ಬೆಂಗಳೂರು: ಟಿ. ನರಸೀಪುರದಲ್ಲಿ ಮಗನಿಗೆ ಅವಕಾಶ ಮಾಡಿಕೊಡಲು ಬೆಂಗಳೂರಿನ ಸಿ.ವಿ. ರಾಮನ್ ನಗರ ಕ್ಷೇತ್ರದಲ್ಲಿ ಸ್ಪರ್ಧಿಸಲು ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಶುಕ್ರವಾರ ಸಿ.ವಿ. ರಾಮನ್ ನಗರದ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದರು.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಮಹದೇವಪ್ಪ ಬೆಂಗಳೂರಿನಲ್ಲಿ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಮಹದೇವಪ್ಪ ಜನವರಿ 2 ರಂದು ಅಧಿಕೃತವಾಗಿ ಸಿ.ವಿ. ರಾಮನ್ ನಗರದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ತಾವೇ ಅಭ್ಯರ್ಥಿ ಎನ್ನುವುದನ್ನು ಕ್ಷೇತ್ರದ ಜನತೆಗೆ ಬಿಂಬಿಸುವ ಸಾಧ್ಯತೆ ಇದೆ.
ಶುಕ್ರವಾರ ಮಹದೇವಪ್ಪ ಸರ್ಕಾರಿ ನಿವಾಸದಲ್ಲಿ ಸಿ.ವಿ. ರಾಮನ್ ನಗರದ ಕಾರ್ಯಕರ್ತರೊಂದಿಗಿನ ಸಭೆಯ ನಂತರ ಟಿ. ನರಸೀಪುರ ಕ್ಷೇತ್ರದ ಕಾರ್ಯಕರ್ತರೂ ಮಹದೇವಪ್ಪ ನಿವಾಸಕ್ಕೆ ಆಗಮಿಸಿ ಕ್ಷೇತ್ರ ತೊರೆಯದಂತೆ ಮನವಿ ಮಾಡಿಕೊಂಡರು. ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಮಹದೇವಪ್ಪ, ನಾನು ರಾಜ್ಯ ಮಟ್ಟದ ನಾಯಕ. ನನಗೆ ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ. ನಾನು ಸಿ.ವಿ. ರಾಮನ್ ನಗರದಲ್ಲಿ ಸ್ಪರ್ಧಿಸುವ ಬಗ್ಗೆ ಹೈ ಕಮಾಂಡ್ ನಿರ್ಧಾರ ಮಾಡಲಿದೆ. ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕಿದೆ. ಹೀಗಾಗಿ ಎಲ್ಲಾ ಕ್ಷೇತ್ರಗಳು ನಮಗೆ ಮುಖ್ಯ ಎಂದರು ಸಿ.ವಿ. ರಾಮನ್ ನಗರದಲ್ಲಿ ಫ್ಲೆಕ್ಸ್‌ಗಳ ಗೊಂದಲವಿಲ್ಲ. ಮೊದಲಿನಿಂದಲೂ ಎಲ್ಲಾ ಕ್ಷೇತ್ರಗಳಲ್ಲಿಯೂ ನನ್ನ ಫ್ಲೆಕ್ಸ್‌ಗಳನ್ನು ಹಾಕುತ್ತಾರೆ. ಹಾಗಂತ ಎಲ್ಲ ಕಡೆ ಸ್ಪರ್ಧಿಸುತ್ತೇನೆ ಎಂದು ಅರ್ಥವಲ್ಲಾ. ಸಿ.ವಿ. ರಾಮನ್ ನಗರದಲ್ಲಿಯೂ ಪಕ್ಷ ಹಾಗೂ ಸರ್ಕಾರದ ಕೆಲಸಗಳು ನಡೆಯಲಿವೆ. ಬರುವ ದಿನಗಳಲ್ಲಿ ಅಲ್ಲಿಗೂ ಹೋಗುತ್ತೇನೆ ಎಂದು ಹೇಳಿದರು.
2013 ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಪಿ. ರಮೇಶ್ ಕೂಡ ಸಿ.ವಿ. ರಾಮನ್ ನಗರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಮಹದೇವಪ್ಪ ಅವರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.