಳಿಗೆ ತೊಂದರೆ ನೀಡುವುದು ತರವಲ್ಲ.
-ಡಾ.ಸೋಮಣ್ಣ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ
– ಎಚ್.ಬಿ.ಬಸವರಾಜು