ಬೆಂಗಳೂರು: ರಾಜ್ಯ ಸರಕಾರ ಮಂಡ್ಯ ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ನಡೆಸುತ್ತಿದೆ. ಸಚಿವ ನಾರಾಯಣ ಗೌಡ ಜೆಡಿಎಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದ ಆರೋಪಿಸಿ ನಡೆಸಲು ಉದ್ದೇಶಿಸಿದ್ದ ಧರಣಿಯನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹಿಂಪಡೆದಿದ್ದಾರೆ.
ಟ್ವಿಟ್ಟರ್ ನಲ್ಲಿ ಈ ಮಾಹಿತಿ ನೀಡಿರುವ ಎಚ್ ಡಿ ದೇವೇಗೌಡರು, ಸರ್ಕಾರ ತಮ್ಮ ಬಹುಪಾಲು ಬೇಡಿಕೆಗಳಿಗೆ ಒಪ್ಪಿರುವುದರಿಂದ ಜೂನ್ 29ರಂದು ನಡೆಸಲಿಚ್ಛಿಸಿದ್ದ ಧರಣಿಯನ್ನು ವಾಪಾಸ್ ಪಡೆದಿರುವುದಾಗಿ ಹೇಳಿದ್ದಾರೆ.
ಮಂಡ್ಯದ ಕೆ ಆರ್ ಪೇಟೆ ಕ್ಷೇತ್ರದ ಕ್ರಷರ್ ಮಾಲೀಕ ಎಚ್ ಟಿ ಮಂಜು ಅವರಿಗೆ ಕ್ರಷರ್ ನಿಲ್ಲಿಸುವಂತೆ ಸಚಿವ ನಾರಾಯಣ ಗೌಡ ಕಿರುಕುಳ ನೀಡುತ್ತಿದ್ದಾರೆ. ಸಕ್ರಮವಾಗಿರುವ ಅವರ ಕ್ರಷರ್ಗೆ ಅನುಮತಿ ಕೊಡಿಸಬೇಕು, ಜಿಲ್ಲೆಯಲ್ಲಿ ರಾಜಕೀಯ ದ್ವೇಷ ಸಾಧಿಸುತ್ತಿರುವ ಸಚಿವ ನಾರಾಯಣಗೌಡ ಅವರಿಗೆ ತಿಳಿ ಹೇಳುವಂತೆ ದೇವೆಗೌಡರು ಪತ್ರ ಬರೆದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದರು. ಇಲ್ಲದಿದ್ದರೆ ಜೂ.29ರಂದು ಸಿಎಂ ಯಡಿಯೂರಪ್ಪನವರ ಮನೆ ಮುಂದೆ ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಯಿಸಿದ್ದ ಸಚಿವ ಕೆ ಆರ್ ಪೇಟೆ ಶಾಸಕ ನಾರಾಯಣ ಗೌಡ, ದೇವೇಗೌಡರಿಂದಲೇ ನಾನು ರಾಜಕೀಯಕ್ಕೆ ಬಂದವನು. ಅವರು ನನಗೆ ತಂದೆಗೆ ಸಮಾನ. ಕ್ರಷರ್ ವಿಚಾರಲ್ಲಿ ನನ್ನ ಮೇಲೆ ಮಾಡಲಾಗಿರುವ ಸುಳ್ಳು. ಅವರಿಗೆ ತಪ್ಪು ಮಾಹಿತಿ ನೀಡಲಾಗಿದೆ. ಕ್ರಷರ್ ಮಾಲೀಕ ಮಂಜು ರಾಯಲ್ಟಿ ಕಟ್ಟದೆ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿದ್ದಾರೆ ಎಂದು ಹೇಳಿದ್ದರು.